ಭಾನುವಾರ, ಏಪ್ರಿಲ್ 2, 2023
31 °C
ಕೊಂಡುಕುರಿ ವನ್ಯಧಾಮದಲ್ಲಿ ರಸಭರಿತ ಕಾಡು ಹಣ್ಣುಗಳ ಪರಿಷೆ

ಪ್ರಾಣಿ, ಪಕ್ಷಿಗಳಿಗೆ ಸಂಭ್ರಮದ ಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಜಿಲ್ಲೆಯ ಏಕೈಕ ವನ್ಯಜೀವಿಧಾಮ ತಾಲ್ಲೂಕಿನ ಕೊಂಡುಕುರಿ ಸಂರಕ್ಷಿತ ಅರಣ್ಯ ಪ್ರಸ್ತುತ ಮಳೆಗಾಲದಲ್ಲಿ ಹತ್ತು ಹಲವು ಪೋಷಕಾಂಶಗಳ ಆಗರವಾಗಿರುವ ವಿವಿಧ ಹಣ್ಣುಗಳು ಕರಡಿ ಹಾಗೂ ಅಸಂಖ್ಯಾತ ಪಕ್ಷಿಗಳಿಗೆ ಆಹಾರದ ಮೂಲವಾಗಿವೆ.

ಸುಮಾರು 80 ಚ.ಕಿ.ಮೀ ವಿಸ್ತೀರ್ಣದ ವನ್ಯಧಾಮದಲ್ಲಿ ವಿವಿಧ ಋತುಗಳಲ್ಲಿ ವೈವಿಧ್ಯಮಯ ಹಣ್ಣು ಮತ್ತು ಕಾಯಿಗಳನ್ನು ಕಾಣಬಹುದು. ಈಗ ಮಳೆಗಾಲದಲ್ಲಿ ನಗರೆ, ಬೇಲ, ಕವಳೆ, ಕಾರೆ, ತಾರೆ, ಹಿಪ್ಪೆ, ಕಾಡುಬಿಕ್ಕೆ, ಉಲುಪಿ, ಜಾನೆ, ದೇವಧಾರಿ, ಲೇಬಿ, ಬಾರೆ, ಅಂಕಲಿ ಹಾಗೂ ತುಮರಿ ಹಣ್ಣುಗಳು ಇಲ್ಲಿನ ಅರಣ್ಯದ ಮರಗಿಡಗಳಲ್ಲಿ ಗೊಂಚಲು ಗೊಂಚಲಾಗಿ ತೊನೆಯುತ್ತಿವೆ.

ಎಲ್ಲಾ ರೀತಿಯ ವಿಟಮಿನ್ ಮತ್ತು ಪ್ರೋಟಿನ್‌ಗಳ ಆಗರವಾಗಿರುವ ಸತ್ವಭರಿತ ಹಣ್ಣುಗಳು ಋತುಮಾನಗಳಿಗೆ ತಕ್ಕಂತೆ ನಿಸರ್ಗದ ಕೊಡುಗೆಯಾಗಿವೆ. ದೊಡ್ಡ ಗಾತ್ರದ ಪ್ರಾಣಿಯಾಗಿರುವ ಕರಡಿಗೆ ಹಣ್ಣುಗಳು ಅತ್ಯಂತ ಪ್ರಿಯವಾದವು. ಅಲ್ಲದೆ ನವಿಲು, ಗ್ರೇಹಾರ್ನ್ ಬಿಲ್, ಕಾಜಾಣ, ಮೈನಾ, ಕೆಂಪು ಪಿಕಳಾರ, ಬುಲ್ ಬುಲ್ ಹಾಗೂ ಕೋಗಿಲೆ ಸೇರಿ ಅಪಾರ ಪಕ್ಷಿ ಸಂಕುಲಕ್ಕೆ ಉತ್ಕೃಷ್ಟ ಆಹಾರವಾಗಿರುವ ಹಣ್ಣು ಮತ್ತು ಕಾಯಿಗಳು ಪ್ರಸ್ತುತ ಮಳೆಗಾಲದಲ್ಲಿ ಸಮೃದ್ಧವಾಗಿ ಮರಗಿಡಗಳಲ್ಲಿ ತೊನೆದಾಡುತ್ತಿವೆ.

ಕೇವಲ ಕಾಡು ಪ್ರಾಣಿಗಳು ಮಾತ್ರವಲ್ಲದೆ ಅರಣ್ಯದಂಚಿನ ಗ್ರಾಮಗಳ ಜನರು ಕಾಡುಬಿಕ್ಕೆ, ಕಾರೆ, ಕವಳೆ ಹಾಗೂ ಬೇಲದ ಹಣ್ಣುಗಳನ್ನು ಸೇವಿಸುತ್ತಾರೆ. ಕೆಲ ವರ್ಷಗಳ ಹಿಂದಿನವರೆಗೆ ಬುಡಕಟ್ಟು ಮಹಿಳೆಯರು ಕಾಡಿಗೆ ತೆರಳಿ ಹಣ್ಣು ಕಿತ್ತು ತಂದು ಶಾಲೆಗಳ ಆವರಣದಲ್ಲಿ ಮಕ್ಕಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ವ್ಯಾಪಕ ಅರಣ್ಯ ಪ್ರದೇಶ ನಾಶದಿಂದ ಪೋಷಕಾಂಶಗಳ ಆಗರವಾಗಿರುವ ಕಾಡು ಹಣ್ಣುಗಳ ಮರಗಳು ಕ್ರಮೇಣ ಕಣ್ಮರೆಯಾಗುವ ಹಂತದಲ್ಲಿವೆ.

‘ಬಾಲ್ಯದ ದಿನಗಳಲ್ಲಿ ನಾವು ಓದುತ್ತಿದ್ದ ಪ್ರಾಥಮಿಕ ಶಾಲೆಯ ಮುಂದೆ ಚಿಕ್ಕಚಿಕ್ಕ ಚೀಲಗಳಲ್ಲಿ, ಕಡುಗಪ್ಪಿನ ಸಿಹಿ ಸ್ವಾದದ ಕವಳೆ, ಒಗರು ಮತ್ತು ಸಿಹಿಯ ಕಾರೆ, ದಪ್ಪ ತೊಗಟೆಯ ಒಳಗಿನ ಸಿಹಿಸಿಹಿಯಾದ ಕಾಡುಬಿಕ್ಕೆ ಹಣ್ಣುಗಳನ್ನು ಕೆಲವು ಅಜ್ಜಿಯರು ಮಾರುತ್ತಿದ್ದರು. ಮುಗಿಬಿದ್ದು ಖರೀದಿಸುತ್ತಿದ್ದ ನಾವು ಕಾಡುಹಣ್ಣುಗಳ ರುಚಿಯನ್ನು ಆಸ್ವಾದಿಸುತ್ತಿದ್ದೆವು. ಈಗ ನಾಡಿನಲ್ಲಿ ಆ ಹಣ್ಣುಗಳು ನೋಡಲೇ ಸಿಗುತ್ತಿಲ್ಲ. ಇಂದಿನ ಮಕ್ಕಳಿಗೆ ಆರೋಗ್ಯಕರ ಕಾಡು ಹಣ್ಣು ತಿನ್ನುವ ಭಾಗ್ಯ ಇಲ್ಲ’ ಎಂದು ತಾಲ್ಲೂಕಿನ ಮುಸ್ಟೂರು ಗ್ರಾಮದ ಉಪನ್ಯಾಸಕ ಎ.ಎಲ್. ತಿಪ್ಪೇಸ್ವಾಮಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.