ಶುಕ್ರವಾರ, ಜುಲೈ 1, 2022
25 °C
ಜಿಲ್ಲೆಯಲ್ಲೇ ಮೊದಲ ಸೈನಿಕ ಹುಳು ದೇವಿಕೆರೆಯಲ್ಲಿ ಪತ್ತೆ

ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳುಬಾಧೆ; ಆತಂಕದಲ್ಲಿ ರೈತರು

ಡಿ. ಶ್ರೀನಿವಾಸ್‌ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೊಳ ಬೆಳೆಯನ್ನು ತಿಂದು ತೇಗಿದ್ದ, ಸೈನಿಕ ಹುಳು ಅಥವಾ ಲದ್ದಿ ಹುಳು ತಾಲ್ಲೂಕಿನ ದೇವಿಕೆರೆ ಗ್ರಾಮದ ಹೊಲದಲ್ಲಿ ಮತ್ತೆ ಕಾಣಿಸಿಕೊಂಡಿದೆ.

ಜಿಲ್ಲೆಯ್ಲಲೇ ಅತಿಹೆಚ್ಚು 32 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯುವ ತಾಲ್ಲೂಕಿನ ರೈತರಲ್ಲಿ ಇದು ಆತಂಕ ಮೂಡಿಸಿದೆ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ್ದರಿಂದ ಸ್ಫೂರ್ತಿಗೊಂಡ ರೈತರು ಮೇ ತಿಂಗಳಲ್ಲೇ ಅವಧಿಪೂರ್ವ ಬಿತ್ತನೆ ಮಾಡಿದ್ದಾರೆ. ಈಗಾಗಲೇ 12,100 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಸುಮಾರು 50 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ.

ಕೆಲವು ವರ್ಷದ ಹಿಂದೆ ಸೈನಿಕ ಹುಳು ಮುತ್ತಿದ್ದ ಜಮೀನುಗಳಲ್ಲಿ ದಿನ ಬೆಳಗಾಗುವುದರೊಳಗೆ ನೂರಾರು ಎಕೆರೆಯಲ್ಲಿ ಮೆಕ್ಕೆಜೋಳದ ಎಲೆ ಮತ್ತು ಕಾಂಡ ತಿಂದಿದ್ದರಿಂದ ಇಡೀ ಹೊಲದಲ್ಲಿ ಅಸ್ತಿಪಂಜರದ ರೀತಿಯಲ್ಲಿ ಕಡ್ಡಿಗಳು ಮಾತ್ರ ಕಾಣುತ್ತಿದ್ದವು. ಯಾವುದೇ ಔಷಧ ಸಿಂಪಡಿಸಿದರೂ ನಿಯಂತ್ರಣ್ಕಕೆ ಸಿಗದ ಹುಳು ಬಾಧೆಯಿಂದ ಕೃಷಿ ಇಲಾಖೆ ಹಾಗೂ ಬೆಳೆಗಾಗರರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು.

ತಾಲ್ಲೂಕಿನಲ್ಲಿ ಈ ಬಾರಿ ಆರಂಭದಲ್ಲೇ ಸುಮಾರು 20ರಿಂದ 25 ದಿನಗಳ ಮೆಕ್ಕೆಜೋಳ ಸಸಿಯಲ್ಲಿ ಸೈನಿಕ ಹುಳು ಪ್ರತ್ತಕ್ಷವಾಗಿರುವುದರಿಂದ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರ ಹಾಗೂ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ರಾಜಶೇಖರ್, ಡಾ.ಸಣ್ಣಗೌಡ, ಡಾ.ಬಿ.ಒ. ಮಲ್ಲಿಕಾರ್ಜುನ ಗೌಡ, ಡಾ.ರಘುರಾಜ್ ಅವರು ತಾಲ್ಲೂಕಿನ ದೇವಿಕೆರೆ ಗ್ರಾಮದ ಸುತ್ತಲಿನ ಮೆಕ್ಕೆಜೋಳ ಜಮೀನುಗಳಿಗೆ
ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಜೂನ್ ತಿಂಗಳಲ್ಲಿ ಬಿತ್ತನೆ ಮಾಡುವ ಬದಲು ಮೇ ತಿಂಗಳಲ್ಲೇ ಅವಧಿಪೂರ್ವ ಬಿತ್ತನೆ ಮಾಡಿದ್ದರಿಂದ ಆರಂಭದಲ್ಲೇ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲೇ ಈ ವರ್ಷ ಇದೇ ಮೊದಲ ಪ್ರಕರಣವಾಗಿದೆ. ಸೈನಿಕ ಹುಳು ಪತ್ತೆಯಾದ ಬೆಳೆಗಳಿಗೆ 5 ಕೆ.ಜಿ. ಬೆಲ್ಲದ ಪುಡಿಯನ್ನು 10 ಲೀಟರ್ ನೀರಿನಲ್ಲಿ ಕರಗಿಸಿ, ಇದಕ್ಕೆ 200 ಗ್ರಾಂ ಥೈಯೋಡಿಕಾರ್ಬ್ ಕೀಟನಾಶಕವನ್ನು ಸೇರಿಸಿದ ಮಿಶ್ರಣವನ್ನು 50 ಕೆ.ಜಿ. ಭತ್ತದ ತೌಡಿನಲ್ಲಿ ಬೆರೆಸಿ ಮಿಶ್ರಣ ಮಾಡಿ ಗಾಳಿಯಾಡದಂತೆ 24 ತಾಸು ಚೀಲದಲ್ಲಿ ಕಟ್ಟಿಡಬೇಕು ಅಥವಾ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮುಚ್ಚಿಟ್ಟು ಕಳೆಯಲು ಬಿಡಬೇಕು. ನಂತರ ಸಂಜೆಯ ಸಮಯದಲ್ಲಿ ಈ ಮಿಶ್ರಣವನ್ನು ಮೆಕ್ಕೆಜೋಳ ಬೆಳೆಗೆ ಎರಚಬೇಕು’ ಎಂದು ವಿಜ್ಞಾನಿ ಡಾ.ಸಣ್ಣಗೌಡ ಸಲಹೆ ನೀಡಿದರು.

‘ಪ್ರತಿ ಲೀಟರ್ ನೀರಿಗೆ ಬೇವಿನೆಣ್ಣೆ 2 ಮಿಲಿ ಅಥವಾ 2 ಗ್ರಾಂ ಥೈಯೋಡಿ ಕಾರ್ಬ್ ಅಥವಾ ಕ್ಲೋರ್ ಆಂಟ್ರಿಪೋಲ್ 3 ಮಿಲಿ ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್ 4 ಗ್ರಾಂ ಮಿಶ್ರಣ ಮಾಡಿ ಮೆಕ್ಕೆಜೋಳದ ಸುಳಿಯಲ್ಲಿ ಔಷಧ ಸಿಂಪಡಿಸಬೇಕು ಎಂದು ವಿಜ್ಞಾನಿ ಡಾ. ರಾಜಶೇಖರ್ ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು, ಅಧಿಕಾರಿ ಅನಿಲ್ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು