ಸೋಮವಾರ, ಮಾರ್ಚ್ 30, 2020
19 °C

ಎರೆಬೂದಿಹಾಳ್‌ನಲ್ಲಿ ರಸ್ತೆಯೇ ಸ್ಮಶಾನ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಈ ಊರಿನಲ್ಲಿ ಯಾರಾದರೂ ಮೃತಪಟ್ಟರೆ ರಸ್ತೆ ಬದಿಯಲ್ಲೇ ದಹನ ಮಾಡಲಾಗುತ್ತದೆ. ಸ್ಮಶಾನದ ವ್ಯವಸ್ಥೆ ಮಾಡಿ ಎಂಬ ಕೂಗು ಎದ್ದು ದಶಕಗಳೇ ಕಳೆದರೂ ಪರಿಹಾರ ದೊರೆತಿಲ್ಲ.

ಇದು ದೇವರಬೆಳಕೆರೆಯ ಬಳಿಯ ಎರೆಬೂದಿಹಾಳ್‌ನ ನಿವಾಸಿಗಳ ಸಮಸ್ಯೆ.

‘ಇಲ್ಲಿ ಸ್ಮಶಾನಕ್ಕಾಗಿ ಮೀಸಲಾಗಿರುವ ಭೂಮಿ ಖಾಸಗಿಯವರಲ್ಲಿದೆ. ಸ್ಮಶಾನದ ಭೂಮಿಯನ್ನು ಸ್ಮಶಾನಕ್ಕಾಗಿಯೇ ಬಿಡಿಸಿಕೊಡಲೆಂದು ಸ್ಥಳೀಯರ ಪ್ರತಿನಿಧಿಗಳು, ಅಧಿಕಾರಿಗಳು ಕೆಲವು ವರ್ಷಗಳ ಹಿಂದೆ ಹೋಗಿದ್ದಾಗ ವಿವಾದಕ್ಕೆ ಸಂಬಂಧಿಸಿದ ಮನೆಯ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದ. ಹಾಗಾಗಿ ಮತ್ತೆ ಈ ಭೂಮಿ ಬಿಡಿಸಿಕೊಡಲೆಂದು ಯಾರೂ ಹೋಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗರಾಜ್‌.

ಹಿಂದೆ ಎಲ್ಲರೂ ಹಳೇ ಊರಿನಲ್ಲಿ ಇದ್ದರು. ದೇವರಬೆಳಕೆರೆಯನ್ನು ಎತ್ತರ ಮಾಡುವ ಸಮಯದಲ್ಲಿ ಅಲ್ಲಿದ್ದವರನ್ನೆಲ್ಲ ಇಲ್ಲಿಗೆ ಸ್ಥಳಾಂತರಿಸಲಾಯಿತು. ಜಮೀನು ಇರುವವರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಅವರ ಜಮೀನಿನ ಬದಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಭೂಮಿ ಇಲ್ಲದವರಿಗೆ ರಸ್ತೆಯ ಬದಿಯೇ ಸ್ಮಶಾನ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆ ನಿರ್ಮಾಣದ ಕಾಲದಲ್ಲಿ ಮಣ್ಣು ಹಾಕಿಕೊಳ್ಳಲೆಂದು ತಾತ್ಕಾಲಿಕವಾಗಿ ಭೂಮಿಯನ್ನು ಖಾಸಗಿಯವರಿಗೆ ನೀಡಲಾಗಿತ್ತು. ನಿರ್ಮಾಣ ಕಾರ್ಯ ಮುಗಿದ ಬಳಿಕ ಈ ಭೂಮಿಯನ್ನು ಬಿಟ್ಟುಕೊಟ್ಟಿಲ್ಲ. ಈ ಭೂಮಿಯನ್ನು ಬಿಡಿಸಿಕೊಡಬೇಕು. ಇಲ್ಲವೇ ಬೇರೆಡೆ ಸ್ಮಶಾನಕ್ಕೆ ಜಮೀನು ಒದಗಿಸಬೇಕು ಎಂಬುದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ಗಿರೀಶ್‌ ಅವರ ಒತ್ತಾಯ.

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಿಲ್ಲದ ‍ಪ್ರಕರಣ ಇದು. ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಸಮಸ್ಯೆ ಪರಿಹರಿಸಬೇಕು. ಈ ಬಗ್ಗೆ ಹಿಂದಿನ, ಈಗಿನ ಶಾಸಕರಿಗೆ, ಅಧಿಕಾರಿಗಳಿಗೆ ದೂರು ನೀಡಲಾಗಿದೆ’ ಎನ್ನುತ್ತಾರೆ ಪಂಚಾಯಿತಿ ಸದಸ್ಯೆ ಎಂ. ಮಂಜುಳಾ

ಈ ಭೂಮಿ ವಿವಾದ ಡಿಸಿ ಕೋರ್ಟ್‌ನಲ್ಲಿದೆ. ಏನು ಆದೇಶ ಬರುತ್ತದೆ ಎಂಬುದನ್ನು ಕಾದು ನೋಡಬೇಕು. ಆದೇಶ ಬಂದ ಮೇಲೆ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇರೆ ಭೂಮಿ ಇಲ್ಲ. ಎಲ್ಲ ಕಡೆ ಕೃಷಿಭೂಮಿಯೇ ಇದೆ. ಹಾಗಾಗಿ ಸ್ಮಶಾನಕ್ಕೆ ಭೂಮಿ ಕಾದಿರಿಸುವುದು ಕಷ್ಟವಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಸುರೇಶ್‌ ಸಮಸ್ಯೆ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)