ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ಬದುಕಿಸುವುದೇ ಸವಾಲು: ಡಾ. ರವಿ ಅನುಭವದ ಮಾತು

Last Updated 7 ಜುಲೈ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮಲ್ಲಿಗೆ ರೋಗಿಗಳು ಬರುವುದೇ ಅತಿ ಗಂಭೀರ ಪರಿಸ್ಥಿತಿಯಲ್ಲಿ. ಹಾಗಾಗಿ ಅವರನ್ನು ಉಳಿಸಿ ಕಳುಹಿಸುವುದೇ ದೊಡ್ಡ ಸವಾಲು. ಕೊರೊನಾ ಸೋಂಕು ತಗುಲಿದ ಬಳಿಕ 14 ಮಂದಿಯನ್ನು ಗುಣಮುಖರನ್ನಾಗಿ ಮಾಡಿ ಕಳುಹಿಸಿದ್ದೇವೆ’.

ಜೆಜೆಎಂ ವೈದ್ಯಕೀಯ ಕಾಲೇಜಿನ ಅನಸ್ತೇಶಿಯಾ ಮತ್ತು ಕ್ರಿಟಿಕಲ್ ಕೇರ್‌ ಮುಖ್ಯಸ್ಥ, ಇತರ ಕಾಯಿಲೆಗಳ ಜತೆಗೆ ಕೊರೊನಾ ಸೊಂಕು ತಗಲಿದವರ ಚಿಕಿತ್ಸೆಯ ಜವಾಬ್ದಾರಿ (ವಿಐಸಿಯು) ಹೊತ್ತಿರುವ ಡಾ.ಆರ್‌. ರವಿ ತಮ್ಮ ತಂಡದ ಕೆಲಸವನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

ತೀವ್ರ ಉಸಿರಾಟದ ಸಮಸ್ಯೆ, ಮೂತ್ರಪಿಂಡ–ಮೆದುಳು–ಹೃದಯ–ಯಕೃತ್ ಹೀಗೆ ಯಾವುದರ ಸಮಸ್ಯೆಯಿಂದ ಬಳುತ್ತಿದ್ದಾರೆ ಎಂಬುದನ್ನು ನೋಡಿ ಅದಕ್ಕೆ ತಕ್ಷಣ ಸ್ಪಂದಿಸಬೇಕು. ಮೆದುಳು ಕೆಲಸ ನಿಲ್ಲಿಸದಂತೆ ನೋಡಿಕೊಳ್ಳಬೇಕು. ಮೂತ್ರದ ಸಮಸ್ಯೆ ಇದ್ದರೆ ಪೈಪ್ ಹಾಕಬೇಕು. ಉಸಿರಾಟದ ಸಮಸ್ಯೆ ಇದ್ದಾಗ ಹೈ ಫ್ಲೋ ನೇಸಲ್‌ ಬಳಸಬೇಕು. ಶ್ವಾಸನಾಳಕ್ಕೆ ಆಕ್ಸಿಜನ್‌ ಪೈಪ್‌ ಅಳವಡಿಸುವಾಗ ಆ ವ್ಯಕ್ತಿ ಕೆಮ್ಮಿದರೆ ವೈರಸ್‌ ಹರಡುತ್ತದೆ. ಅದೆಲ್ಲವನ್ನೂ ಲೆಕ್ಕಿಸದೆ ಕೆಲಸ ಮಾಡಬೇಕು. ಹಾಗಾಗಿ ಅತ್ಯಂತ ಒತ್ತಡದಿಂದ ವಿಐಸಿಯುನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಪ್ರತಿ ಬೆಡ್‌ನ ರೋಗಿಯೂ ದೊಡ್ಡ ಸಮಸ್ಯೆ ಎದುರಿಸುತ್ತಿರುತ್ತಾರೆ. ಹಾಗಾಗಿ ಅಲ್ಲಿ ಕೆಲಸ ಮಾಡುವ ವೈದ್ಯರು, ಸಿಬ್ಬಂದಿ 8 ಗಂಟೆ ಪಿಪಿಇ ಕಿಟ್‌ ಹಾಕಿಕೊಂಡೇ ಇರಬೇಕು. ಶೌಚಾಲಯಕ್ಕೆ ಹೋಗಲೂ ಅವಕಾಶ ಇರುವುದಿಲ್ಲ. ನೀರು ಕುಡಿಯುವುದೂ ಕಷ್ಟ. ಇತರ ವಾರ್ಡ್‌ಗಳಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್‌ ಬಿಚ್ಚಿಟ್ಟು ಹೋಗಲು ಅವಕಾಶ ಇರುತ್ತದೆ. ಇದೆಲ್ಲವನ್ನೂ ಎದುರಿಸಲು ಸಜ್ಜಾಗಿಯೇ ನಮ್ಮ ತಂಡ ಕೆಲಸ ಮಾಡುತ್ತಿದೆ ಎಂದು ಚಿಕಿತ್ಸೆ ನೀಡುವ ಕಷ್ಟ ವಿವರಿಸಿದರು.

‘ನಾನೇ ಸ್ವತಃ ಒಳಗೆ ಹೋದರೆ ವಾರದ ನಂತರ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆಗ ನಿರ್ವಹಣೆ ಕಷ್ಟವಾಗುತ್ತದೆ. ನಾನು ವಿಐಸಿಯು ಒಳಗೆ ಹೋಗುವುದಿಲ್ಲ. ಅಲ್ಲಿರುವ ಪ್ರತಿಯೊಬ್ಬರ ಸಮಸ್ಯೆಗಳನ್ನು ಹೊರಗೆ ಕುಳಿತು ನಾನು ವಿಐಸಿಯು ಮೊಬೈಲ್‌ ಆ್ಯಪ್‌ ಮೂಲಕ ಪರಿಶೀಲಿಸುತ್ತೇನೆ. ಅವರಿಗೆ ಯಾವ ಚಿಕಿತ್ಸೆ ಕೊಡಬೇಕು ಎಂದು ಸೂಚಿಸುತ್ತೇನೆ. ಅದನ್ನು ನಮ್ಮ ವೈದ್ಯರು ನೀಡುತ್ತಾರೆ. ನೀವು ಕ್ವಾರಂಟೈನ್‌ಗೆ ಹೋದರೆ ಕಷ್ಟ. ಹೀಗಾಗಿ ಹೊರಗಿನಿಂದಲೇ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕೂಡ ತಿಳಿಸಿದ್ದಾರೆ. ಅವರ ಬೆಂಬಲದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಜೆಜೆಎಂ ವೈದ್ಯಕೀಯ ಕಾಲೇಜು, ಎಸ್‌ಎಸ್‌ಐಎಂಸಿ ಮತ್ತು ಜಿಲ್ಲಾ ಆಸ್ಪತ್ರೆಯ ವೈದ್ಯರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಪತ್ನಿ ವೈದ್ಯೆ. ಮಗಳು ಎಂಬಿಬಿಎಸ್ ಮಾಡುತ್ತಿದ್ದಾಳೆ. ನಾನು ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿದ್ದೇನೆ. ಅಲ್ಲಿಗೇ ಊಟ ಬರುತ್ತದೆ. ಮನೆ ಬಿಟ್ಟರೆ ಸಿ.ಜಿ. ಆಸ್ಪತ್ರೆಗೆ ಬರುತ್ತೇನೆ. ಬೇರೆಲ್ಲೂ ಹೋಗುವುದಿಲ್ಲ. ಅನಿವಾರ್ಯ ಮೀಟಿಂಗ್‌ಗಳಿದ್ದರೆ ಅಷ್ಟೇ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಬರುತ್ತೇನೆ. ರಾಜ್ಯದಾದ್ಯಂತ ಇ–ರೌಂಡ್ಸ್‌ ಎಂದು ಬೆಳಿಗ್ಗೆ 11 ಮತ್ತು ಸಂಜೆ 5ಕ್ಕೆ ಇರುತ್ತದೆ. ತಜ್ಞ ವೈದ್ಯರೆಲ್ಲ ಮಾಡುವ ಕೆಲಸ ವಿವರಿಸುತ್ತಾರೆ. ದಾವಣಗೆರೆಯಲ್ಲಿ ನಾನು ಮಾಡಿರುವ ಕೆಲಸ ವಿವರಿಸುತ್ತೇನೆ’ ಎಂದು ಕೆಲಸದ ಪರಿ ವಿವರಿಸಿದರು.

‘ಒಂದು ವಾರ ಕೆಲಸ: ಬಳಿಕ ಕ್ವಾರಂಟೈನ್‌’

ದಿನದ 24 ಗಂಟೆಗಳೂ ಕೆಲಸ ಮಾಡಬೇಕು. ಹಾಗಾಗಿ ಪ್ರತಿ 8 ಗಂಟೆಗೆ ಒಂದು ತಂಡದಂತೆ ದಿನಕ್ಕೆ ಮೂರು ತಂಡಗಳು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತವೆ. ಒಂದು ವಾರ ಕೆಲಸ ಮಾಡಿದ ಮೇಲೆ ಅವರನ್ನು ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. ಒಂದು ವಾರದ ನಂತರ ಸ್ವ್ಯಾಬ್‌ ತೆಗೆದು ಪರೀಕ್ಷೆ ನಡೆಸಲಾಗುತ್ತದೆ.

ಒಂದು ಪಾಳಿಯಲ್ಲಿ ಒಬ್ಬ ಹೌಸ್‌ ಸರ್ಜನ್‌, ಒಬ್ಬ ಸ್ನಾತಕೋತ್ತರ ವಿದ್ಯಾರ್ಥಿ, ಒಬ್ಬ ಸ್ಟಾಫ್‌, ಇಬ್ಬರು ನರ್ಸ್‌ಗಳು, ಇಬ್ಬರು ವಾರ್ಡ್‌ ಬಾಯ್‌ ಹೀಗೆ ಏಳು ಮಂದಿ ಒಂದು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.

ಡಾ. ಉಮಾ ಬಿ.ಆರ್‌., ಡಾ, ಸಂಜಯ್‌ ಎಸ್‌.ಟಿ, ಡಾ. ಅಬ್ದುಲ್‌ ಸಬ್ಬೀರ್‌, ಡಾ. ಡಿ.ಬಿ. ಪ್ರಕಾಶ್‌, ಡಾ. ಬಸವರಾಜ್‌, ಡಾ. ಶಿಲ್ಪಾಶ್ರೀ ಎ.ಎಂ., ಡಾ. ಪ್ರಭು ಬಿ.ಜಿ., ಡಾ.ಶಶಿಧರ್, ಡಾ.ಸಂತೋಷ್‌ ಕೆ. ಗೌರೋಜಿ, ಡಾ. ಸುಮಾ ಕೆ.ವಿ., ಡಾ. ಪೂಜಾ ಎಂ.ಎನ್‌., ಡಾ. ರೋನಿ ಮ್ಯಾಥ್ಯು, ಡಾ. ಅಶೋಕ್‌ ಆರ್‌., ಡಾ. ಪ್ರಿಯದರ್ಶಿನಿ ಎಂ.ಬಿ., ಡಾ. ನಂದಿನಿ, ಡಾ. ರವಿಶಂಕರ್‌ ಆರ್‌.ಬಿ., ಡಾ. ಅನಿತಾ ಹಂಜಿ, ಡಾ. ನವೀನ್‌ ಕುಮಾರ್‌ ಸಿ.ಪಿ., ಡಾ. ದಿಲೀಪ್‌ ಸಿ. ನಾಯ್ಕ, ಡಾ. ದಿನೇಶ್‌, ಡಾ. ಜಿ.ಮಾರುತಿ ಪ್ರಸಾದ್‌, ಡಾ. ಕಲ್ಲೇಶ್‌, ಡಾ. ಸಾಗರ್‌ ಎಸ್‌.ಎಂ., ಡಾ. ಪ್ರಶಾಂತ್‌, ಡಾ. ಅಶೋಕ್‌ ಕುಮಾರ್‌, ಡಾ. ದೀಪಕ್‌, ಡಾ. ಚಿರಾಗ್‌ ಪ್ರಭು, ಡಾ.ವಿಜಯ್ ಚಂದ್ರಪ್ಪ, ಡಾ. ರಾಘವೇಂದ್ರ, ಡಾ. ಧೀರಜ್ ಆರ್‌. ಪಟೇಲ್‌, ಡಾ.ಎಂ.ಜೆ.ಎಂ. ಶರ್ಮ, ಡಾ.ವಿಶ್ವಾಸ್‌ ಜಿ.ಕೆ., ಡಾ. ಮಮತಾ ಎಚ್‌.ಕೆ., ಡಾ. ಗಂಗಾಧರ ಗೌಡ, ಡಾ. ಸುಜಾತಾ, ಡಾ. ಸ್ಮಿತಾ ವೈ, ಡಾ. ಶಿವಕುಮಾರ್‌ ಕೆ.ಪಿ., ಡಾ. ಮಧುಸೂದನ್‌, ಡಾ. ಅನಸೂಯ ಹೆಗಡೆ, ಡಾ. ಅರುಣ್‌ ಅಜ್ಜಪ್ಪ ಪಾಳಿಗೆ ಒಬ್ಬರಂತೆ 13 ವಾರ ಕಾರ್ಯನಿರ್ವಹಿಸಿದ ವೈದ್ಯರು ಇವರು ಎಂದು ಡಾ. ರವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT