ಭಾನುವಾರ, ಏಪ್ರಿಲ್ 18, 2021
25 °C
ಕಾಂಗ್ರೆಸ್‌ ತನ್ನ ಸದಸ್ಯರನ್ನೇ ಉಳಿಸಿಕೊಳ್ಳಲು ಪರದಾಡುವ ಪರಂಪರೆ ಮುಂದವರಿಕೆ

ದಾವಣಗೆರೆ ಪಾಲಿಕೆ| ಪಕ್ಷ ಬೇರೆ, ಸಂಘಟನೆ ಬೇರೆ ಎಂದವರ ಏಟಿಗೆ ಕಾಂಗ್ರೆಸ್‌ ತತ್ತರ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪಕ್ಷ ಬೇರೆ, ಹಿಂದೂ ಸಂಘಟನೆ ಬೇರೆ ಎಂದು ಆಗಾಗ ಹೇಳುತ್ತಿದ್ದ ವಿಶ್ವ ಹಿಂದೂ ಪರಿಷದ್‌ ಜಿಲ್ಲಾ ಅಧ್ಯಕ್ಷ, ಮೇಯರ್‌ ಅಭ್ಯರ್ಥಿ ದೇವರಮನಿ ಶಿವಕುಮಾರ್‌ ನೀಡಿದ ಏಟಿಗೆ ಕಾಂಗ್ರೆಸ್‌ ತತ್ತರಗೊಂಡಿದೆ. ಬಿಜೆಪಿಗೆ ಪಾಠ ಕಲಿಸಿ ಅಧಿಕಾರ ಹಿಡಿಯಲು ಹೊರಟಿದ್ದ ಕಾಂಗ್ರೆಸ್‌ಗೆ ತನ್ನ ಸದಸ್ಯರನ್ನೇ ಉಳಿಸಿಕೊಳ್ಳಲು ಸಾಧ್ಯವಾಗದೇ ಹೋಯಿತು. ಬೇರೆಯವರನ್ನು ಸೆಳೆಯಲು ತಂತ್ರ ರೂಪಿಸುತ್ತಲೇ ತನ್ನವರನ್ನು ಬಿಗಿ ಹಿಡಿತದಲ್ಲಿ ಇಟ್ಟುಕೊಳ್ಳದೇ ಪರದಾಡುವ ತನ್ನ ಪರಂಪರೆಯುನ್ನು ಕಾಂಗ್ರೆಸ್‌ ಈ ಬಾರಿಯೂ ಮುಂದುವರಿಸಿತು.

ಕಳೆದ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಬಲ ಇವೆ. ಹಾಗಾಗಿ ಲಾಟರಿ ಎತ್ತಬೇಕಾಗುತ್ತದೆ. ಅದೃಷ್ಟದಾಟದಲ್ಲಿ ಗೆದ್ದರೂ ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಕಾಂಗ್ರೆಸ್‌ಗೆ ತನ್ನದೇ ಪಕ್ಷದ ಮೂವರು ಸದಸ್ಯರು ಗೈರು ಹಾಜರಾಗಿ ತನ್ನವರಿಂದಲೇ ಹೊಡೆತ ತಿಂದಿತ್ತು. ಆ ಮೂವರಲ್ಲಿ ಒಬ್ಬರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೋದರೆ, ಮತ್ತಿಬ್ಬರು ಪಕ್ಷದಲ್ಲೇ ಉಳಿದರು. ಶಿಸ್ತು ಕ್ರಮ ಎಂಬುದೆಲ್ಲ ಬಾಯಿಮಾತಿಗಷ್ಟೇ ಉಳಿಯಿತು.

ಈ ಬಾರಿ ಬಿಜೆಪಿ ಬೆಂಬಲಿತರಲ್ಲಿ ಇಬ್ಬರನ್ನು ಗೈರು ಹಾಜರು ಮಾಡಿಸಿ ಕಳೆದ ವರ್ಷದ ಮುಯ್ಯಿ ತೀರಿಸಲು ಕಾಂಗ್ರೆಸ್‌ ಪ್ರಯತ್ನಿಸಿತ್ತು. ಅದರ ಮಾತುಕತೆ ನಡೆಯುತ್ತಿರುವ ಹೊತ್ತಿಗೇ ಮೇಯರ್ ಅಭ್ಯರ್ಥಿ  ದೇವರಮನಿ ಶಿವಕುಮಾರ್‌ ಹೊರನಡೆದರು. ಬಳಿಕ ಅವರು ಜಿಎಂಐಟಿಯಲ್ಲಿ ಕಾಣಿಸಿಕೊಂಡಿದ್ದಲ್ಲದೇ ತನ್ನ ಪಾಲಿಕೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅಲ್ಲದೇ ಕಾಂಗ್ರೆಸ್‌ನ ತಂತ್ರಗಾರಿಕೆಯೂ ಬಿಜೆಪಿಗೆ ಗೊತ್ತಾಗಿ ಆ ಪ್ರಯತ್ನವೂ ವಿಫಲವಾಯಿತು.

ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಗಳು

ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರ ಮಗಳು ವೀಣಾ ನಂಜಣ್ಣ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರ ಮಗ ರಾಕೇಶ್‌ ಜಾಧವ್‌ ಮೇಯರ್ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಆದರೆ ಸ್ವತಃ ರವೀಂದ್ರನಾಥ್‌ ಅವರೇ ಮಗಳ ಪರ ಗಟ್ಟಿಧ್ವನಿ ಎತ್ತಲಿಲ್ಲ. ಮುಂದೆ ಮಹಿಳಾ ಮೀಸಲಾತಿ ಬಂದಾಗ ನೋಡೋಣ ಎಂದು ಸುಮ್ಮನಾದರು. ಇತ್ತ ರಾಕೇಶ್‌ ಇನ್ನೂ ಯುವಕ ಮುಂದೆ ಅವಕಾಶಗಳು ಇವೆ ಎಂದು ಅವರನ್ನೂ ಸುಮ್ಮನಾಗಿಸಲಾಯಿತು. ಸಂಘ ಪರಿವಾರದ ಒಲವು ಗಳಿಸಿದ್ದ ಎಸ್‌.ಟಿ. ವೀರೇಶ್‌ ಅವರನ್ನು ಮೇಯರ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ನಾಯಕರು ತೀರ್ಮಾನ ಕೈಗೊಂಡಿದ್ದರು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಬೇಗ ಘೋಷಣೆ

ಗಡಿಗುಡಾಳ್‌ ಮಂಜುನಾಥ್‌, ಜೆ.ಎನ್‌. ಶ್ರೀನಿವಾಸ್‌, ಚಮನ್‌ಸಾಬ್‌ ಮುಂತಾದವರು ಮೇಯರ್‌ ಆಕಾಂಕ್ಷಿಗಳಾಗಿದ್ದರೂ ಅವರನ್ನು ಸಮಾಧಾನಪಡಿಸಿ ದೇವರಮನಿ ಶಿವಕುಮಾರ್‌ ಅವರನ್ನೇ ಮೇಯರ್ ಅಭ್ಯರ್ಥಿ ಎಂದು ಕಾಂಗ್ರೆಸ್‌ ವರಿಷ್ಠರು ತೀರ್ಮಾನಿಸಿದ್ದರು. ಈ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಅಧಿಕಾರ ಹಿಡಿಯುವ ತಂತ್ರಗಾರಿಕೆಗೆ ಉ‍ಪಯೋಗವಾಗಲಿ ಎಂಬ ಕಾರಣಕ್ಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬೇಗನೇ ಅಭ್ಯರ್ಥಿ ಹೆಸರನ್ನು ತನ್ನ ಸದಸ್ಯರಿಗೆ ತಿಳಿಸಲಾಗಿತ್ತು ಎಂದು ಕಾಂಗ್ರೆಸ್‌ ಮುಖಂಡರು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯೆ ಕೇಳಲು ದೇವರಮನಿ ಶಿವಕುಮಾರ್‌ ಬುಧವಾರ ಕೂಡ ಕರೆ ಸ್ವೀಕರಿಸಲಿಲ್ಲ.

‘ನಂಬಿಕೆದ್ರೋಹದಿಂದ ಹಿನ್ನಡೆ’

ಸಂಘಟನೆಗೆ ಕೆಲಸ ಮಾಡುವುದು ಬೇರೆ, ಪಕ್ಷ ಬೇರೆ, ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಸತ್ತರೂ ದ್ರೋಹ ಬಗೆಯಲ್ಲ ಎಂದು ಮಂಗಳವಾರದ ವರೆಗೆ ಹೇಳಿಕೊಂಡು ತಿರುಗಾಡುತ್ತಿದ್ದ ದೇವರಮನಿ ಶಿವಕುಮಾರ್‌ ನಂಬಿಕೆ ದ್ರೋಹ ಮಾಡಿದ್ದರಿಂದಲೇ ಹಿನ್ನಡೆಯಾಯಿತು ಎಂದು ಕಾಂಗ್ರೆಸ್‌ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೇಯರ್‌ ಅಭ್ಯರ್ಥಿಯನ್ನಾಗಿ ಅವರನ್ನೇ ಮಾಡಲಾಗಿತ್ತು. ಆದರೆ ರಣರಂಗಕ್ಕೆ ಇಳಿಯುವ ಮೊದಲೇ ಶಸ್ತ್ರತ್ಯಾಗ ಮಾಡಿದ ಅವರನ್ನು ಏನೆಂದು ಕರೆಯಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಎಲ್ಲ ಸದಸ್ಯರು ಶಿವಕುಮಾರ್ ಜತೆಗೆ ಇದ್ದೆವು. ಬಾಪೂಜಿ ಗೆಸ್ಟ್‌ ಹೌಸ್‌ನಲ್ಲಿ ಚರ್ಚೆ ಮಾಡುತ್ತಿದ್ದೆವು. ಅಲ್ಲಿಂದ ಅವರು ಹೊರಹೋದರು. ಸ್ವಲ್ಪ ಹೊತ್ತಿನಲ್ಲಿ ಅವರು ಬಿಜೆಪಿಯವರ ಜತೆಗೆ ಇದ್ದಾರೆ ಎಂದು ಗೊತ್ತಾಗಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ ಎಂದು ಬೇಸರಿಸಿದರು.

‘ನಾವು ಕರೆದಿಲ್ಲ ಅವರೇ ಬಂದರು’

ಬಿಜೆಪಿಯ ಅಭ್ಯರ್ಥಿ ಮೇಯರ್‌ ಆಗಲು ಬೇಕಾದಷ್ಟು ಮತಗಳು ನಮ್ಮಲ್ಲೇ ಇದ್ದವು. ನಾವು ಯಾರನ್ನೂ ಕರೆಯಲು ಹೋಗಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಬೇಜಾರಾಗಿ ಬಂದಿದ್ದಾರೆ. ನಮ್ಮಲ್ಲಿಗೆ ಬರುವುದಾಗಿ ಹೇಳಿದ್ದರಿಂದ ಬೇಷರತ್ತಾಗಿ ಬರಮಾಡಿಕೊಂಡೆವು. ಅವರು ಮಂಗಳವಾರವೇ ರಾಜೀನಾಮೆ ಸಲ್ಲಿಸಿದ್ದು, ಅದನ್ನು ಅಂಗೀಕರಿಸಲಾಗಿದೆ. ಯಾವುದೇ ಆಪರೇಷನ್‌ ಕಮಲ ನಡೆಸಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.

‘ಯಾವ ಆಮೀಷಗಳನ್ನು ಒಡ್ಡಿಲ್ಲ. ಆಮೀಷಗಳನ್ನು ಒಡ್ಡುವ ವ್ಯಕ್ತಿಯೇ ನಾನಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು