ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಳೆಕೆರೆ ನೀರು ಸ್ಥಗಿತ: 14 ಗ್ರಾ.ಪಂಗೆ ಟ್ಯಾಂಕರ್‌ ನೀರು ಪೂರೈಕೆ

Published 15 ಆಗಸ್ಟ್ 2023, 6:38 IST
Last Updated 15 ಆಗಸ್ಟ್ 2023, 6:38 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ಶಾಂತಿಸಾಗರ (ಸೂಳೆಕೆರೆ)ದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ನೀರು ಪೂರೈಕೆಯಾಗುತ್ತಿದ್ದ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯ 89 ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಸಲು ಪುರಸಭೆ ಮುಂದಾಗಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯ 89 ಗ್ರಾಮಗಳು ಹಾಗೂ ಪಕ್ಕದ ಜಗಳೂರು ತಾಲ್ಲೂಕು,  ನೆರೆಯ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಗರ, ಹೊಳಲ್ಕೆರೆ, ಭೀಮಸಮುದ್ರ, ಸಿರಿಗೆರೆ ಪಟ್ಟಣಗಳಿಗೆ ಸೂಳೆಕೆರೆಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿದೆ.

ವರದಿ ಹಿನ್ನೆಲೆಯಲ್ಲಿ ಈ ಎಲ್ಲ ಪ್ರದೇಶಗಳಿಗೆ 3 ತಿಂಗಳು ನೀರು ಪೂರೈಕೆ ಸ್ಥಗಿತಗೊಳಿಸಲು ಪುರಸಭೆ ಮುಂದಾಗಿದ್ದು, ಪರ್ಯಾಯವಾಗಿ ಟ್ಯಾಂಕರ್‌ ನೀರಿಗೆ ಮೊರೆ ಹೋಗಿದೆ.

ಒಂದು ತಿಂಗಳಿಂದ ಪಟ್ಟಣಕ್ಕೆ ಹಳದಿ ಬಣ್ಣದ ಕಲುಷಿತ ನೀರು ಪೂರೈಕೆಯಾಗುತ್ತಿರುವುದನ್ನು ಮನಗಂಡು ಪುರಸಭೆಯವರು ಸೂಳೆಕೆರೆಯ ನೀರನ್ನು ಪರೀಕ್ಷಿಸಲು ತಾಲ್ಲೂಕು ವೈದ್ಯಾಧಿಕಾರಿಗೆ ಮನವಿ ಮಾಡಿಕೊಂಡಿದ್ದರು. ಕಳೆದ ಮಂಗಳವಾರ ಶಿವಮೊಗ್ಗದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಘಟಕದ ತಂಡ ಸೂಳೆಕೆರೆಗೆ ಭೇಟಿ ನೀಡಿ ನೀರಿನ ಮಾದರಿಗಳ ಪರೀಕ್ಷೆ ಮಾಡಿತ್ತು. ನೀರಿನಲ್ಲಿ ಬ್ಯಾಕ್ಟೀರಿಯಾ ಕಂಡುಬಂದ ಕಾರಣ ತಾತ್ಕಾಲಿಕವಾಗಿ ಕುಡಿಯಲು ನೀರು ಯೋಗ್ಯವಲ್ಲ ಎಂದು ವರದಿ ನೀಡಿತ್ತು. ಕೆರೆಯ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮತ್ತೆ ಈ ನೀರನ್ನು ಹೆಚ್ಚಿನ ಪರೀಕ್ಷೆಗಾಗಿ ಶಿವಮೊಗ್ಗದ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎರಡು ಮೂರು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಲ್ಲಿದ್ದೇವೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಇ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

89 ಗ್ರಾಮಗಳಲ್ಲೂ ತಾತ್ಕಾಲಿಕವಾಗಿ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಪಟ್ಟಣದಲ್ಲಿ ಈಗಾಗಲೇ 4 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದ ಗ್ರಾಮಗಳಲ್ಲಿ ಕೊಳವೆಬಾವಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಯಿಸಲಾಗುತ್ತಿದೆ. ಅಂತಿಮ ವರದಿ ಬಂದ ನಂತರ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಲೋಹಿತ್ ಕುಮಾರ್ ತಿಳಿಸಿದರು.

ಸೂಳೆಕೆರೆಯ ನೋಟ
ಸೂಳೆಕೆರೆಯ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT