ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಕಶ ಸದ್ದು ಹೊರಡಿಸುವ ಸೈಲೆನ್ಸರ್‌ ಕಿತ್ತು ಹಾಕಿದ ಪೊಲೀಸರು

ಮುಂದೆ ಉಪಯೋಗವಾಗದಂತೆ ಸೈಲೆನ್ಸ್ರರ್‌ಗಳನ್ನು ನಜ್ಜುಗುಜ್ಜುಗೊಳಿಸಿದ ಜೆಸಿಬಿ ಯಂತ್ರ
Last Updated 4 ಜೂನ್ 2019, 8:34 IST
ಅಕ್ಷರ ಗಾತ್ರ

ದಾವಣಗೆರೆ: ಮೂಲ ಸೈಲೆನ್ಸರ್‌ ಬದಲಾಯಿಸಿ ಕರ್ಕಶ ಸೈಲೆನ್ಸರ್‌ಗಳನ್ನು ಅಳವಡಿಸಿರುವ ಬೈಕ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಬಡಾವಣೆ ಪೊಲೀಸ್‌ ಠಾಣೆಯ ಆವರಣದಲ್ಲಿ ಅದರ ಸೈಲೆನ್ಸರ್‌ ಕಿತ್ತುಹಾಕಿ, ಅದರ ಮೇಲೆ ಜೆಸಿಬಿ ಹರಿಸಿ ನಜ್ಜುಗುಜ್ಜುಗೊಳಿಸಿದರು. ಬೈಕ್‌ ಮಾಲೀಕರಿಗೆ ದಂಡ ವಿಧಿಸಿ ಕಳುಹಿಸಿದರು.

ಎಸ್‌ಪಿ ಆರ್‌. ಚೇತನ್‌ ಅವರ ಸೂಚನೆಯಂತೆ ಡಿವೈಎಸ್‌ಪಿ ಎಸ್‌.ಎಂ. ನಾಗರಾಜ್‌, ಸಿಪಿಐ ಎ.ಆನಂದ್‌, ಪಿಎಸ್‌ಐ ವೀರಬಸಪ್ಪ ಕುಸಲಾಪುರ, ದಕ್ಷಿಣ ಸಂಚಾರ ಪಿಎಸ್ಐ ಹನುಮಂತಪ್ಪ ಎಂ. ಶಿರಿಹಳ್ಳಿ ನೇತೃತ್ವದಲ್ಲಿ ಸೋಮವಾರ 22 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆರ್‌ಟಿಒ ಕಚೇರಿಯಿಂದ ಮೋಟರ್‌ ವೆಹಿಕಲ್‌ ಇನ್‌ಸ್ಪೆಕ್ಟರ್‌ ಅವರನ್ನು ಕರೆಸಿ ಟೆಕ್ನಿಶಿಯನ್‌ ಮೂಲಕ ಸೈಲೆನ್ಸರ್‌ ಪರಿಶೀಲಿಸಲಾಯಿತು.

ಕರ್ಕಶ ಸೈಲೆನ್ಸರ್‌ಗಳನ್ನು ಕಿತ್ತು ಸಾಲಾಗಿ ಜೋಡಿಸಲಾಯಿತು. ಬಳಿಕ ಜೆಸಿಬಿ ಮೂಲಕ ನಾಶಗೊಳಿಸಲಾಯಿತು.

ಗ್ಯಾರೇಜ್‌ನವರಿಗೂ ಎಚ್ಚರಿಕೆ: ‘ನಗರದ ಕೆಲವು ಗ್ಯಾರೇಜ್‌ಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದೇವೆ. ಸೈಲೆನ್ಸರ್‌ ಆಲ್ಟ್ರೇಶನ್‌ ಮಾಡುವುದು ಕಾನೂನು ಬಾಹಿರ ಎಂದು ತಿಳಿಸಿದ್ದೇವೆ. ಬೈಕ್‌ ಸವಾರರೇ ಬೇರೆಡೆಯಿಂದ ತರಿಸಿ, ಕೆಲವು ಬಾರಿ ಆನ್‌ಲೈನ್‌ ಮೂಲಕ ತರಿಸಿರುತ್ತಾರೆ. ಇಲ್ಲಿ ತಂದಾಗ ಜೋಡಿಸಿದ್ದಾಗಿ ಗ್ಯಾರೇಜ್‌ನವರು ತಿಳಿಸಿದ್ದಾರೆ. ಹಾಗೆ ತಂದರೂ ಜೋಡಿಸಬೇಡಿ ಎಂದು ತಿಳಿಸಿದ್ದೇವೆ. ಬದಲಿ ಸೈಲೆನ್ಸರ್‌ ಜೋಡಿಸಿರುವ ಗ್ಯಾರೇಜ್‌ ಹೆಸರನ್ನು ಸವಾರರಿಂದ ತಿಳಿದುಕೊಂಡು ಮುಂದೆ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದೇವೆ’ ಎಂದು ಡಿವೈಎಸ್‌ಪಿ ನಾಗರಾಜ್‌ ತಿಳಿಸಿದರು.

ವಿದ್ಯಾರ್ಥಿಗಳಿಗೆ ಕಲಿಕೆಗೆ ತೊಂದರೆ ಆಗುವ ರೀತಿಯಲ್ಲಿ ಶಾಲಾ ಕಾಲೇಜಿಗಳ ಬಳಿ ಕರ್ಕಶ ಸದ್ದು ಮಾಡಿಕೊಂಡು ಬೈಕ್ ಓಡಿಸುವುದು, ಆಸ್ಪತ್ರೆಯಲ್ಲಿ ರೋಗಿಗಳಿಗೆ, ಮನೆಗಳಲ್ಲಿ ವೃದ್ಧರಿಗೆ ಕರ್ಕಶ ಸದ್ದಿನ ಮೂಲಕ ತೊಂದರೆ ಉಂಟು ಮಾಡುವುದರ ಬಗ್ಗೆ ದೂರುಗಳು ಬಂದಿದ್ದವು. ಅದರಂತೆ ಕ್ರಮ ಕೈಗೊಂಡಿದ್ದೇವೆ. ಇನ್ನೂ ಹಲವು ಬೈಕ್‌ಗಳಲ್ಲಿ ಇಂಥ ಸೈಲೆನ್ಸರ್‌ಗಳಿವೆ. ಅವುಗಳನ್ನು ಅದರ ಸವಾರರೇ ಕಿತ್ತುಹಾಕಬೇಕು. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದರು.

ಪದೇ ಪದೇ ನಿಯಮ ಉಲ್ಲಂಘನೆ ಮಾಡಿದರೆ ಅಂಥ ಬೈಕ್‌ಗಳ ದಾಖಲೆಗಳನ್ನು ಹಾಗೂ ಆ ಸವಾರರ ಚಾಲನಾ ಪರವಾನಗಿಯನ್ನು ಅಮಾನತ್ತು ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT