ಗುರುವಾರ , ಆಗಸ್ಟ್ 11, 2022
21 °C
ಗ್ರಾ.ಪಂ. ಚುನಾವಣಾ ಆಕಾಂಕ್ಷಿಗಳ ಸಭೆಯಲ್ಲಿ ಸಲಹೆ

ಬಿಜೆಪಿ ವೈಫಲ್ಯ ಜನರಿಗೆ ತಿಳಿಸಿ; ಗ್ರಾ.ಪಂ. ಚುನಾವಣಾ ಆಕಾಂಕ್ಷಿಗಳ ಸಭೆಯಲ್ಲಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಿಜೆಪಿ ಸರ್ಕಾರ ರೈತ, ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದೆ. ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಪ್ರತಿಭಟನಾನಿರತರ ಮೇಲೆ ಗುಂಡು ಹಾರಿಸಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ದೂರಿದರು. 

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಚುನಾವಣಾ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದರು.

ದಾವಣಗೆರೆಯ ಅಭಿವೃದ್ಧಿಯಲ್ಲಿ ಬಿಜೆಪಿಯ ಕೊಡುಗೆ ಏನೂ ಇಲ್ಲ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ದಾವಣಗೆರೆ ಸ್ಮಾರ್ಟ್‌ ಸಿಟಿಗೆ ಆಯ್ಕೆ ಆಗಿದೆ. ಕಾಂಗ್ರೆಸ್‌ನ ಅಭಿವೃದ್ಧಿ ಪರಿಗಣಿಸಿ ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಗಳ ಆಯ್ಕೆಗೆ ಎಲ್ಲರೂ ಒತ್ತು ನೀಡಬೇಕು ಎಂದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ‘ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬಾರದು ಎಂದು ಹಲವು ಪ್ರಯತ್ನ ನಡೆಸಿತ್ತು. ಗ್ರಾಮ ಮಟ್ಟದಲ್ಲಿ ಯಾವುದೇ ಅಭಿವೃದ್ಧಿಯಾಗದ ಕಾರಣ ಜನರ ಬಳಿಗೆ ಹೋಗಲು ಬಿಜೆಪಿ ನಾಯಕರಿಗೆ ಮುಖ ಇರಲಿಲ್ಲ. ಅದಕ್ಕೆ ಚುನಾವಣೆ ತಡೆಯುವ ಕಸರತ್ತು ನಡೆಸಿದ್ದರು. ಈಗ ಗ್ರಾಮ ಸ್ವರಾಜ್‌ ಸಮಾವೇಶ ನಡೆಸುತ್ತಿದ್ದಾರೆ. ಗ್ರಾಮ ಸ್ವರಾಜ್‌ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ಅವಧಿಯಲ್ಲಿ ಜಿಲ್ಲೆಯಲ್ಲಿ ಬಡವರಿಗೆ 50 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಎಷ್ಟು ಮನೆ ನೀಡಿದ್ದಾರೆ. ಈ ಬಗ್ಗೆ ದಾಖಲೆ ನೀಡಲಿ’ ಎಂದು ಕುಟುಕಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ, ‘ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್‌ ಬಗ್ಗೆ ಸಮರ್ಪಕ ಪ್ರಚಾರ ನಡೆಯಬೇಕು. ಕಾಂಗ್ರೆಸ್‌ ಮತಗಳನ್ನು ಕ್ರೋಡೀಕರಿಸಬೇಕು’ ಎಂದು ಸಲಹೆ ನೀಡಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ಗ್ರಾಮ ಪಂಚಾಯಿತಿ ಚುನಾವಣೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮುಖಂಡರಾದ ಮುದೇಗೌಡ್ರು ಗಿರೀಶ್‌, ಬಿ.ಎಚ್‌. ವೀರಭದ್ರಪ್ಪ, ಪರಶುರಾಮ‌್, ಆಯೂಬ್‌ ಪೈಲ್ವಾನ್‌ ಮಾತನಾಡಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್‌ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ನಂಜಾನಾಯ್ಕ್, ಮಹಮ್ಮದ್‌ ಖಾಲೀದ್‌ ಸೇರಿ ಯೂತ್‌ ಕಾಂಗ್ರೆಸ್‌ ಸದಸ್ಯರು, ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು