ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಘಟನೆ ಮಾನವ ಹಕ್ಕಿನ ಉಲ್ಲಂಘನೆ :ನ್ಯಾಯಾಧೀಶ ಡಿ.ವೈ. ಬಸಾಪುರ

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಡಿ.ವೈ. ಬಸಾಪುರ ಅಭಿಮತ
Last Updated 10 ಡಿಸೆಂಬರ್ 2019, 14:18 IST
ಅಕ್ಷರ ಗಾತ್ರ

ದಾವಣಗೆರೆ: ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಬೇರೊಬ್ಬರ ಹಕ್ಕಿಗೆ ಚ್ಯುತಿ ಉಂಟುಮಾಡದೇ ಗೌರವದಿಂದ ಬದುಕುವುದೇ ಮಾನವ ಹಕ್ಕು. ಬೇರೊಬ್ಬರ ವೈಯಕ್ತಿಕ ಘನತೆಗೆ ಧಕ್ಕೆ ಮಾಡಿದರೆ ಅದು ಮಾನವ ಹಕ್ಕಿನ ಸ್ಪಷ್ಪ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಡಿ.ವೈ. ಬಸಾಪುರ ಹೇಳಿದರು.

ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ‘2ನೇ ವಿಶ್ವ ಮಹಾಯುದ್ದದಲ್ಲಿ ಆದ ಅಧಿಕ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಸೆಟೆದು ನಿಂತು ತಮ್ಮ ಹಕ್ಕುಗಳಿಗೆ ಹೋರಾಡಿ 1948ರ ಡಿಸೆಂಬರ್ 10ರಂದು ಘೋಷಿಸಲಾದ ಮ್ಯಾಗ್ನಕಾರ್ಟ ಈ ಮಾನವ ಹಕ್ಕುಗಳ ದಿನವಾಗಿದೆ’ ಎಂದು ಹೇಳಿದರು.

ಸಂವಿಧಾನ ಹಲವು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಒದಗಿಸಿದೆ. ಅಂತೆಯೇ ಮಾನವ ಹಕ್ಕುಗಳನ್ನು ಗೌರವಿಸುವುದು ಅಷ್ಟೇ ಪ್ರಮುಖ. ಬಡತನವೂ ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಒಂದು ರಾಜ್ಯ ಪ್ರಜೆಗಳ ಬಡತನದಿಂದ ಮುಕ್ತಿ ಕೊಡಿಸಲು ಶ್ರಮಿಸಬೇಕು. ಹಾಗಾದಾಗ ಅದು ಕಲ್ಯಾಣ ರಾಜ್ಯವಾಗುತ್ತದೆ. ಬೇರೆಯವರನ್ನು ಕಂಡು ಹೊಟ್ಟೆಕಿಚ್ಚು ಪಡುವುದೂ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ’ ಎಂದರು.

‘ಈಚೆಗೆ ಹೈದರಾಬಾದ್ ಘಟನೆ ಸ್ಪಷ್ಟ ಮಾನವ ಹಕ್ಕಿನ ಉಲ್ಲಂಘನೆ. ಅಪರಾಧಿಗಳಿಗೆ ಶಿಕ್ಷೆಯಾಗಿದ್ದನ್ನು ಅನೇಕರು ಸಮರ್ಥಿಸಿಕೊಂಡರೂ ಆದರೆ ಅದು ಕಾನೂನಾತ್ಮಕ ಪ್ರಕ್ರಿಯೆಯಾಗಿರದೇ ತಕ್ಷಣಕ್ಕೆ ತೆಗೆದುಕೊಂಡ ನಿಲುವು, ಹಾಗಾಗಬಾರದು. ಎಲ್ಲದಕ್ಕೂ ಒಂದು ಕಾನೂನು ಕಟ್ಟಳೆಗಳು ಇರುತ್ತವೆ. ಅದರಂತೆಯೇ ಸಾಗಬೇಕು. ಇದನ್ನು ಮಾಧ್ಯಮಗಳು ಅತಿಯಾಗಿ ವೈಭವೀಕರಿಸಿ ವಿಜೃಂಭಿಸಿದವು’ ಎಂದರು.

ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಜೆ.ಎಸ್. ಸದಾನಂದ, ‘ಮಾನವ ಹಕ್ಕುಗಳಿಗೆ ಸುಧೀರ್ಘವಾದ ಇತಿಹಾಸವಿದೆ. ಕ್ರಿಸ್ತಪೂರ್ವದಿಂದಲೂ ಮಾನವ ಹಕ್ಕುಗಳಿಗಾಗಿ ಹೋರಾಟವನ್ನು ನಡೆಸಲಾಗಿದೆ. ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವಿನ ಸಂಘರ್ಷದಿಂದ ಮಾನವ ಹಕ್ಕುಗಳು ಹುಟ್ಟಿಕೊಂಡಿವೆ’ ಎಂದರು.

ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಬಿ.ಎಂ. ಹನುಮಂತಪ್ಪ ಮಾತನಾಡಿ, ‘ಪ್ರಸ್ತುತ ನಮ್ಮಲ್ಲಿ ಬಡವರಿಗೆ, ಶ್ರೀಮಂತರಿಗೆ ಎಂಬ ಪ್ರತ್ಯೇಕ ಹಕ್ಕುಗಳಿವೆ ಎಂಬಂತೆ ಕಾಣುತ್ತದೆ. ಮಾನವ ಹಕ್ಕುಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಸಿಗುತ್ತಿಲ್ಲ. ಇದು ಬದಲಾಗಬೇಕು. ಹೋರಾಟದ ಮನೋಭಾವವನ್ನು ಯುವಜನತೆ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಸೋಮಶೇಖರಪ್ಪ ಮಾತನಾಡಿ, ‘ನಮಗೆ ಹಕ್ಕುಗಳು ಇರುವಂತೆ ಬಾಧ್ಯತೆಗಳೂ ಇವೆ. ಇವುಗಳನ್ನು ನಾವು ಮೊದಲು ತಿಳಿಯಬೇಕು. ಮಾನವ ಮನುಷ್ಯನಾಗಿ ಬದುಕಿದಾಗ ಮಾತ್ರ ಮಾನವ ಹಕ್ಕುಗಳು ಸರಿಯಾಗುತ್ತವೆ’ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು.ಎನ್. ಬಡಿಗೇರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ವಕೀಲರಾದ ಆಂಜನೇಯ ಗುರೂಜಿ, ದಾದಾಪೀರ್ ಹಾಗೂ ಪ್ಯಾನಲ್ ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT