ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ. 29ರಿಂದ ಶ್ರೀಶೈಲಶ್ರೀ ಪಾದಯಾತ್ರೆ: ಶಿವಾಚಾರ್ಯ ಸ್ವಾಮೀಜಿ

ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದ್ವಾದಶ ಪೀಠಾರೋಹಣ
Last Updated 9 ಜುಲೈ 2022, 6:12 IST
ಅಕ್ಷರ ಗಾತ್ರ

ದಾವಣಗೆರೆ: ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮಸುವರ್ಣ ಮಹೋತ್ಸವ ಅಂಗವಾಗಿ ಅಕ್ಟೋಬರ್‌ 29ರಿಂದ 2023ರ ಜನವರಿ 15ರವರೆಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಡೂರು ಕ್ಷೇತ್ರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಪೀಠಾರೋಹಣ ಮಾಡಿ 12 ವರ್ಷಗಳಾದ ಸಂಭ್ರಮವನ್ನು ಭಕ್ತರ ಅಪೇಕ್ಷೆಯಂತೆ ವಿನೂತನವಾಗಿ ಆಚರಿಸಲಾಗುವುದು. ಅಕ್ಟೋಬರ್‌ 29ರಿಂದ ಸಮಾಜಮುಖಿ, ಪರಿಸರ ಜಾಗೃತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಜನರು ಪ್ರತಿವರ್ಷ ಬರುತ್ತಾರೆ. ಅವರ ಕಷ್ಟಗಳನ್ನು ಅರಿಯಲು ನಾವೂ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ತಿಳಿಸಿದರು.

ಜನವರಿ 15ರಂದು ಶ್ರೀಶೈಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು. ಯಡೂರು ಕ್ಷೇತ್ರದಿಂದ ಶ್ರೀಶೈಲದವರೆಗೆ ನಡೆಯುವ ಪಾದಯಾತ್ರೆಯು ವಿವಿಧ ಗ್ರಾಮಗಳು, ನಗರಗಳ ಮೂಲಕ ಸಾಗಲಿದ್ದು, ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ದುಶ್ಚಟಗಳ ದಾಸರಾಗಿರುವವರಿಂದ ‘ದುಶ್ಚಟಗಳನ್ನು ಜೋಳಿಗೆಗೆ ಹಾಕಿ’ ಎಂಬ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದು, ವ್ಯಸನಮುಕ್ತ ಸಮಾಜಕ್ಕಾಗಿ ಎಲ್ಲ ಮಠಾಧೀಶರು ಕೈಜೋಡಿಸಲಿದ್ದಾರೆ ಎಂದು ವಿವರಿಸಿದರು.

ಪಾದಯಾತ್ರೆಯ ಮಾರ್ಗದ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಡಲಾಗುವುದು. ಈಗಾಗಲೇ ಕಾರ್ಯಕ್ರಮಕ್ಕೆ ಯಡೂರಿನಲ್ಲಿ ಚಾಲನೆ ನೀಡಲಾಗಿದೆ. ಲಿಂಗದೀಕ್ಷೆ ಪಡೆಯುವವರಿಗೆ ಜಾತ್ಯತೀತವಾಗಿ ಲಿಂಗಧಾರಣೆ ಮಾಡಲಾಗುವುದು. ಇದಕ್ಕಾಗಿ 20,000 ಲಿಂಗಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಡಿಸೆಂಬರ್‌ 1ರಿಂದ 2023ರ ಜನವರಿ 10ರವರೆಗೆ ಧಾರ್ಮಿಕ ಅನುಷ್ಠಾನ ನಡೆಯಲಿದ್ದು, ಲೋಕಕಲ್ಯಾಣಕ್ಕಾಗಿ ರುದ್ರಹೋಮ, ಇಷ್ಟಲಿಂಗ ಪೂಜೆ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನವರಿ 10ರಿಂದ 15ರವರೆಗೆ ರಾಷ್ಟ್ರೀಯ ವೇದಾಂತ ಸಮ್ಮೇಳನ,ರಾಷ್ಟ್ರೀಯ ವಚನ ಸಮ್ಮೇಳನ,ರಾಷ್ಟ್ರೀಯ ವೀರಶೈವಾಗಮ ಸಮಾವೇಶ, ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾ ಅಧಿವೇಶನ, ಉಚಿತ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದರು.

ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಜಮಖಂಡಿಯ ಗೌರಿಶಂಕರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಅಥಣಿ ವೀರಣ್ಣ, ಮುಖಂಡರಾದ ದೇವರಮನೆ ಶಿವಕುಮಾರ್‌, ಶ್ರೀನಿವಾಸ ದಾಸಕರಿಯಪ್ಪ, ಮಹಾದೇವಪ್ಪ ಗೌಡ, ಪ್ರಶಾಂತ್, ಮರುಗೇಶ್‌ ಎನ್‌.ಎಂ., ಪರಮೇಶ್‌ ಕೆ.ಜಿ. ಇದ್ದರು.

‘ಪಂಚಪೀಠಾಧೀಶರೂ ಪಾದಯಾತ್ರೆ ಮಾಡಬಲ್ಲರು: ಸ್ವಾಮೀಜಿ
‘ಪಂಚಪೀಠದ ಪೀಠಾಧಿಪತಿಗಳು ಅಡ್ಡಪಲ್ಲಕ್ಕಿಯಲ್ಲಿ ಮಾತ್ರ ಬರುತ್ತಾರೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಪೀಠಾಧಿಪತಿಗಳೂ ಪಾದಯಾತ್ರೆಯನ್ನು ಮಾಡಬಲ್ಲರು ಎಂಬುದನ್ನು ತಿಳಿಸುವ ಸಲುವಾಗಿಯೇ ನಾವು ಪಾದಯಾತ್ರೆ ಮಾಡುತ್ತಿದ್ದೇವೆ’ ಎಂದು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಭಿವೃದ್ಧಿ ಕಾರ್ಯಕ್ರಮ: ‘ಶ್ರೀಶೈಲ ಪೀಠದಲ್ಲಿ ಜಾಗದ ಕೊರತೆಯಿಂದ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗಲಿಲ್ಲ ಎಂಬ ಬೇಸರ ಇತ್ತು. ಅದನ್ನು ನಿವಾರಿಸಲು ಈಗ ಸಂಕಲ್ಪ ಮಾಡಿದ್ದು, ಆಂಧ್ರಪ್ರದೇಶ ಸರ್ಕಾರ ಶ್ರೀಪೀಠದ ಅಭಿವೃದ್ಧಿಗೆ 10 ಎಕರೆ ಜಾಗ ಮಂಜೂರು ಮಾಡಿದೆ. ಮೊದಲ ಹಂತದಲ್ಲಿ 5 ಎಕರೆ ಜಾಗದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಕಂಬಿ ಮಂಟಪ, ಭಕ್ತರ ಅನುಕೂಲಕ್ಕಾಗಿ 500 ಕೊಠಡಿಗಳ ಯಾತ್ರಿ ನಿವಾಸ, 100 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ಹಾಗೂ ಗುರುಕುಲ ಮಾದರಿಯ ವಸತಿ ಶಾಲೆ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಶ್ರಾವಣ ಮಾಸದಲ್ಲಿ ಕಂಬಿ ಮಂಟಪ ಹಾಗೂ ಯಾತ್ರಿ ನಿವಾಸಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು’ ಎಂದು ಸ್ವಾಮೀಜಿ ವಿವರಿಸಿದರು.

ಇಬ್ಬರು ವ್ಯಕ್ತಿಗಳ ನಡುವಿನ ಗಲಾಟೆ
‘ಶ್ರೀಶೈಲ ಪೀಠದಲ್ಲಿ ನಡೆದ ತೆಲುಗು ಭಾಷಿಕರು ಹಾಗೂ ಕನ್ನಡಿಗರ ನಡುವಿನ ಗಲಭೆ ಎರಡು ಭಾಷೆಗಳ ನಡುವೆ ನಡೆದ ಗಲಭೆ ಎಂದು ಪರಿಗಣಿಸದೇ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಗಲಾಟೆ ಎಂದು ಪರಿಗಣಿಸಬೇಕು. ಗಲಭೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ರಾತ್ರಿಯಿಂದ ಬೆಳಗಿನ ಜಾವದವರೆಗೂ ಅಲ್ಲಿಯೇ ಇದ್ದು, ಎರಡು ಗುಂಪುಗಳನ್ನು ಸಮಾಧಾನ ಪಡಿಸಿದ್ದೆವು. ಇದರಿಂದ ಹೆಚ್ಚಿನ ಅನಾಹುತ ಆಗಲಿಲ್ಲ’ ಎಂದು ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT