ಹಿಂದೂಗಳು ಕಡಿಮೆಯಿರುವ ಪ್ರದೇಶದಲ್ಲಿ ಅಶಾಂತಿ: ಗಂಗಾಧರ ಕುಲಕರ್ಣಿ

7

ಹಿಂದೂಗಳು ಕಡಿಮೆಯಿರುವ ಪ್ರದೇಶದಲ್ಲಿ ಅಶಾಂತಿ: ಗಂಗಾಧರ ಕುಲಕರ್ಣಿ

Published:
Updated:
Deccan Herald

ದಾವಣಗೆರೆ: ಹಿಂದೂಗಳ ಸಂಖ್ಯೆ ಕಡಿಮೆ ಇರುವ ದೇಶದ ವಿವಿಧ ಕಡೆ ಅಶಾಂತಿ ಹೆಚ್ಚಾಗಿದೆ ಎಂದು ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

ನಗರದ ಅಪೂರ್ವ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬೈಠಕ್‌ ಉದ್ಘಾಟಿಸಿ ಅವರು ಮಾತನಾಡಿದರು.

ಕಾಶ್ಮೀರದಿಂದ 7 ಲಕ್ಷ ಹಿಂದೂಗಳನ್ನು ಹೊರದಬ್ಬಲಾಯಿತು. ಈಗ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಿದೆ. ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್‌ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಚೀನಾದ ಆಕ್ರಮಣ ಹೆಚ್ಚಾಗಿದೆ. ಅಕ್ರಮ ಬಾಂಗ್ಲಾ ವಲಸಿಗರಿಂದಾಗಿ ಅಸ್ಸಾಂನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದ ಅವಧಿಯಿಂದ ಲೆಕ್ಕ ಹಾಕಿದರೆ ಅಲ್ಲಿನ ಜನಸಂಖ್ಯೆ 2.40 ಕೋಟಿ ಕಡಿಮೆಯಿದೆ. ಈ ಸಂಗತಿಯನ್ನು ಬಾಂಗ್ಲಾದೇಶದ ಸರ್ಕಾರವೇ ಬಹಿರಂಗಪಡಿಸಿದೆ. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಯಾರೂ ಬಾಂಗ್ಲಾದೇಶದಿಂದ ವಲಸೆ ಬಂದಿಲ್ಲ. ದೇಶದಲ್ಲಿರುವ ಎಲ್ಲರೂ ಭಾರತೀಯ ಪ್ರಜೆಗಳು’ ಎಂದು ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.

ಒಂದು ಅಂದಾಜಿನ ಪ್ರಕಾರ ಸುಮಾರು 5 ಕೋಟಿ ಮಂದಿ ಬಾಂಗ್ಲಾದಿಂದ ವಲಸೆ ಬಂದಿದ್ದಾರೆ. ಅವರೆಲ್ಲಾ ನಮ್ಮ ತೆರಿಗೆಯ ಹಣದಿಂದ ಸೌಲಭ್ಯ ಪಡೆಯುತ್ತಿದ್ದಾರೆ. ಅಲ್ಲದೇ, ರಕ್ಷಣೆ ಪಡೆದುಕೊಂಡಿದ್ದಾರೆ. ಆದರೆ, ದೇಶದ ರಕ್ಷಣೆಗೆ ಕಂಟಕವಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾತ್ಯತೀತತೆಯಿಂದ ಹಿಂದೂಗಳಿಗೆ ಲಾಭ ಇಲ್ಲ: ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು 70 ವರ್ಷಗಳು ಕಳೆದಿವೆ. ಆದರೆ, ಜಾತ್ಯತೀತ ವ್ಯವಸ್ಥೆಯಿಂದಾಗಿ ಹಿಂದೂಗಳಿಗೆ ಯಾವ ಲಾಭವೂ ಆಗಿಲ್ಲ. ಸ್ವಾತಂತ್ರ್ಯ ಸಂದರ್ಭದಲ್ಲಿ ಶೇ 87ರಷ್ಟಿದ್ದ ಹಿಂದೂಗಳ ಸಂಖ್ಯೆ ಶೇ 80ಕ್ಕೆ ಕುಸಿದಿದೆ. ಶೇ 4ರಷ್ಟಿದ್ದ ಮುಸ್ಲಿಮರ ಸಂಖ್ಯೆ ಶೇ 16ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕ್ರಿಶ್ಚಿಯನ್ನರ ಸಂಖ್ಯೆ ಶೇ 1ರಿಂದ ಶೇ 4ಕ್ಕೆ ಹೆಚ್ಚಿದೆ. ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಮುಸ್ಲಿಮರ ಸಂಖ್ಯೆ ಶೇ 98ಕ್ಕೆ ಏರಿಕೆಯಾಗಿದ್ದು, ಅದನ್ನು ಇಸ್ಲಾಮಿಕ್‌ ಜಿಲ್ಲೆ ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲಿನ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಂಪನಿಗಳು, ಸರ್ಕಾರಿ ಕಚೇರಿಗಳಲ್ಲಿ ವಾರದ ರಜೆಯನ್ನು ಶುಕ್ರವಾರ ನೀಡಲಾಗುತ್ತಿದೆ. ಇನ್ನು ಬೆಂಗಳೂರಿನ ಶಿವಾಜಿನಗರ, ಗೌರಿಪಾಳ್ಯಗಳಿಂದ ಹಿಂದೂಗಳನ್ನು ಹೊರ ಹಾಕಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೂಗಳ ಮೇಲೆ ಆಗುತ್ತಿರುವ ದಬ್ಬಾಳಿಕೆ ಬಗ್ಗೆ ಮಾತನಾಡಿದರೆ, ಅದು ಕೋಮುವಾದ. ವಿಚಾರವಾದಿಗಳು, ಬುದ್ಧಿಜೀವಿಗಳು ಏನು ಮಾತನಾಡಿದರೂ, ಅದು ಅಭಿವ್ಯಕ್ತಿ ಸ್ವಾತಂತ್ರ್ಯ. ಚೀನಾ ಪ್ರಾಯೋಜಿತ ನಕ್ಸಲಿಸಂ, ವಿಚಾರವಾದದಿಂದ ದೇಶದ ಸಂಸ್ಕೃತಿಗೆ ಅವಮಾನವಾಗುತ್ತಿದೆ. ದೇಶದ ಸಂಸ್ಕೃತಿ ರಕ್ಷಿಸುವುದಕ್ಕಾಗಿ ಹೋರಾಡುವುದೇ ಸಂಘಟನೆಯ ಉದ್ದೇಶ. ಇದಕ್ಕಾಗಿ ಶ್ರೀರಾಮಸೇನೆ ಯಾವ ತ್ಯಾಗಕ್ಕೂ ಸಿದ್ಧವಿದೆ ಎಂದರು.

ಸಂಘಟನೆಯ ಪದಾಧಿಕಾರಿಗಳಾದ ಪರಶುರಾಮ್‌ ನಡುಮನಿ, ಮಹಾಲಿಂಗಣ್ಣ ಗುಂಜಗಾವಿ,
ಪೃಥ್ವಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !