ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಲಾರಿ ಮಾಲೀಕರು, ವರ್ತಕರ ಸಂಘರ್ಷ ಅಂತ್ಯ

ಸಂಧಾನ ಸಭೆಯಲ್ಲಿ ಬೇಡಿಕೆ ಈಡೇರಿಕೆ ಸಂಬಂಧ ಚರ್ಚೆ
Last Updated 5 ನವೆಂಬರ್ 2020, 15:33 IST
ಅಕ್ಷರ ಗಾತ್ರ

ದಾವಣಗೆರೆ: ಕೆಲ ದಿನಗಳಿಂದ ನಡೆಯುತ್ತಿದ್ದ ಲಾರಿ ಮಾಲೀಕರು ಹಾಗೂ ವರ್ತಕರ ನಡುವಿನ ಸಂಘರ್ಷ ಸದ್ಯಸುಖಾಂತ್ಯ ಕಂಡಿದೆ.

ಇಲ್ಲಿನ ಹೊಸ ಬಸ್‌ ನಿಲ್ದಾಣದ ಎದುರಿನ ಮೆಕ್ಕೆಜೋಳ ವರ್ತಕರ ಸಂಘದ ಕಚೇರಿಯಲ್ಲಿ ಗುರುವಾರ ಸಂಧಾನ ಸಭೆ ನಡೆಯಿತು.

ಸಭೆಯಲ್ಲಿ ಎಪಿಎಂಸಿಯಲ್ಲಿನ ವ್ಯಾಪಾರ–ವಹಿವಾಟು ಸಂಬಂಧ ಇಬ್ಬರೂ ಯಾವುದೇ ವೈಮನಸ್ಸಿಗೆ ಆಸ್ಪದ ನೀಡದೆ ಸಮಾನವಾಗಿ ಹೋಗಬೇಕು. ಇದರಿಂದ ಯಾರೂ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಎರಡೂ ಕಡೆಯವರು ಸಂಧಾನ ಸಭೆ ನಡೆಸಿ, ಸಂಘರ್ಷಕ್ಕೆ ಅಂತ್ಯ ಹಾಡಿದರು.

ಮೆಕ್ಕೆಜೋಳ ಸಾಗಿಸಲು ಅನ್ಯ ಜಿಲ್ಲೆಗಳಿಂದ ಲಾರಿ ಕರೆಸಿದ್ದು ಹಾಗೂ ಓವರ್‌ಲೋಡ್‌ ಕಾರಣಕ್ಕೆ ಲಾರಿಗಳಿಗೆ ದಂಡ ವಿಧಿಸಿರುವ ವಿಚಾರ ಹಾಗೂ ಲಾರಿ ಮಾಲೀಕರನ್ನು ಅವಮಾನಿಸಲಾಗಿದೆ ಎಂಬ ವಿಷಯ ಲಾರಿ ಮಾಲೀಕರು ಹಾಗೂ ವರ್ತಕರ ನಡುವೆ ಸಂಘರ್ಷಕ್ಕೆ ದಾರಿ ಮಾಡಿತ್ತು.

‘ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್‌ ಏಜೆಂಟರು ಕಳ್ಳರು ಎಂದು ಮೆಕ್ಕೆಜೋಳ ವರ್ತಕರ ಸಂಘದ ಕಾರ್ಯದರ್ಶಿ ಕೆ. ಜಾವೀದ್‌ ಸಾಬ್ ಕರೆದಿದ್ದಾರೆ. ಅವರು ‌ ಕ್ಷಮೆ ಕೇಳಬೇಕು’ ಎಂದು ಲಾರಿ ಮಾಲೀಕರು ಪಟ್ಟು ಹಿಡಿದಿದ್ದರು. ಕ್ಷಮೆಗೆ ಆಗ್ರಹಿಸಿಲಾರಿ ಸಂಚಾರವನ್ನೂ ನಿಲ್ಲಿಸಿದ್ದರು.

ಲಾರಿ ಸಂಚಾರ ಇರದ ಕಾರಣ ವರ್ತಕ ಶ್ರೀನಿವಾಸ್ ಅವರು ಚಿತ್ರದುರ್ಗದಿಂದ ಎರಡು ಲಾರಿಗಳನ್ನು ಕರೆಸಿದ್ದರು. ಆಗ ಓವರ್‌ಲೋಡ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆರ್‌ಟಿಒ ಅಧಿಕಾರಿಗಳಿಗೆ ಲಾರಿ ಮಾಲೀಕರು ಮಾಹಿತಿ ನೀಡಿದ್ದರು. ಅಧಿಕಾರಿಗಳು ಲಾರಿಗೆ ದಂಡ ವಿಧಿಸಿದ್ದರು. ಇದು ಸಂಘರ್ಷ ತಾರಕ್ಕೇರುವಂತೆ ಮಾಡಿತ್ತು.

ಸಭೆಯಲ್ಲಿ ಮಾತನಾಡಿದ ಮೆಕ್ಕೆಜೋಳ ವರ್ತಕರ ಸಂಘದ ಕಾರ್ಯದರ್ಶಿ ಕೆ. ಜಾವೀದ್‌ ಸಾಬ್, ‘ನಾನು ಯಾರ ಬಗ್ಗೆಯೂ ಏನೂ ಹೇಳಿಕೆ ನೀಡಿಲ್ಲ. ನನ್ನ ಮಾತನ್ನು ತಪ್ಪಾಗಿ ಬಿಂಬಿಸಿದ್ದಾರೆ. ಈ ಸಂಬಂಧ ಯಾರಿಗಾದರೂ ನೋವಾಗಿದ್ದರೆ ಎಲ್ಲರ ಕ್ಷಮೆ ಕೇಳುವೆ. ಎಲ್ಲರೂ ಸೇರಿ ಹೋಗೋಣ’ ಎಂದು ಹೇಳಿದರು.

ಇದಕ್ಕೆಜಿಲ್ಲಾ ಲಾರಿ ಮಾಲೀಕರ ಹಾಗೂ ಟ್ರಾನ್ಸ್‌ಪೋರ್ಟ್‌ ಏಜೆಂಟರ ಸಂಘದ ಅಧ್ಯಕ್ಷ ಸೈಯದ್‌ ಸೈಫುಲ್ಲಾ ಒಪ್ಪಿಗೆ ಸೂಚಿಸಿ, ಸಂಘರ್ಷಕ್ಕೆ ಅಂತ್ಯ ಹಾಡಿದರು.

ಬಾಡಿಗೆ ಉಳಿಯುತ್ತಿಲ್ಲ. ಲಾರಿ ಓಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಮಸ್ಯೆಯನ್ನು ಲಾರಿ ಮಾಲೀಕರು ಸಭೆಯ ಗಮನಕ್ಕೆ ತಂದರು. ಲೋಡಿಂಗ್‌– ಅನ್‌ಲೋಡಿಂಗ್‌ಗೆ ₹ 400 ಕೂಲಿ ನೀಡುವ ಸಂಬಂಧವೂ ಸಭೆಯಲ್ಲಿ ಚರ್ಚೆಯಾಯಿತು.

‘ಕೆಲ ಬೇಡಿಕೆ ಸಂಬಂಧ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ವಿವಾದ ಮುಂದುವರಿಸದಂತೆ ಎಲ್ಲರೂ ಒಕ್ಕೊರಲ ತೀರ್ಮಾನ ಕೈಗೊಂಡರು’ ಎಂದುದಾವಣಗೆರೆ ಲೋಕಲ್ ಮತ್ತು ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ. ದಾದಾಪೀರ್ ತಿಳಿಸಿದರು.

‘ಸಂಧಾನ ಯಶಸ್ವಿಯಾಗಿದೆ. ಎಪಿಎಂಸಿಯಲ್ಲಿ ವಹಿವಾಟು ಸುಗಮವಾಗಿ ನಡೆಯುತ್ತಿದೆ’ ಎಂದು ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್‌ ಹೇಳಿದರು.

ಸಭೆಯಲ್ಲಿಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಎಸ್‌.ಕೆ. ಮಲ್ಲಿಕಾರ್ಜುನ, ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಇಮಾಮ್ ಹುಸೇನ್‌,ಜಿಲ್ಲಾ ಗೌರವಾಧ್ಯಕ್ಷ ನೇತಾಜಿರಾವ್‌, ಒಣರೊಟ್ಟಿ ಮಹಾಂತೇಶ್‌, ಫೈರೋಜ್‌, ಅಹ್ಮದ್‌ ಶರೀಫ್‌‌, ಮನ್ಸೂರ್‌ ಸೇರಿ ಲಾರಿ ಮಾಲೀಕರು ಹಾಗೂ ವರ್ತಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT