ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್‌ ಕಾರ್ಡ್‌ ಎಸೆದವರ ಸಸ್ಪೆಂಡ್‌ ಮಾಡಿ: ಸಂಸದ ಜಿ.ಎಂ. ಸಿದ್ದೇಶ್ವರ

ದಿಶಾ ಸಭೆ: ಎಲೆಬೇತೂರು ಅಂಚೆ ಕಚೇರಿ ಸಿಬ್ಬಂದಿ ಮೇಲೆ ಕ್ರಮಕ್ಕೆ ಸಂಸದರ ಸೂಚನೆ
Last Updated 8 ಸೆಪ್ಟೆಂಬರ್ 2020, 1:54 IST
ಅಕ್ಷರ ಗಾತ್ರ

ದಾವಣಗೆರೆ: ಬಡವರಿಗೆ ತಲುಪಿಸಬೇಕಿದ್ದ ಆಯುಷ್ಮಾನ್‌ ಭಾರತ್‌ ಕಾರ್ಡ್‌ಗಳನ್ನು ಚರಂಡಿಗೆ ಎಸೆದ ಎಲೆಬೇತೂರು ಅಂಚೆ ಕಚೇರಿಯ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.

ಬಡವರಿಗೆ ಆರೋಗ್ಯದ ತೊಂದರೆ ಉಂಟಾದಾಗ ಈ ಕಾರ್ಡ್‌ ಇದ್ದರೆ ಐದು ಲಕ್ಷ ರೂಪಾಯಿವರೆಗೆ ಆರೋಗ್ಯ ಸೌಲಭ್ಯ ಸಿಗುತ್ತದೆ. ಅಂಥ ಕಾರ್ಡ್‌ಗಳನ್ನು ಬಿಸಾಡಿದ್ದಾರೆ ಅಂದರೆ ಅವರು ಏಕೆ ಆ ಹುದ್ದೆಯಲ್ಲಿರಬೇಕು ಎಂದು ಪ್ರಶ್ನಿಸಿದರು.

‘ಕಾರ್ಡ್‌ ವಿತರಣೆ ಮಾಡುವ ಸಮಯಕ್ಕೆ ಚುನಾವಣೆ ಬಂತು. ಚುನಾವಣೆ ಮುಗಿಯುವವರೆಗೆ ಕಾರ್ಡ್‌ ವಿತರಣೆ ಮಾಡದಂತೆ ಮೇಲಧಿಕಾರಿಗಳು ಸೂಚನೆ ನೀಡಿದರು. ಹಾಗಾಗಿ ಕಾರ್ಡ್‌ಗಳು ಮೂಲೆ ಸೇರಿದವು. ಆಮೇಲೆ ವಿತರಣೆ ಮಾಡಿರಲಿಲ್ಲ. ಗುಡಿಸುವವರು ಅದನ್ನು ಚರಂಡಿಗೆ ಹಾಕಿದ್ದಾರೆ. ಎಲೆಬೇತೂರು ಅಂಚೆ ಕಚೇರಿಯಲ್ಲಿ ಇಬ್ಬರು ಇದ್ದಾರೆ. ಅವರಿಬ್ಬರ ಮೇಲೆ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ’ ಎಂದು ಜಿಲ್ಲಾ ಅಂಚೆ ಅಧಿಕಾರಿ ಸಮಜಾಯಿಷಿ ನೀಡಿದರು.

‘ಚುನಾವಣೆ ಮುಗಿದು ಒಂದೂವರೆ ವರ್ಷ ಆಗುತ್ತಾ ಬಂದಿದೆ. ಅದನ್ನು ಏಕೆ ವಿತರಣೆ ಮಾಡಿಲ್ಲ? ಅವರ ಸಂಬಂಧಿಕರದ್ದಾಗಿದ್ದರೆ ಕೊಡುತ್ತಿರಲಿಲ್ಲವೇ? ಬಡವರ ಬಗ್ಗೆ ಕಾಳಜಿ ಇಲ್ವ’ ಎಂದು ಸಂಸದರು ಪ್ರಶ್ನಿಸಿದರು.

‘ಎಲೆಬೇತೂರು ಅಂಚೆ ಕಚೇರಿ ಸಿಬ್ಬಂದಿಯ ಮೇಲೆ ಎಫ್‌ಐಆರ್‌ ಆಗಿರುವುದು ಗೊತ್ತೇನ್ರಿ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಶ್ನಿಸಿದರು. ಅಧಿಕಾರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ.

ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ದಾವಣಗೆರೆ ಕಾರ್ಪೊರೇಶನ್‌ನಲ್ಲಿ 8,952 ಅರ್ಜಿಗಳು ಬಂದಿದ್ದವು. 3,795 ತಿರಸ್ಕೃತಗೊಂಡಿವೆ. 4,121 ಪರಿಶೀಲನೆ ಮಾಡಲಾಗಿದೆ. 3,669ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅಧಿಕಾರಿಗಳು ವರದಿ ಸಲ್ಲಿಸಿದರು. ಪರಿಶೀಲನೆ ಮಾಡಿದವುಗಳಲ್ಲಿ 452 ಎಲ್ಲಿ ಹೋದವು ಎಂದು ಸಂಸದರು ಪ್ರಶ್ನಿಸಿದರು.

ನಿಯಮಬದ್ಧವಾಗಿ ಇರುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ನಿಯಮಬದ್ಧವಾಗಿ ಇಲ್ಲದೇ ಇರುವುದನ್ನು ತಿರಸ್ಕೃತಗೊಳಿಸಿದ್ದೀರಿ. ಉಳಿದವುಗಳನ್ನಷ್ಟೇ ಪರಿಶೀಲನೆ ಮಾಡಿದ್ದೀರಿ. ತಿರಸ್ಕೃತಗೊಳಿಸಿರುವುದರ ಬಗ್ಗೆ ಮಾತನಾಡುತ್ತಿಲ್ಲ. ಅದಲ್ಲದೆಯೂ 452 ಶೌಚಾಲಯ ಏನಾದವು? ಇದೇ ರೀತಿ ಹರಿಹರದಲ್ಲಿ 20 ಮತ್ತು ಮಲೇಬೆನ್ನೂರು ಪಟ್ಟಣ ಪಂಚಾಯಿತಿಯಲ್ಲಿ 10 ವ್ಯತ್ಯಾಸ ಕಂಡು ಬಂದಿವೆ. ಉಳಿದಂತೆ ಚನ್ನಗಿರಿ, ಹೊನ್ನಾಳಿ, ಜಗಳೂರು ನಗರ ಆಡಳಿತಗಳಲ್ಲಿ ಸರಿ ಇವೆ ಎಂದು ಸಂಸದರು ಗಮನ
ಸೆಳೆದರು.

ಸ್ವಚ್ಛತೆಯಲ್ಲಿ ಕೊನೆಯ ಸ್ಥಾನ: ಸ್ವಚ್ಛತೆ ನಿರ್ವಹಣೆಯಲ್ಲಿ ಮೈಸೂರು ಮೊದಲನೇ ಸ್ಥಾನದಲ್ಲಿದೆ. ದಾವಣಗೆರೆ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ನಗರದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾದರೂ ಕಸ ಕಂಡುಬಂದರೆ ಪಾಲಿಕೆ ಆಯುಕ್ತರೇ ನೇರ ಜವಾಬ್ದಾರಿ ಎಂದು ಸಂಸದರು ಎಚ್ಚರಿಸಿದರು.

ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲಾ ಊರುಗಳಲ್ಲಿಯೂ ನೀರು ಒದಗಿಸಲಾಗುತ್ತಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಪ್ರತಿ ಮನೆಗೆ ನಲ್ಲಿ ಒದಗಿಸುವುದು. ಪ್ರತಿಯೊಬ್ಬರಿಗೆ 55 ಲೀಟರ್‌ ನೀರು ಸಿಗುವಂತಾಗಬೇಕು. ಅದಕ್ಕಾಗಿ ಜಲಜೀವನ್‌ ಮಿಷನ್‌ ಅನುಷ್ಠಾನ ಮಾಡಲಾಗುತ್ತಿದೆ ಎಂದುಸಿಇಒ ಪದ್ಮ ಬಸವಂತಪ್ಪ ಉತ್ತರಿಸಿದರು.

ಕಂದಾಯ ಇಲಾಖೆಯಡಿ ಬರುವ ಸಾಮಾಜಿಕ ಭದ್ರತೆ ಯೋಜನೆಯಡಿ ಜುಲೈವರೆಗೆ ಎಲ್ಲರಿಗೂ ವೃದ್ಧಾಪ್ಯ ವೇತನ, ವಿಧವಾ ವೇತನ ಸಹಿತ ಎಲ್ಲ ವೇತನಗಳನ್ನು ತಲುಪಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ತೋಳಹುಣಸೆ ಗ್ರಾಮವೊಂದರಲ್ಲಿಯೇ 150 ಜನರಿಗೆ ಇನ್ನೂ ತಲುಪಿಲ್ಲ ಎಂದು ದಿಶಾ ಸದಸ್ಯ ಮುಪ್ಪಣ್ಣ ಆರೋಪಿಸಿದರು. ಇದು ಒಂದು ಗ್ರಾಮದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೇ ಹೀಗೆ ಇದೆ. ನಿಮ್ಮ ಅಂಕಿ ಸಂಖ್ಯೆಯಲ್ಲಿ ಮಾತ್ರ ತಲುಪಿದೆ ಎಂದಿರುತ್ತದೆ. ಅಲ್ಲಿ ತಲುಪಿರುವುದಿಲ್ಲ ಎಂದು ಶಾಸಕ ‍ಪ್ರೊ. ಲಿಂಗಣ್ಣ
ಆಕ್ಷೇಪಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್ ಅವರೂ ಇದ್ದರು.

ಮನೆ ನಿರ್ಮಾಣ: ತಪ್ಪಿದ ಲೆಕ್ಕ

ಮನೆಗಳ ನಿರ್ಮಾಣ ಪ್ರಗತಿಯ ವಿವರದಲ್ಲಿ ಲೆಕ್ಕಾಚಾರಗಳೇ ತಪ್ಪಿದ್ದವು. ತಳಪಾಯ ಹಂತದಲ್ಲಿ 398, ಕಿಟಕಿ ಹಂತದಲ್ಲಿ 232, ಚಾವಣಿ ಹಂತದಲ್ಲಿ 403 ಹೀಗೆ 1,773 ಮನೆಗಳು ಪ್ರಗತಿಯಲ್ಲಿವೆ ಎಂದು ನಗರ ಯೋಜನೆಗಳ ಅಧಿಕಾರಿ ಮಾಹಿತಿ ನೀಡಿದರು. ಪ್ರಗತಿಯಲ್ಲಿರುವ ಮನೆಗಳನ್ನು ಕೂಡಿದರೆ 1033 ಆಗುವುದೇ ವಿನಾ 1773 ಆಗುವುದಿಲ್ಲ. ಉಳಿದ 740 ಮನೆಗಳು ಎಲ್ಲಿವೆ ಎಂದು ಸಂಸದರು ಪ್ರಶ್ನಿಸಿದರು.

ಇದೇ ರೀತಿ ಬೇರೆ ಬೇರೆ ಯೋಜನೆಗಳ ಮಾಹಿತಿಗಳಲ್ಲೂ ಲೆಕ್ಕ ತಪ್ಪಿರುವುದನ್ನು ಗಮನಿಸಿದ ಸಿದ್ದೇಶ್ವರ, ‘ನೋಡ್ರಿ ಲೆಕ್ಕದಲ್ಲಿ ನಾನು ಹುಷಾರಿದ್ದೇನೆ. ಕೂಡುವುದು, ಕಳೆಯುವುದು ಸರಿಯಾಗಿ ಗೊತ್ತು. ಸರಿಯಾದ ಅಂಕಿ–ಅಂಶವನ್ನು ನೀಡಬೇಕು’ ಎಂದು ಎಚ್ಚರಿಸಿದರು.

2,470 ಮನೆಗಳ ನಿರ್ಮಾಣವನ್ನು ಇನ್ನೂ ಆರಂಭಿಸಿಲ್ಲ. 2015ರಿಂದ 18ರವರೆಗಿನ ಯೋಜನೆಗಳು ಇವು. ಯಾರೂ ಆರಂಭಿಸಿಲ್ವ? ಪ್ರಗತಿ ಕುಂಠಿತವಾಗಿದೆ. ಅವರಿಗೆ ಮನೆ ಬೇಡದಿದ್ದರೆ ಬೇರೆಯವರಿಗಾದರೂ ಉಪಯೋಗವಾಗಲಿ. ಇಲ್ಲಿ ಮನೆಗಳಿಗೆ ಬಹಳ ಬೇಡಿಕೆ ಇದೆ ಎಂದು ಸಂಸದರು ತಿಳಿಸಿದರು. ಅಂಥವರಿಗೆ ರದ್ದು ಮಾಡಲಾಗುವುದು ಎಂದು ನೋಟಿಸ್‌ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಚುನಾವಣೆಗೆ ಸಿದ್ದೇಶ್ವರ ಮತ್ತೆ ಸ್ಪರ್ಧೆ?

ರಸ್ತೆಗಳ ನಿರ್ವಹಣೆ 6 ವರ್ಷ ಸರಿಯಾಗಿ ಮಾಡಬೇಕು ಎಂದು ಸಭೆಯ ನಡುವೆ ಪ್ರಸ್ತಾವಿಸಿದ ಸಂಸದರು, ‘ನನ್ನ ಅವಧಿ ಮೂರು ಮುಕ್ಕಾಲು ವರ್ಷಕ್ಕೆ ಮುಗಿಯತ್ತದೆ ಎಂದು ನೀವು ಅಂದುಕೊಂಡಿರಬಹುದು. ಮತ್ತೆ ಬರುತ್ತೇನೆ’ ಎಂದು ಚಟಾಕಿ ಹಾರಿಸಿದರು.

‘ಇದೇ ಕೊನೆಯ ಚುನಾವಣೆ. ಮುಂದಿನ ಬಾರಿ ಸ್ಪರ್ಧಿಸುವುದಿಲ್ಲ’ ಎಂದು ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದೇಶ್ವರ ಹೇಳಿದ್ದರು. ಇದೀಗ ‘ಮತ್ತೆ ಬರುತ್ತೇನೆ’ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT