ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳಿ: ದಾವಣಗೆರೆ ಡಿ.ಸಿ. ಮಹಾಂತೇಶ ಬೀಳಗಿ

Last Updated 13 ಜನವರಿ 2020, 13:14 IST
ಅಕ್ಷರ ಗಾತ್ರ

ದಾವಣಗೆರೆ: ಜನಸ್ಪಂದನ ಸಭೆಯಲ್ಲಿ ಈವರೆಗೆ 105 ಅರ್ಜಿಗಳು ಬಾಕಿ ಇದ್ದು, ಅವುಗಳ ಬಗ್ಗೆ ಶೀಘ್ರ ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಸೂಚಿಸಿದರು.

ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ‘ಸಿಇಒ ಅವರಿಗೆ ಸಂಬಂಧಪಟ್ಟ 8, ದಾವಣಗೆರೆ ತಹಶೀಲ್ದಾರ್‌ಗೆ ಸಂಬಂಧಪಟ್ಟ 45 ಅರ್ಜಿಗಳು ಬಾಕಿ ಇದ್ದು, ಯಾವ ಹಂತದಲ್ಲಿ ಕ್ರಮ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಿ’ ಎಂದು ತಿಳಿಸಿದರು.

11 ತಿಂಗಳಿಂದ ಬಾರದ ಶಿಷ್ಯವೇತನ:ಸಿ.ಜಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ಹೌಸ್ ಸರ್ಜನ್‌ಗಳಿಗೆ 11 ತಿಂಗಳಿನಿಂದ ಶಿಷ್ಯವೇತನ ಬಂದಿಲ್ಲ.

‘ಸಮಸ್ಯೆ ಕುರಿತು ಮುಖ್ಯಮಂತ್ರಿಗೆ ಎರಡು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಾಲೇಜು ಆಡಳಿತ ಮಂಡಳಿಗೆ ಕೇಳಿದರೆ ಅನುದಾನ ಇಲ್ಲ ಎಂದು ಹೇಳುತ್ತಾರೆ. ಮತ್ತೊಮ್ಮೆ ಸಿ.ಎಂ ಭೇಟಿ ಮಾಡಲು ಅನುವು ಮಾಡಿಕೊಡಿ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಆಗ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಭೇಟಿಗೆ ಅನುವು ಮಾಡಿಕೊಡುವುದಾಗಿ ಒಪ್ಪಿಗೆ ಸೂಚಿಸಿದರು.

ಕೊಟ್ಟೂರೇಶ್ವರ ಜಾತ್ರೆಗೆ ದಾವಣಗೆರೆಯಿಂದ ಸಾವಿರಾರು ಭಕ್ತರು ಪಾದಯಾತ್ರೆ ಹೊರಡಲಿದ್ದು, ಅಲ್ಲಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು ಎಂದು ಕೊಟ್ಟೂರೇಶ್ವರ ಸಮಿತಿಯವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಮಾತನಾಡಿ, ‘ನಮ್ಮ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತೇವೆ. ಬೇರೆ ಜಿಲ್ಲೆಗಳಲ್ಲಿ ನಡೆಸಲು ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.

ಕೆ.ಆರ್‌. ಮಾರುಕಟ್ಟೆಗೆ ಬೀದಿ ದೀಪ, ವಿದ್ಯುತ್, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಅಲ್ಲಿನ ವ್ಯಾಪಾರಿಗಳು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ ಹಾಗೂ ನೀವು ಖುದ್ದು ಪರಿಶೀಲಿಸಿ ಆದ್ಯತೆ ಮೇರೆಗೆ ಕೆಲಸ ಮಾಡಿಕೊಡಿ’ ಎಂದು ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರಿಗೆ ಸೂಚಿಸಿದರು.

ಅಶೋಕ ಟಾಕೀಸ್ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಕ್ಕಳ ಸಹಿ ಪಡೆದು ಆ ಮಾಲೀಕ ಆಸ್ತಿಯನ್ನು ಎರಡು ವರ್ಷಗಳ ಹಿಂದೆಯೇ ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ ಎಂದು ಕಣ್ಣೀರು ಹಾಕಿದರು.

ಹೈಸ್ಕೂಲ್ ಮೈದಾನದಲ್ಲೇ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲುಗಡೆ ಮಾಡಬೇಕು ಎಂದು ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದ ಅಲ್ಲಾಭಕ್ಷಿ ಮನವಿ ಸಲ್ಲಿಸಿದರು. ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ದಾವಣಗೆರೆ ನಿವಾಸಿ ಮಲ್ಲಿಕಾರ್ಜುನ ಇಂಗಳೇಶ್ವರ್, ‘ನಗರದ ವೀರಶೈವ ರುದ್ರಭೂಮಿಯಲ್ಲಿ ಮುಳ್ಳು. ಕಸ ಕಡ್ಡಿಗಳಿಂದ ತುಂಬಿದ್ದು, ಅದನ್ನು ಸ್ವಚ್ಛಗೊಳಿಸಬೇಕು ಎಂದು ಮನವಿ ಸಲ್ಲಿಸಿದರು. ಶೀಘ್ರ ರುದ್ರಭೂಮಿ ಸ್ಚಚ್ಛಗೊಳಿಸುವಂತೆ ಆಯುಕ್ತರಿಗೆ ಸೂಚಿಸಿದರು.

ಅಜಾದ್ ನಗರ ನಿವಾಸಿ ತಹಸೀನಾ ಕೌಸರ್, ‘ಒಂದು ವರ್ಷದ ಹಿಂದೆ ನಸ್‍ರುಲ್ಲಾ ಎಂಬುವರೊಂದಿಗೆ ವಿವಾಹವಾಗಿದ್ದು, ಪತಿಯು ತನ್ನನ್ನು ಬಿಟ್ಟು ಹೋಗಿದ್ದಾನೆ. ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿಕೊಂಡಿದ್ದು, ಅವರೊಂದಿಗೆ ಮಾತನಾಡಲು ಆಗುತ್ತಿಲ್ಲ. ದಯವಿಟ್ಟು ಅವರೊಂದಿಗೆ ಮಾತನಾಡಲು ಪೊಲೀಸ್ ಇಲಾಖೆಯಿಂದ ಸಹಾಯ ನೀಡಬೇಕು’ ಎಂದು ಮನವಿ ಸಲ್ಲಿಸಿದರು.

ಜನಸ್ಪಂದನ ಸಭೆಗೆ ಬಂದ ವ್ಯಕ್ತಿಯೊಬ್ಬರು ‘ನನಗೆ ತಲೆ ಸುತ್ತು, ಹೊಟ್ಟೆ ನೋಯುತ್ತಿದೆ. ನನಗೆ ಯಾರೋ ವಾಮಚಾರ ಮಾಡಿಸಿದ್ದಾರೆ’ ಪರಿಹಾರ ಕೊಡಿಸಿ’ ಎಂದು ಕೇಳಿಕೊಂಡು ಬಂದಿದ್ದು, ಸಭೆಯಲ್ಲಿ ನಗೆಪಾಟಿಲಿಗೀಡಾಯಿತು.

ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT