ಗುರುವಾರ , ಆಗಸ್ಟ್ 5, 2021
22 °C

ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಆರಂಭಿಸಲಿ: ಜೆಡಿಎಸ್‌ ಮುಖಂಡ ಕಲ್ಲೇರುದ್ರೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಜನಪ್ರತಿನಿಧಿಗಳು ಈಗಲಾದರೂ ಮನಸ್ಸು ಮಾಡಿರುವುದು ಉತ್ತಮ ಬೆಳವಣಿಗೆ. ನಗರದಲ್ಲಿ ವೈದ್ಯಕೀಯ ಕಾಲೇಜಿನ ಜತೆ ಕಾರ್ಮಿಕರ ವೈದ್ಯಕೀಯ ಕಾಲೇಜನ್ನೂ ತೆರೆಯಬೇಕು. ಈ ಬಗ್ಗೆ ಸಂಸದರು ಗಮನಹರಿಸಬೇಕು ಎಂದು ಜೆಡಿಎಸ್‌ ಮುಖಂಡ ಕಲ್ಲೇರುದ್ರೇಶ್‌ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಈಗಲಾದರೂ ಅದರ ಬಗ್ಗೆ ಜನರಿಗೆ, ಜನಪ್ರತಿನಿಧಿಗಳಿಗೆ ಅರಿವು ಮೂಡಿದ್ದು ಸ್ವಾಗತಾರ್ಹ. ವೈದ್ಯಕೀಯ ಕಾಲೇಜಿನ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಸಿ.ಜಿ. ಆಸ್ಪತ್ರೆಗೆ ಜಾಗ ನೀಡಿದ ಮನೆತನದವರನ್ನೂ ಸ್ಮರಿಸಬೇಕು. ಕಾರ್ಮಿಕ ಕಾಲೇಜು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಈ ಬಗ್ಗೆ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ವೈದ್ಯಕೀಯ ಕಾಲೇಜನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಆರಂಭಿಸಬಾರದು. ಸರ್ಕಾರದಿಂದಲೇ ತೆರೆಯಬೇಕು. ಸಾರ್ವಜನಿಕ ಸಹಭಾಗಿತ್ವದಲ್ಲಿ ಆರಂಭಿಸಿದರೆ ಬಡವರಿಗೆ ಹೆಚ್ಚಿನ ಉಪಯೋಗ ಆಗುವುದಿಲ್ಲ. ಅದು ಮತ್ತೆ ಖಾಸಗಿಯವರ ಒಡೆತನಕ್ಕೆ ಹೋಗಿ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಲಿದೆ. ಇದಕ್ಕಾಗಿ ಅನುದಾನವೂ ಹೆಚ್ಚಿಗೆ ಇರುವುದರಿಂದ ಸರ್ಕಾರದಿಂದಲೇ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.

ಮುಂದಿನ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜನ್ನು ಸೇರಿಸಬೇಕು. ಸಂಪುಟ ಸಭೆಯಲ್ಲೂ ಒಪ್ಪಿಗೆ ಪಡೆಯಬೇಕು. ಕಾಲೇಜಿಗೆ ಶಂಕುಸ್ಥಾಪನೆ ಮಾಡುವ ಬದಲು ಉದ್ಘಾಟನೆಯನ್ನೇ ಮಾಡಬೇಕು. ಶಂಕುಸ್ಥಾಪನೆ ಮಾಡಿದರೆ ಮತ್ತೆ ಕಾಲೇಜು ಆರಂಭವಾಗುವುದು ವಿಳಂಬವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಧನ್ಯಕುಮಾರ್‌, ಅಜ್ಜಯ್ಯ ಮೆದಿಕೇರನಹಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು