ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕದಲ್ಲಿ ಆತ್ಮನಿರ್ಭರ: ಅಮಿತ್‌ ಶಾ

ಗಾಂಧಿ ಭವನ, ಪೊಲೀಸ್‌ ವಸತಿ ಶಾಲೆ, ಪೊಲೀಸ್ ವಸತಿ ಗೃಹ, ಜಿ.ಎಂ ಕೇಂದ್ರ ಗ್ರಂಥಾಲಯ ಉದ್ಘಾಟನೆ
Last Updated 3 ಸೆಪ್ಟೆಂಬರ್ 2021, 4:40 IST
ಅಕ್ಷರ ಗಾತ್ರ

ದಾವಣಗೆರೆ: ‘ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಆಮ್ಲಜನಕ ಕೊರತೆಯಾದಾಗ ಸಾವಿರಾರು ಆಮ್ಲಜನಕ ಘಟಕಗಳನ್ನು ನಿರ್ಮಿಸಲು ಮುಂದಾದೆವು. ಮುಂದೆ ಎಂತಹ ದೊಡ್ಡ ಸಾಂಕ್ರಾಮಿಕ ರೋಗ ಬಂದರೂ ಭಾರತವು ಆಮ್ಲಜನಕದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲಿದೆ. ಬೇರೆ ದೇಶವನ್ನು ಅವಲಂಬಿಸಬೇಕಾಗಿಲ್ಲ. ಈ ವಿಚಾರದಲ್ಲೂ ಭಾರತ ಆತ್ಮನಿರ್ಭರವಾಗಿದೆ’ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ₹ 3 ಕೋಟಿ ವೆಚ್ಚದಲ್ಲಿ ಇಲ್ಲಿನ ರಾಮನಗರದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನ, ಪೊಲೀಸ್ ಇಲಾಖೆಯಿಂದ ಹರಿಹರ ತಾಲ್ಲೂಕು ಕೊಂಡಜ್ಜಿಯಲ್ಲಿ ₹ 15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೊಲೀಸ್ ಪಬ್ಲಿಕ್ ವಸತಿ ಶಾಲೆ ಹಾಗೂ ದಾವಣಗೆರೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಾಗಿ ₹ 14.91 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಸತಿಗೃಹಗಳನ್ನು ಗುರುವಾರ ವರ್ಚ್‌ವಲ್‌ ಮೂಲಕ ಜಿಎಂಐಟಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೊನಾ ನಿರೋಧಕ ಲಸಿಕೆಯನ್ನು ವಿಶ್ವಕ್ಕೆ ಅತಿ ಹೆಚ್ಚು ನೀಡಿದ ದೇಶವಿದ್ದರೆ ಅದು ಭಾರತ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಒಂದೇ ದಿನ ಎರಡು ಕೋಟಿ ಜನರಿಗೆ ಲಸಿಕೆ ನೀಡಿದ ದಾಖಲೆ ನಮ್ಮದು. ಕರ್ನಾಟಕದಲ್ಲಿ ಒಟ್ಟು ನಾಲ್ಕು ಕೋಟಿ ಜನರು ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಒಂದು ಕೋಟಿ ಜನರು ಎರಡನೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಶೇ 90ರಷ್ಟು ಮಂದಿಗೆ ಎರಡನೇ ಡೋಸ್‌ ನೀಡಲು ಬೊಮ್ಮಾಯಿ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಶ್ಲಾಘಿಸಿದರು.

‘ಕೊರೊನಾ ಕಾಲದಲ್ಲಿ ಆದಿವಾಸಿಗಳಿಗೆ, ದಲಿತರಿಗೆ, ಅಲೆಮಾರಿಗಳಿಗೆ, ಎಲ್ಲ ಬಡವರಿಗೆ ಸಂಕಷ್ಟ ಎದುರಾಯಿತು. ಈ ಬಗ್ಗೆ ಚಿಂತನೆ ಮಾಡಿ ಎಲ್ಲ ಬಡವರಿಗೆ 10 ತಿಂಗಳುಗಳ ಕಾಲ ತಲಾ 5 ಕೆ.ಜಿ. ಪಡಿತರವನ್ನು ಉಚಿತವಾಗಿ ನೀಡಿ ಅವರು ಹಸಿವಿನಿಂದ ಇರದಂತೆ ನೋಡಿಕೊಂಡೆವು. ಸಾವಿರಾರು ಕೋಟಿ ಪ್ಯಾಕೇಜ್‌ಗಳನ್ನು ಘೋಷಿಸಲಾಯಿತು. ಅದರಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜನರ ನೆರವಿಗೆ ಬಂದೆವು’ ಎಂದು ಹೇಳಿದರು.

‘ಕೊರೊನಾ ವಾರಿಯರ್‌ಗಳಾದ ಆರೋಗ್ಯ ಕಾರ್ಯಕರ್ತರು, ಸುರಕ್ಷಾ ಸಿಬ್ಬಂದಿ, ಸಫಾಯಿ ಕರ್ಮಚಾರಿಗಳು ಹೀಗೆ ಅನೇಕರು ಜೀವದ ಹಂಗು ತೊರೆದು ಕೊರೊನಾ ವಿರುದ್ಧದ ಸಮರದಲ್ಲಿ ಭಾಗಿಯಾಗಿದ್ದರು. ಸೋಂಕಿನ ವಿರುದ್ಧದ ಹೋರಾಟಕ್ಕೆ ಪ್ರಧಾನಿಗೆ ಶಕ್ತಿ ನೀಡಿದ್ದರು. ಹಲವರನ್ನು ಉಳಿಸಿಕೊಳ್ಳಲಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕರ್ನಾಟಕದಲ್ಲಿ ಭಯೋತ್ಪಾದಕರು ಬೇರು ಬಿಡುವ ಪ್ರಯತ್ನ ಮಾಡಿದಾಗ ಸದೆಬಡೆದಿದ್ದೇವೆ. ಎನ್‌ಐಎ ಜತೆ ಕೈಜೋಡಿಸಿ ಕಠಿಣ ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

‘ಉತ್ತಮವಾದ ಪೊಲೀಸ್‌ ವಸತಿ ಶಾಲೆ ಉದ್ಘಾಟನೆಗೊಂಡಿದೆ. ಇಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಮಿಲಿಟರಿ ಶಾಲೆಗಳಲ್ಲಿರುವಂತೆ ಶಿಸ್ತಿನ ಶಿಕ್ಷಣ ಕೂಡ ವಿದ್ಯಾರ್ಥಿಗಳಿಗೆ ದೊರೆಯಲಿದೆ’ ಎಂದು ವಿವರಿಸಿದರು.

‘ಫೊರೆನ್ಸಿಕ್‌ ಲ್ಯಾಬ್‌ನಲ್ಲಿ ತಡವಾಗಿ ವರದಿಗಳು ಬರುತ್ತಿವೆ. ಅದು ವೇಗ ಪಡೆಯಬೇಕು. ಘಟನಾ ಸ್ಥಳದಲ್ಲಿ ತಕ್ಷಣ ಅಧಿಕಾರಿಗಳು ಇರಬೇಕು. ಆಗ ಅಪರಾಧವನ್ನು ನಿಯಂತ್ರಿಸಲು ಸಾಧ್ಯ ಎಂದು ಅಮಿತ್‌ ಶಾ ಹಿಂದೆ ಸಲಹೆ ನೀಡಿದ್ದರು. ಅದರಂತೆ ಮೊಬೈಲ್‌ ಫೊರೆನ್ಸಿಕ್‌ ಲ್ಯಾಬ್‌ ಸೇವೆ ಆರಂಭಿಸಿದ್ದೇವೆ. ಅಧಿಕಾರಿಗಳು ಘಟನಾ ಸ್ಥಳದಲ್ಲಿ ಇರುವಂತೆ ಮಾಡಿದ್ದೇವೆ’ ಎಂದರು.

‌ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕರಾದ ಕೆ. ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಪ್ರೊ. ಎನ್.ಲಿಂಗಣ್ಣ, ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಮೋಹನ್‍ಕುಮಾರ್ ಕೊಂಡಜ್ಜಿ, ಮೇಯರ್‌ ಎಸ್.ಟಿ. ವೀರೇಶ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ವೀರೇಶ್‌ ಹನಗವಾಡಿ ಅವರೂ ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಸ್ವಾಗತಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ವಂದಿಸಿದರು.

‘ಮದುವೆಗೆ ಬಂದಿದ್ದೆ...’

‘ನಾನು ಸಚಿವ ಪ್ರಲ್ಹಾದ ಜೋಶಿ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದೆ. ಸರ್ಕಾರಿ ಕಾರ್ಯಕ್ರಮಗಳನ್ನು ಮತ್ತು ಜಿ.ಎಂ. ಕೇಂದ್ರ ಗ್ರಂಥಾಲಯವನ್ನು ಉದ್ಘಾಟಿಸಲು ಬರಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮನವಿ ಮಾಡಿ ನಾನು ಇಲ್ಲಿಗೆ ಬರುವಂತೆ ಮಾಡಿದರು. ಸುಮಾರು ₹ 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿವಿಧ ಯೋಜನೆಗಳನ್ನು ಉದ್ಘಾಟಿಸಲು ಸಂತೋಷವಾಗುತ್ತಿದೆ’ ಎಂದು ಅಮಿತ್‌ ಶಾ ತಿಳಿಸಿದರು.

‘ಪಟೇಲ್‌ ನಂತರದ ಗಟ್ಟಿತನದ ಗೃಹಸಚಿವ’

ವಲ್ಲಭಬಾಯಿ ಪಟೇಲರು ಗಟ್ಟಿತನದಿಂದ ಕೆಲಸ ಮಾಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಕೆಲವು ರಾಜ್ಯಗಳು ಸೇರಿರಲಿಲ್ಲ. ಅವುಗಳನ್ನು ಒಕ್ಕೂಟಕ್ಕೆ ಸೇರಿಸಲು ದಿಟ್ಟ ಕ್ರಮ ಕೈಗೊಂಡಿದ್ದರು. ಪಟೇಲರ ಬಳಿಕ ಅಂಥ ದಿಟ್ಟತನದಿಂದ ಕೆಲಸ ಮಾಡುತ್ತಿರುವವರು ಅಮಿತ್‌ ಶಾ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಗಳಿದರು.

‘ದೇಶದ ಭವಿಷ್ಯ ನಿರ್ಮಾಣದಲ್ಲಿ ಅಮಿತ್‌ ಶಾ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ. ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದಲ್ಲದೇ ಅಲ್ಲಿ ಶಾಂತಿ ಸುವ್ಯವಸ್ಥೆ ಉಂಟು ಮಾಡಿದ್ದಾರೆ. ಇತಿಹಾಸದ ಪುಟಗಳಲ್ಲಿ ಶಾ ‌ಹೆಸರು ಅಚ್ಚಳಿಯದೇ ಉಳಿಯಲಿದೆ’ ಎಂದು ಶ್ಲಾಘಿಸಿದರು.

‘ಹಲವು ಜವಾಬ್ದಾರಿ ಇದ್ದರೂ ಕನ್ನಡಿಗರ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡು ಬಂದು ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಗಾಂಧಿಯ ನಾಡಿನಿಂದ ಬಂದು ಗಾಂಧಿ ಭವನವನ್ನು ಉದ್ಘಾಟಿಸುತ್ತಿರುವುದು ಯೋಗಾಯೋಗ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT