ಮಂಗಳವಾರ, ನವೆಂಬರ್ 30, 2021
22 °C
ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

ಉಪಚುನಾವಣೆಯೊಳಗೆ ಬೇಡಿಕೆ ಈಡೇರಿಸಲಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮೇಗಳಗೆರೆ (ಉಚ್ಚಂಗಿದುರ್ಗ): ಉಪ ಚುನಾವಣೆ ಮುಗಿಯುವುದರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲೇಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರಮ ಕೈಗೊಳ್ಳಬೇಕು ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಸಮೀಪದ ಚಿಕ್ಕಮೇಗಳಗೆರೆ ಗ್ರಾಮದಲ್ಲಿ 2ಎ ಮೀಸಲಾತಿಗಾಗಿ ಲಿಂಗಾಯತ ಪಂಚಾಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ಗ್ರಾಮ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಒತ್ತಾಸೆಗೆ ಮಣಿದ ಬೊಮ್ಮಾಯಿ ನೇತೃತ್ವದ ಸರ್ಕಾರ 2 ತಿಂಗಳ ಗಡುವು ಪಡೆದಿದೆ. 6 ತಿಂಗಳುಗಳ ಗಡುವು ಪಡೆದಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ನಿಗದಿತ ಗಡುವಿನೊಳಗೆ ಮೀಸಲಾತಿ ಅನುಮೋದನೆಗೆ ಬೇಕಾದ ವರದಿಯನ್ನು ಸಂಗ್ರಹಿಸಿ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಾಜದ ಋಣ ತೀರಿಸಲು ಚುನಾಯಿತ ಶಾಸಕರು ಒಗ್ಗೂಡಿದರೆ ಮೀಸಲಾತಿ ಪಡೆಯುವ ಕಾಲ ದೂರ ಇಲ್ಲ. ಆದರೆ, ಅಧಿಕಾರದ ದುರಾಸೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಹೋರಾಟಕ್ಕೆ ಇಳಿಯುವ ಶಾಸಕರನ್ನು ಪಕ್ಷದಿಂದ ಕೈಬಿಡುವುದಾಗಿ ಬ್ಲಾಕ್‌ಮೇಲ್ ಮಾರ್ಗ ಅನುಸರಿಸಲಾಗುತ್ತಿದೆ. ಸಮಾಜಕ್ಕೆ ದುಡಿಯುವವರ ಕೈಯನ್ನು ಸಮುದಾಯ ಎಂದಿಗೂ ಕೈ ಬಿಡುವುದಿಲ್ಲ. ಅದನ್ನು ಅರಿತು ಈಗಿನ ಶಾಸಕರು ಧ್ವನಿ ಎತ್ತಬೇಕು ಎಂದು ಹೇಳಿದರು.

ನಿರಂತರ ಹೋರಾಟದಿಂದ ಸಮಾಜದಲ್ಲಿ ಒಗ್ಗಟ್ಟು ಹೆಚ್ಚಿದೆ. ನಿಗದಿತ ಗಡುವಿನೊಳಗೆ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ಮಕ್ಕಳು ಸಹಿತ ಧರಣಿ ಮಾಡಲು ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಪಂಚಮಸಾಲಿ ಸಮಾಜದ ವಿಜಯನಗರ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್, ‘ಸಮಾಜದ ಮಕ್ಕಳು ವ್ಯವಸಾಯಕ್ಕೆ ಸೀಮಿತವಾಗಿರಬಾರದು. ಇತರೆ ಸಮಾಜದ ಮಕ್ಕಳಂತೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅಲ್ಲಿವರೆಗೂ ಹೋರಾಟ ನಡೆಸಲಾಗುವುದು’ ಎಂದು
ಹೇಳಿದರು.

‘ಮೀಸಲಾತಿ ಬೇಡಿಕೆಯ ಹೋರಾಟವನ್ನು ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಈ ಮೂಲಕ ಸಮಾಜದ ಹೋರಾಟದ ಹಾದಿ ತಪ್ಪಿಸುವ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.

ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಅಧ್ಯಕ್ಷ ಅಶೋಕ್ ಗೋಪನಾಳ್, ಮುಖಂಡರಾದ ಬಲ್ಲೂರು ಅಂಜಿನಪ್ಪ, ಸೋಗಿ ಶಾಂತಕುಮಾರ್, ಯಶವಂತ್ ಗೌಡ, ವೀರಣ್ಣ, ಮತ್ತಿಹಳ್ಳಿ ಅಜ್ಜಪ್ಪ, ಸತ್ತೂರು ಜಯಪ್ರಕಾಶ್, ಚನ್ನಬಸಪ್ಪ, ಕಾಶಿನಾಥ್, ನೀಲಪ್ಪ, ಎಂ. ಪರಶುರಾಮ, ಚಂದ್ರಪ್ಪ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು