ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ವೈದ್ಯಕೀಯ ಕಾಲೇಜಿಗೆ ಹಾಜರಾದ ವಿದ್ಯಾರ್ಥಿಗಳು

Last Updated 1 ಡಿಸೆಂಬರ್ 2020, 16:18 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಕಾರಣದಿಂದ ಮುಚ್ಚಿದ್ದ ವೈದ್ಯಕೀಯ ಕಾಲೇಜುಗಳು 8 ತಿಂಗಳ ಬಳಿಕ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅನ್ವಯ ಮಂಗಳವಾರ ಪುನರಾರಂಭಗೊಂಡವು.

ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜು ಹಾಗೂ ಎಸ್.ಎಸ್. ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಕಾಲೇಜಿಗೆ ಹಾಜರಾದರು. ಈಗಾಗಲೇ ಆನ್‌ಲೈನ್ ಮೂಲಕ ಸಾಕಷ್ಟು ಥಿಯರಿ ಪಾಠಗಳು ನಡೆದಿದ್ದು, ಪ್ರಾಯೋಗಿಕ ತರಗತಿಗಳನ್ನು ನಡೆಸುವ ಬಗ್ಗೆ ಗಮನಹರಿಸಬೇಕು ಎಂಬ ಎಂಎನ್‌ಸಿ ಆದೇಶದಂತೆ ಕಾಲೇಜುಗಳಲ್ಲಿ ಪ್ರಾಯೋಗಿಕ ತರಗತಿಗಳಿಗೆ ಒತ್ತು ನೀಡಲಾಗಿದೆ.

‘ಮೊದಲ ಹಾಗೂ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು,ಹೊರ ರಾಜ್ಯಗಳು ಸೇರಿ 420 ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. 365 ವಿದ್ಯಾರ್ಥಿಗಳು ಮೊದಲ ದಿವಸ ಹಾಜರಾಗಿದ್ದರು’ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಎಸ್.ಬಿ.ಮುರುಗೇಶ್ ತಿಳಿಸಿದರು.

ಕೇಸ್ ಸಿನಾರಿಯೊ: ‘ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಮುಖ್ಯ. ಕೋವಿಡ್ ಕಾರಣದಿಂದ ರೋಗಿಗಳನ್ನು ಮುಟ್ಟದೆ ಚಿಕಿತ್ಸೆ ನೀಡಬೇಕಾಗಿರುವುದರಿಂದ ‘ಕೇಸ್ ಸಿನಾರಿಯೊ’ (ರೋಗಿಗಳ ಕಾಯಿಲೆಗಳ ಸಾರಾಂಶದ ಪಟ್ಟಿ) ನೋಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಬೇಕು. ಲಾಕ್‌ಡೌನ್ ವೇಳೆ ಈಗಾಗಲೇ ಎರಡು ಪರೀಕ್ಷೆಗಳನ್ನು ಇದೇ ಮಾದರಿಯಲ್ಲಿ ನಡೆಸಿದ್ದೇವೆ. ರೋಗಿಗಳ ಬಳಿ ಕೇಸ್ ಸ್ಟಡಿ ಮಾಡುವಾಗ 12 ಜನದ ಬದಲು ಈಗ 6 ಜನ ವಿದ್ಯಾರ್ಥಿಗಳು ಮಾತ್ರ ಭೇಟಿ ನೀಡುತ್ತಾರೆ’ ಎಂದು ಮುರುಗೇಶ್ ಹೇಳಿದರು.

‘ನಮಗೆ ಥಿಯರಿಗಿಂತ ಪ್ರಾಯೋಗಿಕ ತರಗತಿ ಮುಖ್ಯವಾಗಿತ್ತು. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಮಕ್ಕಳ ಜೊತೆ ಇಂಟರ‍್ಯಾಕ್ಟ್ ಮಾಡಿದ್ದೇವೆ’ ಎನ್ನುತ್ತಾರೆ ಜೆಜೆಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಅನುಜ್ಞಾ.

‘ಪ್ರಾಯೋಗಿಕ ತರಗತಿ ಇದ್ದಾಗ ಮಾತ್ರ ನಾವು ಚೆನ್ನಾಗಿ ಕಲಿಯಲು ಸಾಧ್ಯ. ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೇವೆ. ಮುನ್ನೆಚ್ಚರಿಕೆ ಕ್ರಮ ವಹಿಸಿ ತರಗತಿಗೆ ಹಾಜರಾಗಿದ್ದೇವೆ’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಸಹನಾ.

ಎಸ್.ಎಸ್‌. ಮೆಡಿಕಲ್ ಕಾಲೇಜಿನಲ್ಲಿಯೂ ಶೇ 70ರಷ್ಟು ವಿದ್ಯಾರ್ಥಿಗಳು ಮುನ್ನೆಚ್ಚರಿಕೆ ವಹಿಸಿ ತರಗತಿಗೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT