ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಾಶ್ರಿತ ಭೂಮಿಯಲ್ಲಿ ಭತ್ತ ಬೆಳೆದ ರೈತ

ಅತಿವೃಷ್ಟಿಯಿಂದ ಕಂಗೆಟ್ಟಿರುವ ರೈತರಿಗೆ ಮಾದರಿಯಾದ ಹಾಲಪ್ಪ
Last Updated 22 ಸೆಪ್ಟೆಂಬರ್ 2021, 4:59 IST
ಅಕ್ಷರ ಗಾತ್ರ

ಉಚ್ಚಂಗಿದುರ್ಗ: ಮಳೆಯಾಶ್ರಿತ ಜಮೀನಿನಲ್ಲಿ ಭರಪೂರ ಭತ್ತದ ಬೆಳೆ ಬೆಳೆದು ರೈತರೊಬ್ಬರು ಮಾದರಿಯಾಗಿದ್ದಾರೆ. ಉಚ್ಚಂಗಿದುರ್ಗ ಗ್ರಾಮದ ತರಕಾರಿ ಹಾಲಪ್ಪ ಮೂರು ದಶಕಗಳಿಂದಲೂ ಸೊಪ್ಪು, ತರಕಾರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದು, ತರಕಾರಿ ಹಾಲಪ್ಪ ಎಂದೇ ಹೆಸರಾಗಿದ್ದಾರೆ.

ಉಚ್ಚಂಗಿದುರ್ಗ ಗ್ರಾಮದಲ್ಲಿ ಸ್ವಂತ ಕೃಷಿ ಭೂಮಿ ಇಲ್ಲದಿದ್ದರೂ ಸಂಬಂಧಿಯೊಬ್ಬರಿಂದ ಹತ್ತು ಎಕರೆ ಜಮೀನನ್ನು ಗುತ್ತಿಗೆ ಪಡೆದುಕೊಂಡಿದ್ದಾರೆ. ಹತ್ತು ಏಕರೆಯಲ್ಲೂ ಪ್ರಮುಖ ಬೆಳೆಯಾದ ಮೆಕ್ಕೆಜೋಳ, ಜೋಳ, ರಾಗಿ ಬಿತ್ತನೆ ಮಾಡಿದ್ದರು. ಆದರೆ, ಉಚ್ಚಂಗಿದುರ್ಗ ವ್ಯಾಪ್ತಿಯಲ್ಲಿ ಸುರಿದ ದಾಖಲೆ ಮಳೆಗಯಿಂದ ಬೆಳೆ ಸಂಪೂರ್ಣ ಹಾನಿಗೀಡಾಯಿತು.

ಹಾಲಪ್ಪ ಅವರ ಜಮೀನಿನ ಬಹುತೇಕ ಭಾಗದಲ್ಲಿ ಹಳ್ಳದ ನೀರು ಹರಿದು ಹೋಗುವುದರಿಂದ ಬೆಳೆ ಶೀತಾಬಾಧೆಗೆ ತುತ್ತಾಗಿ ನಾಶವಾಗುತ್ತಿತ್ತು. ಅಲ್ಲದೇ ಉಚ್ಚೆಂಗೆಮ್ಮ ಬೆಟ್ಟದಿಂದ ಹರಿಯುವ ನೀರು ಹೊಲದಲ್ಲಿ ಸಂಗ್ರಹವಾಗಿ ಅತಿವೃಷ್ಟಿಗೂ ಕಾರಣವಾಗುತ್ತಿತ್ತು. ನಿರಂತರ ಬೆಳೆ ಹಾನಿಯಿಂದ ಕಂಗಾಲಾಗದ ರೈತ ತರಕಾರಿ ಹಾಲಪ್ಪ ಭತ್ತ ಬೆಳೆಯಲು ಮುಂದಾದರು.

ತೆಗ್ಗುದಿಬ್ಬಗಳಿಂದ ಆವೃತವಾದ ಹೊಲವನ್ನು ಯಂತ್ರಗಳ ಮೂಲಕ ಸಮತಟ್ಟು ಮಾಡಿ ಭೂಮಿಯನ್ನು ಹದಗೊಳಿಸಿದರು. ಮಳೆ ನೀರು ಹರಿದು ಹೊಲಕ್ಕೆ ಬರುವಂತೆ ಗದ್ದೆಯನ್ನು ಸಿದ್ಧಪಡಿಸಿ ತಿಳಿದವರಿಂದ ಮಾಹಿತಿ ಪಡೆದುಕೊಂಡು ಉತ್ತಮ ಭತ್ತದ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ನಾಟಿ ಕೈಗೊಂಡು ಒಂದು ತಿಂಗಳಾಗಿದ್ದು, ಬೆಳೆ ಸೊಂಪಾಗಿದೆ.

ಗ್ರಾಮದ ಎತ್ತರ ಪ್ರದೇಶದದಿಂದ ಹರಿದು ಬರುವ ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬರುವುದರಿಂದ ಭೂಮಿ ಫಲವತ್ತತೆಯಿಂದ ಕೂಡಿದೆ. ಜಾನುವಾರು ಸೆಗಣಿಯೂ ಹೊಲದಲ್ಲಿ ಸೇರುವುದರಿಂದ ಬೆಳೆ ಸಧೃಢವಾಗಿ ಬೆಳೆದಿದೆ.

‘ತಗ್ಗು ಪ್ರದೇಶದಲ್ಲಿ ಹೊಲ ಇರುವುದರಿಂದ ಈ ಭಾಗದಲ್ಲಿ ಒಂದಿಷ್ಟು ಮಳೆಯಾದರೆ ಸಾಕು ಸಾಕಷ್ಟು ನೀರು ಹರಿದುಬಂದು ಹೊಲ ಸಂಪೂರ್ಣವಾಗಿ ತುಂಬಿ ಹರಿಯುತ್ತದೆ. ನಿರಂತರ ಮಳೆಯಿಂದಾಗಿ ಬೆಳೆ ನಷ್ಟವಾದ್ದರಿಂದ ಭತ್ತ ನಾಟಿ ಮಾಡಿದ್ದೇನೆ. ಸದ್ಯದ ಮಳೆಗೆ ಬೆಳೆ ಉತ್ತಮವಾಗಿದೆ. ಕೆಲ ದಿನ ಮಳೆ ಬರದಿದ್ದರೂ ಆತಂಕ ಪಡುವ ಅಗತ್ಯವಿಲ್ಲ. ಹೊಲಕ್ಕೆ ಸೊಲ್ಪ ದೂರದಲ್ಲಿ ಪಾಳು ಬಿದ್ದ ಬಾವಿಯಿದ್ದು, ನೀರು ಸಂಗ್ರಹವಾಗುತ್ತದೆ. ಅವಶ್ಯಕತೆ ಇದ್ದಾಗ ಮೋಟರ್ ಮೂಲಕ ನೀರು ಬಳಸಿಕೊಳ್ಳಬಹುದು. ಎರಡು ಎಕರೆ ಭೂಮಿಯಲ್ಲಿ ಭತ್ತ ನಾಟಿ ಮಾಡಿದ್ದೇನೆ’ ಎನ್ನುತ್ತಾರೆ ರೈತ ತರಕಾರಿ ಹಾಲಪ್ಪ.

***

ಯಾಂತ್ರೀಕೃತ ಪದ್ಧತಿಯಲ್ಲಿ ಭತ್ತವನ್ನು ಬೆಳೆಯಲು ಖರ್ಚು–ವೆಚ್ಚ ಕಡಿಮೆ. ಮೆಕ್ಕೆಜೋಳಕ್ಕೆ ದರ ಕುಸಿದಿರುವುದರಿಂದ ಸಂಕಷ್ಟ ಎದುರಾಗಿದೆ. ಭತ್ತದ ಇಳುವರಿ ಕೈ ಹಿಡಿಯುವ ನಿರೀಕ್ಷೆ ಹೆಚ್ಚಿಸಿದೆ.

ರೈತ ಹಾಲಪ್ಪ

***

ಅತಿವೃಷ್ಟಿಯಿಂದಾಗಿ ಬೆಳೆಹಾನಿಯಿಂದ ಬೇಸತ್ತ ಗ್ರಾಮದ ಹಲವು ರೈತರು ಭತ್ತ ಬೆಳೆಯಲು ಮುಂದಾಗಿದ್ದಾರೆ. ನಿರಂತರ ಬೆಳೆ ನಷ್ಟದಿಂದ ಕಂಗೆಟ್ಟ ರೈತರಿಗೆ ಭತ್ತದ ಬೆಳೆ ಕೈ ಹಿಡಿಯುವ ವಿಶ್ವಾಸವಿದೆ.

-ಕೆಂಚನಗೌಡ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT