ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌’ ಕಾಮಗಾರಿ ವಿಳಂಬ: ಸಂಸದ ಸಿದ್ದೇಶ್ವರ ಕಿಡಿ

Last Updated 2 ಮಾರ್ಚ್ 2020, 13:34 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿ ವಿಳಂಬವಾಗುತ್ತಿರುವುದು ಹಾಗೂ ಕಳಪೆಯಾಗಿರುವುದಕ್ಕೆ ಸಿಡಿಮಿಡಿಗೊಂಡ ಸಂಸದ ಜಿ.ಎಂ. ಸಿದ್ದೇಶ್ವರ, ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಹಲವು ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮೇಯರ್‌ ಹಾಗೂ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಂಸದರು ನಿರ್ದೇಶನ ನೀಡಿದರು.

‘ಸ್ಮಾರ್ಟ್‌ ಸಿಟಿ’ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರೊಂದಿಗೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಮಾರ್ಟ್‌ ರಸ್ತೆ, ಮಳೆನೀರು ಚರಡಿ ಸೇರಿದಂತೆ ಹಲವು ಕಾಮಗಾರಿ ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಇನ್ನೂ ಕೆಲಸ ಮುಗಿದಿಲ್ಲ. ಸಾರ್ವಜನಿಕರ ದುಡ್ಡು ಪೋಲಾಗುತ್ತಿದೆ ಎಂದು ಜನ ನನಗೆ ದೂರು ನೀಡುತ್ತಿದ್ದಾರೆ. ನಾವು ಸ್ಮಾರ್ಟ್‌ ಸಿಟಿಗೆ ಹಣ ತಂದಿದ್ದೇವೆ. ನೀವು ಸರಿಯಾಗಿ ಕೆಲಸ ಮಾಡಿಸದೇ ಇರುವುದರಿಂದ ನಾವು ಕಳಂಕ ಹೊತ್ತಿಕೊಳ್ಳುವಂತಾಗಿದೆ. ಭ್ರಷ್ಟಾಚಾರದಲ್ಲಿ ನನ್ನ ಹೆಸರನ್ನೂ ತಳಕು ಹಾಕುತ್ತಿದ್ದಾರೆ’ ಎಂದು ಹೇಳುವ ಮೂಲಕ ಸಂಸದರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

‘ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ₹ 1,000 ಕೋಟಿ ಅನುದಾನದಲ್ಲಿ ನಗರವನ್ನು ಸುಂದರವಾಗಿ ಮಾಡಲು ಸಾಧ್ಯವಿತ್ತು. ಕಾಮಗಾರಿಗಳಲ್ಲಿ ದುದ್ದು ತಿನ್ನುತ್ತಿದ್ದರೆ ಇನ್ನಷ್ಟು ಸಾವಿರ ಕೋಟಿ ರೂಪಾಯಿ ಅನುದಾನ ತಂದರೂ ನಗರದ ಅಭಿವೃದ್ಧಿ ಆಗುವುದಿಲ್ಲ’ ಎಂದು ಸಿದ್ದೇಶ್ವರ ಗುಡುಗಿದರು.

ವ್ಯಾಯಾಮ ಸಲಕರಣೆ ಪರಿಶೀಲನೆಗೆ ಸೂಚನೆ: ‘₹ 3 ಕೋಟಿ ವೆಚ್ಚದಲ್ಲಿ ನಗರದ 37 ಕಡೆ ವ್ಯಾಯಾಮ ಸಲಕರಣೆ ಹಾಕುತ್ತಿರುವುದಾಗಿ ಅಧಿಕಾರಿಗಳು ನೀಡಿದ ಮಾಹಿತಿಯಿಂದ ತೃಪ್ತಿಗೊಳ್ಳದ ಸಂಸದರು, ಎಲ್ಲೆಲ್ಲಿ ಉಪಕರಣ ಅಳವಡಿಸಲಾಗಿದೆ? ಅವುಗಳಿಗೆ ಎಷ್ಟು ಖರ್ಚು ಆಗಿದೆ ಎಂಬ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡಿದೆ. ಮೇಯರ್‌ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ. ವ್ಯತ್ಯಾಸವಾಗಿರುವುದು ಕಂಡುಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಎರಡು ವರ್ಷಗಳ ಹಿಂದೆಯೇ ಮಂಡಿಪೇಟೆ, ಎಂ.ಜಿ. ರಸ್ತೆಯಲ್ಲಿ ‘ಸ್ಮಾರ್ಟ್‌ ರಸ್ತೆ’ ಕಾಮಗಾರಿ ಮುಗಿಯಬೇಕಾಗಿತ್ತು. ನಾಲ್ಕು ಬಾರಿ ಕಾಮಗಾರಿಯ ಅವಧಿಯನ್ನು ವಿಸ್ತರಿಸಲಾಗಿದೆ. ನನ್ನ ಜೀವನದಲ್ಲೇ ಇದೇ ಮೊದಲ ಬಾರಿಗೆ ಎಂಜಿನಿಯರ್‌ಗಳು ಈ ರೀತಿ ಅವಧಿ ವಿಸ್ತರಿಸಿಕೊಡುತ್ತಿರುವುದನ್ನು ನೋಡುತ್ತಿದ್ದೇನೆ’ ಎಂದು ಸಂಸದರು ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ‘ಮೇ ಅಂತ್ಯದೊಳಗೆ ಸ್ಮಾರ್ಟ್‌ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ದಂಡ ವಸೂಲಿ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಚೌಕಿಪೇಟೆ ರಸ್ತೆಯಲ್ಲಿ ಕೆಲವೆಡೆ ಯುಜಿಡಿಯ ಮ್ಯಾನ್‌ಹೋಲ್‌ ರಸ್ತೆಗಿಂತಲೂ ಮೇಲಕ್ಕೆ ಬಂದಿದೆ. ಇದು ಸ್ಮಾರ್ಟ್‌ ಸಿಟಿಗೆ ಕಳಂಕ’ ಎಂದು ಸದಸ್ಯ ಚಮನ್‌ಸಾಬ್‌ ಅಸಮಾಧಾನ ವ್ಯಕ್ತಪಡಿಸಿದರು.

ಮೇಯರ್‌ ಬಿ.ಜಿ. ಅಜಯಕುಮಾರ್‌, ‘ಆನ್‌ಲೈನ್‌ ಟೆಂಡರ್‌ ಕರೆಯುತ್ತಿರುವುದರಿಂದ ಯಾವುದೋ ರಾಜ್ಯದ ಗುತ್ತಿಗೆದಾರರು ಕೆಲಸ ಪಡೆಯುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ವಿವಿಧ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದ ಸಂಸದರು, ‘ಇನ್ನು ಮುಂದಾದರೂ ಸರಿಯಾಗಿ ಕೆಲಸ ಮಾಡಿ. ಎರಡು ತಿಂಗಳಿಗೊಮ್ಮೆ ಮೇಯರ್‌ ನೇತೃತ್ವದಲ್ಲಿ ಸ್ಮಾರ್ಟ್‌ ಸಿಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲನೆ ನಡೆಸಿ’ ಎಂದು ತಾಕೀತು ಮಾಡಿದರು.

ಉಪ ಮೇಯರ್‌ ಸೌಮ್ಯಾ ನರೇಂದ್ರಕುಮಾರ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮುಖ್ಯ ಕಾರ್ಯಪಾಲಕ ಎಂಜಿನಿಯರ್‌ ಎಂ. ಸತೀಶ್‌ ಹಾಗೂ ಪಾಲಿಕೆ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಡಿಜಿಟಲ್‌ ಬೋರ್ಡ್‌: ₹ 3 ಕೋಟಿ ವೆಚ್ಚಕ್ಕೆ ಆಕ್ಷೇಪ

ನಗರದಲ್ಲಿ 10 ಕಡೆ ಡಿಜಿಟಲ್‌ ಡಿಸ್ಪೇ ಬೋರ್ಡ್‌ ಹಾಕಲು ₹ 3 ಕೋಟಿ ವೆಚ್ಚ ಮಾಡುತ್ತಿರುವುದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

‘ಒಂದು ಡಿಜಿಟಲ್‌ ಬೋರ್ಡ್‌ಗೆ ₹ 30 ಲಕ್ಷ ವೆಚ್ಚಾಗಲಿದೆ. ಇದರಲ್ಲಿ ₹ 18 ಲಕ್ಷ ಡಿಜಿಟಲ್‌ ಬೋರ್ಡ್‌ ಅಳವಡಿಕೆಗೆ ಹಾಗೂ ಐದು ವರ್ಷಗಳ ನಿರ್ವಹಣೆಗಾಗಿ ₹ 12 ಲಕ್ಷ ನಿಗದಿಗೊಳಿಸಲಾಗಿದೆ. ಈ ಬೋರ್ಡ್‌ಗಳಲ್ಲಿ ಸರ್ಕಾರಿ ಯೋಜನೆಗಳ ವಿವರಗಳನ್ನು ಇರದರಲ್ಲಿ ಪ್ರದರ್ಶನ ಮಾಡಲಾಗುತ್ತದೆ’ ಎಂದು ಸ್ಮಾರ್ಟ್‌ ಸಿಟಿಯ ಡಿಜಿಎಂ ಮಾಹಿತಿ ನೀಡಿದರು.

ಪಾಲಿಕೆ ಸದಸ್ಯ ಪ್ರಸನ್ನಕುಮಾರ್‌, ‘ಬೋರ್ಡ್‌ನಲ್ಲಿ ಅಕ್ಷರಗಳು ಸರಿಯಾಗಿ ಕಾಣಿಸುತ್ತಿಲ್ಲ. ಜೊತೆಗೆ ಪ್ರಯಾಣಿಕರಿಗೆ ಸರಿಯಾಗಿ ಕಾಣದ ಪ್ರದೇಶಗಳಲ್ಲಿ ಅಳವಡಿಸಲಾಗುತ್ತಿದೆ. ಅತ್ಯಾಧುನಿಕ ಬೋರ್ಡ್‌ ನಿರ್ವಹಣೆಗೇ ₹ 12 ಲಕ್ಷ ನೀಡುತ್ತಿರುವುದು ಸಂದೇಹಕ್ಕೆ ಎಡೆಮಾಡಿಕೊಡುತ್ತದೆ’ ಎಂದು ಆಕ್ಷೇಪಿಸಿದರು.

‘₹ 30 ಲಕ್ಷ ವೆಚ್ಚ ಮಾಡುವ ಡಿಜಿಟಲ್‌ ಬೋರ್ಡ್‌ನಲ್ಲಿ ಅಂತಹ ವಿಶೇಷವೇನಿದೆ? ಇದು ಮೇಲ್ನೋಟಕ್ಕೆ ಬೋಗಸ್‌ ಕೆಲಸದಂತೆ ಕಂಡುಬರುತ್ತದೆ. ಸದ್ಯಕ್ಕೆ ಹಣ ಪಾವತಿಸಬೇಡಿ. ಮೇಯರ್‌ ಹಾಗೂ ಅಧಿಕಾರಿಗಳು ಹೋಗಿ ಸ್ಥಳ ಪರಿಶೀಲಿಸಿ ವರದಿ ನೀಡಬೇಕು’ ಎಂದು ಸಂಸದರು ಸೂಚಿಸಿದರು.

ಇ–ಶೌಚಾಲಯ ಅವ್ಯವಸ್ಥೆಗೆ ಆಕ್ರೋಶ

ನಗರದಲ್ಲಿ ಅಳವಡಿಸುತ್ತಿರುವ ಇ–ಶೌಚಾಲಯಗಳ ನಿರ್ವಹಣೆ ಮಾಡದೇ ಇರುವುದರಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ಇ–ಶೌಚಾಲಯಕ್ಕೆ ₹ 14 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಮುಂಜಾನೆ ವಾಯುವಿಹಾರಕ್ಕೆ ಹೋದವರಿಗೆ ಶೌಚಾಲಯ ಬಳಸಿಕೊಳ್ಳಲು ಆಗುತ್ತಿಲ್ಲ. ಇದರ ಬದಲು ಸುಲಭ ಶೌಚಾಲಯ ನಿರ್ಮಿಸಿದರೆ ಕಡಿಮೆ ಹಣದಲ್ಲಿ ಒಬ್ಬ ವ್ಯಕ್ತಿಗೆ ಕೆಲಸವನ್ನಾದರೂ ಕೊಟ್ಟಂತಾಗುತ್ತಿದೆ’ ಎಂದು ಪಾಲಿಕೆ ಸದಸ್ಯ ಪ್ರಸನ್ನಕುಮಾರ್‌ ಆಕ್ಷೇಪಿಸಿದರು.

ಎರಡನೇ ಹಂತದಲ್ಲಿ ₹ 6.61 ಕೋಟಿ ವೆಚ್ಚದಲ್ಲಿ 37 ಕಡೆ ಇ–ಶೌಚಾಲಯ ನಿರ್ಮಿಸುತ್ತಿರುವ ಬಗ್ಗೆ ಅಧಿಕಾರಿ ಮಾಹಿತಿ ನೀಡಿದಾಗ, ಇಂಥ ಯೋಜನೆಗಳನ್ನು ಕೈಬಿಡುವುದು ಒಳಿತು ಎಂಬ ಅಭಿಪ್ರಾಯ ಕೇಳಿಬಂತು.

‘ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಗುತ್ತಿಗೆದಾರರ ಠೇವಣಿ ಜಪ್ತಿ ಮಾಡಿ. ಪಾಲಿಕೆ ಸದಸ್ಯರೂ ತಮ್ಮ ವಾರ್ಡ್‌ಗಳಲ್ಲಿ ಶೌಚಾಲಯದ ಸ್ಥಿತಿಗತಿಯ ಬಗ್ಗೆ ನಿಗಾ ವಹಿಸಬೇಕು’ ಎಂದು ಸಂಸದರು ಸೂಚಿಸಿದರು.

‘ಇ–ಶೌಚಾಲಯದ ಬಗ್ಗೆ ದೂರುಗಳು ಕೇಳಿಬರುತ್ತಿರುವುದರಿಂದ ಮುಂದೆ ಇವುಗಳನ್ನು ನಿರ್ಮಿಸದೇ ಇರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ‘ಸ್ಮಾರ್ಟ್‌ ಸಿಟಿ’ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT