ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹಾಸ್ಟೆಲ್‌ ವಾರ್ಡನ್‌ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Last Updated 12 ಆಗಸ್ಟ್ 2022, 5:15 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಸರಸ್ವತಿ ನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಊಟ ಸರಿಯಾಗಿ ಕೊಡುತ್ತಿಲ್ಲ. ವಾರ್ಡನ್‌ ಸ್ಥಳೀಯರನ್ನು ಕರೆಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಗುರುವಾರ ರಾತ್ರಿ ವಾರ್ಡನ್‌ ವಿರುದ್ಧ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಹಾಸ್ಟೆಲ್‌ನಲ್ಲಿನ ಎಲ್ಲ ವಿದ್ಯಾರ್ಥಿಗಳಿಗೂ ಸಮರ್ಪಕವಾಗಿ ಊಟ ನೀಡುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ಸ್ಥಳೀಯರನ್ನು ಕರೆಸಿ ಬೆದರಿಕೆ ಹಾಕುತ್ತಿದ್ದಾರೆ. ವಾರ್ಡನ್‌ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ವಿದ್ಯಾರ್ಥಿಗಳು, ವಾರ್ಡನ್‌ ವಿರುದ್ಧ ಘೋಷಣೆ ಕೂಗಿದರು.

ಆದರೆ ವಿದ್ಯಾರ್ಥಿಗಳ ಆರೋಪವನ್ನು ವಾರ್ಡನ್‌ ಅಲ್ಲಗೆಳೆದರು.

‘ಕೆಲ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಸೇರದ ಹೊರಗಿನ ವಿದ್ಯಾರ್ಥಿಗಳನ್ನು ಕರೆತಂದು ತಮ್ಮ ರೂಂನಲ್ಲಿ ವಸತಿ ನೀಡಿದ್ದಾರೆ. ಅಲ್ಲದೇ 5–6 ಜನ ಹೊರಗಿನ ವಿದ್ಯಾರ್ಥಿಗಳಿಗೆ ಊಟ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಊಟ, ವಸತಿ ನೀಡಬಹುದು. ಆದರೆ ಹೊರಗಿನವರಿಗೆ ಹೇಗೆ ನೀಡುವುದು. ಅಧಿಕ ಸಂಖ್ಯೆಯ ವಿದ್ಯಾರ್ಥಿಗಳಿಗೆ ಊಟ ನೀಡಲು ಅವಕಾಶ ಇಲ್ಲ. ಇದನ್ನು ತಿಳಿಸಿದರೆ ನನ್ನ ಮೇಲೆಯೇ ಹರಿಹಾಯುತ್ತಾರೆ. ಊಟ ಸರಿ ಇಲ್ಲ ಎಂಬ ನೆಪ ಮಾಡಿ ಪ್ರತಿಭಟನೆ ನಡೆಸುತ್ತಾರೆ. ವಿದ್ಯಾರ್ಥಿಯೊಬ್ಬ ನೀವು ಇಲ್ಲಿರಲು ಮಾಮೂಲಿ ನೀಡಬೇಕು ಎಂದು ಬೆದರಿಕೆ ಹಾಕುತ್ತಾನೆ’ ಎಂದು ಹಾಸ್ಟೆಲ್‌ ವಾರ್ಡನ್ ಮೋಹನ್‌ ದೂರಿದರು.

ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ತಿಳಿದ ಕೆಟಿಜೆ ನಗರ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇಷ್ಮಾ ಕೌಸರ್‌ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT