ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ವಿಚಾರದಲ್ಲಿ ಸುಳ್ಳು ಹೇಳುವ ಸರ್ಕಾರ: ಸಿದ್ದರಾಮಯ್ಯ ಆರೋಪ

ಉಚಿತ ಲಸಿಕಾ ಶಿಬಿರ ವೀಕ್ಷಿಸಿದ ವಿರೋಧ ಪಕ್ಷದ ನಾಯಕ
Last Updated 3 ಜುಲೈ 2021, 3:25 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್ ನಿರೋಧಕ ಲಸಿಕೆ ಇಲ್ಲದಿದ್ದರೂ ದಾಸ್ತಾನು ಇದೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಇಲ್ಲಿನ ದುರ್ಗಾಂಬಿಕಾ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ ಉಚಿತ ಲಸಿಕಾ ಶಿಬಿರಕ್ಕೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಸರ್ಕಾರದ ಬಳಿ ಲಸಿಕೆ ಇಲ್ಲ. ಲಸಿಕೆ ನೀಡಬೇಕೆಂಬ ಆಲೋಚನೆಯೂ ಸರ್ಕಾರಕ್ಕೆ ಇಲ್ಲ. ಇದರಿಂದಾಗಿ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತರೆ ನೂರು ಜನರಿಗೆ ಮಾತ್ರ ಸಿಗುತ್ತಿದೆ. ಜನರ ಜೀವ ಉಳಿಸಬೇಕೆಂಬ ಯೋಚನೆ ಸರ್ಕಾರಕ್ಕೆ ಇಲ್ಲದಂತಿದೆ’ ಎಂದು ದೂರಿದರು.

‘ಆರಂಭದಿಂದಲೇ ಸರಿಯಾಗಿ ಲಸಿಕೆ ನೀಡಿದ್ದರೆ ಇಷ್ಟೊಂದು ಸಮಸ್ಯೆಯೇ ಆಗುತ್ತಿರಲಿಲ್ಲ. ಲಸಿಕೆ ದಾಸ್ತಾನು, ವಿತರಣೆ ಸರಿಯಾಗಿ ಆಗಿಲ್ಲ. ಇಂತಹ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡುವ ಮೂಲಕ ಜನರ ಜೀವ ಉಳಿಸುವ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಲಸಿಕೆ ನೀಡಬೇಕಾಗಿರುವುದು ಸರ್ಕಾರದ ಕೆಲಸ. ಶಾಮನೂರು ಶಿವ
ಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರ ಕೆಲಸ ಅಲ್ಲ’ ಎಂದರು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರ ಭೇಟಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಆಗಲೇ ಹೇಳಿದ್ದೇನೆ. ಎಲ್ಲವೂ ಆದಷ್ಟು ಬೇಗ ಬಗೆಹರಿಯಲಿದೆ’ ಎಂದು ಉತ್ತರಿಸಿದರು.‌

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಆ ಬಗ್ಗೆ ಚರ್ಚಿಸುವುದಿಲ್ಲ ಎಂದರು.

ಲಸಿಕೆ ಉಪಯೋಗವಾಗುತ್ತಿದೆಯೇ?: ಲಸಿಕಾ ಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು,ಲಸಿಕೆ ಪಡೆದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ‘ಲಸಿಕೆ ಉಪಯೋಗ ಆಗುತ್ತಿದೆಯೇ’ ಎಂದು ಪ್ರಶ್ನಿಸಿದರು.

‘ಸರ್ಕಾರದಿಂದ ನೀಡುತ್ತಿರುವ ಲಸಿಕೆ ಸರಿಯಾಗಿ ಸಿಗುತ್ತಿಲ್ಲ. ಸಾಕಷ್ಟು ಸಮಸ್ಯೆ ಆಗುತ್ತಿದೆ. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರು ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತಿರುವುದರಿಂದ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ’ ಎಂದು ವಿದ್ಯಾರ್ಥಿನಿ ಸಿದ್ದರಾಮಯ್ಯ ಅವರಿಗೆ ತಿಳಿಸಿದರು.

ಸಿದ್ದರಾಮಯ್ಯ ಅವರನ್ನು ನೋಡಲು ಜನರು ಮುಗಿಬಿದ್ದರು. ಅಂತರ ಮಾಯವಾಗಿತ್ತು. ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ’ ಎಂಬ ಘೋಷಣೆ ಮೊಳಗಿದವು.

ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ನಗರಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್,ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಸದಸ್ಯರಾದ ಕೆ. ಚಮನ್‌ಸಾಬ್, ವಿನಾಯಕ ಪೈಲ್ವಾನ್, ಜಿ.ಡಿ. ಪ್ರಕಾಶ್, ಆಶಾ ಉಮೇಶ್, ಸವಿತಾ ಗಣೇಶ್ ಹುಲ್ಮನೆ, ಶ್ವೇತಾ ಶ್ರೀನಿವಾಸ್, ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಅನಿತಾಬಾಯಿ, ಧೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಜಾಧವ್, ಬಿ.ಎಚ್. ವೀರಭದ್ರಪ್ಪ, ಗೌಡ್ರ ಚನ್ನಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT