ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ಬಿರುಬಿಸಿಲಿಗೆ ಉದುರುತ್ತಿವೆ ಮಾವಿನ ಹೂ, ಹೀಚು

ರೈತರು, ಕೇಣಿದಾರರಿಗೆ ಅಪಾರ ನಷ್ಟ
ಎನ್‌.ವಿ. ರಮೇಶ್‌
Published 6 ಏಪ್ರಿಲ್ 2024, 7:25 IST
Last Updated 6 ಏಪ್ರಿಲ್ 2024, 7:25 IST
ಅಕ್ಷರ ಗಾತ್ರ

ಬಸವಾಪಟ್ಟಣ: ಪ್ರಸಕ್ತ ವರ್ಷ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಘನಘೋರವಾಗಿ ಪರಿಣಮಿಸಿರುವ ಬೇಸಿಗೆಯ ಬಿರು ಬಿಸಿಲಿನಿಂದಾಗಿ ‘ಹಣ್ಣುಗಳ ರಾಜ’ ಮಾವಿನ ಫಸಲು ಕ್ಷೀಣವಾಗಿದೆ. ಮಾವಿನ ಮರಗಳಲ್ಲಿನ ಹೂವು ಮತ್ತು ಹೀಚು ಉದುರುತ್ತಿದ್ದು, ರೈತರು ಮತ್ತು ಕೇಣಿದಾರರಿಗೆ ಅಪಾರ ನಷ್ಟ ಸಂಭವಿಸಿದೆ.

ಹೋಬಳಿಯಾದ್ಯಂತ ಇರುವ ಮಾನಿವ ತೋಟಗಳಲ್ಲಿ ಆಪೂಸ್‌ ತಳಿಯ ಮರಗಳು ಹೆಚ್ಚಾಗಿವೆ. ಬಿಸಿಲಿನ ತಾಪದಿಂದ ಶೇಕಡ 75ರಷ್ಟು ಮರಗಳಲ್ಲಿನ ಹೂವು ಮತ್ತು ಹೀಚು ಉದುರುತ್ತಿವೆ.

‘ಮಾವಿನ ಮರಗಳಲ್ಲಿ ಹೂ ಬಿಡಲಾರಂಭಿಸಿದ ಕೂಡಲೇ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ತೋಟದ ಕಾಯಿ ಖರೀದಿಸಲು ಮುಂಗಡ ಹಣ ಪಾವತಿಸುತ್ತೇವೆ. ಸುಮಾರು 600 ಮರಗಳನ್ನು ಕೇಣಿಗೆ ಪಡೆದಿದ್ದು, ಮರಗಳ ನಿರ್ವಹಣೆ, ಕೊಯ್ಲು ನಾವೇ ಮಾಡುತ್ತೇವೆ. ಈವರೆಗೆ ₹ 1 ಲಕ್ಷ ವೆಚ್ಚದಲ್ಲಿ ನಾಲ್ಕು ಬಾರಿ ಕೀಟನಾಶಕ ಸಿಂಪಡಿಸಿದ್ದೇವೆ. ಬಿಸಿಲಿನಿಂದಾಗಿ ಮರಗಳಲ್ಲಿ ಕಾಯಿಗಳೇ ಇಲ್ಲವಾಗಿದೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ’ ಎಂದು ಕೇಣಿದಾರ ಸೈಯದ್‌ ಹಿದಾಯತ್‌ ಬೇಸರ ವ್ಯಕ್ತಪಡಿಸಿದರು.

‘ಈ ವರ್ಷ ಹಿಂದೆಂದೂ ಕಾಣದಷ್ಟು ತಾಪಮಾನ ಇದೆ. ಇತ್ತೀಚಿನ ದಿನಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಸೂಕ್ಷ್ಮ ಫಸಲಾದ ಮಾವಿನ ಮರಗಳ ಹೂ, ಹೀಚು ಬಿಸಿಲಿಗೆ ಬಾಡಿ ಉದುರಿ ಹೋಗಿವೆ. ನಾವು ರೈತರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅವರಿಗೆ ಹಣ ನೀಡಬೇಕು. ಪ್ರಕೃತಿ ವಿಕೋಪದಿಂದ ಈ ರೀತಿ ಆಗಿದೆ ಎಂದು ನಾವು ಮನವರಿಕೆ ಮಾಡಿಕೊಟ್ಟಾಗ ಕೆಲ ರೈತರು ಅರ್ಧದಷ್ಟು ಹಣವನ್ನು ಕಡಿಮೆ ಮಾಡಿಕೊಳ್ಳಲು ಒಪ್ಪುತ್ತಾರೆ. ಈ ಬಾರಿ ಅಷ್ಟು ಹಣ ಕೊಡುವುದೂ ನಮಗೆ ಅಸಾಧ್ಯವಾಗಿದೆ. ಫಸಲು ಚೆನ್ನಾಗಿ ಬಂದಿದ್ದರೆ 24 ಹಣ್ಣುಗಳ ಬಾಕ್ಸ್‌ ಒಂದಕ್ಕೆ ₹ 400ರಿಂದ ₹ 600 ರವರೆಗೂ ದರ ಸಿಗುತ್ತಿತ್ತು. ಆದರೆ, ಈಗ ಹಾಕಿದ ಬಂಡವಾಳವೂ ಕೈ ಸೇರದಾಗಿದೆ’ ಎಂದು ಕೇಣಿದಾರರಾದ ಅಫನ್‌, ಮುಷ್ತಾಕ್‌ ಮತ್ತು ಆರಿಫ್‌ ಬೇಸರ ವ್ಯಕ್ತಪಡಿಸಿದರು.

ಬಸವಾಪಟ್ಟಣ ಸುತ್ತಲಿನ ಗ್ರಾಮಗಳಲ್ಲಿನ ಮಾವಿನ ಮರಗಳಲ್ಲಿ ಈ ಬಾರಿ ಕಾಯಿಗಳಿರದೇ ಬೋಳಾಗಿರುವ ಮರಗಳನ್ನು ತೋರಿಸುತ್ತಿರುವ ಕೇಣಿದಾರ ಸೈಯದ್ ಹಿದಾಯತ್
ಬಸವಾಪಟ್ಟಣ ಸುತ್ತಲಿನ ಗ್ರಾಮಗಳಲ್ಲಿನ ಮಾವಿನ ಮರಗಳಲ್ಲಿ ಈ ಬಾರಿ ಕಾಯಿಗಳಿರದೇ ಬೋಳಾಗಿರುವ ಮರಗಳನ್ನು ತೋರಿಸುತ್ತಿರುವ ಕೇಣಿದಾರ ಸೈಯದ್ ಹಿದಾಯತ್

‘ನಮ್ಮ ತೋಟ ಮತ್ತು ಹೊಲಗಳಲ್ಲಿ ಸಾಕಷ್ಟು ಕಾಯಿ ಬಿಡುವ ಉತ್ತಮ ತಳಿಯ ಆಪೂಸ್‌ ಮತ್ತು ರಸಪೂರಿ ಮಾವಿನ ಮರಗಳನ್ನು ಬೆಳೆಸಿದ್ದೇವೆ. ಪ್ರತಿ ವರ್ಷ ಮರಗಳಲ್ಲಿ ಫಸಲು ಚೆನ್ನಾಗಿ ಬಂದು ಸಾಕಷ್ಟು ಆದಾಯ ದೊರೆಯುತ್ತಿತ್ತು. ಆದರೆ, ಈ ವರ್ಷ ಭಾರಿ ಬಿಸಿಲಿನ ಹೊಡೆತಕ್ಕೆ ಮಾವಿನ ಫಸಲಿಗೆ ಧಕ್ಕೆಯಾಗಿದೆ. ಬಿಸಿಲಿನ ತಾಪದಿಂದ ಬೆಳೆ ಕೈಗೆ ಬಾರದೇ ನಷ್ಟವಾಗಿದೆ’ ಎಂದು ಹೋಬಳಿಯ ರೈತರಾದ ಶಿವಲಿಂಗಪ್ಪ ಮತ್ತು ನಾಗರಾಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT