ಮಂಗಳವಾರ, ಅಕ್ಟೋಬರ್ 27, 2020
18 °C
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌

ಹಿರಿಯರ ಮಹತ್ವ ಕಿರಿಯರಿಗಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಿರಿಯ ನಾಗರಿಕರ ಮಹತ್ವವನ್ನು ಹಿರಿಯರೇ ಕೇಳಿದರೆ ಪ್ರಯೋಜನವಿಲ್ಲ. ಹಿರಿಯರ ಅನುಭವ, ಜ್ಞಾನ ಏನು ಎಂಬುದನ್ನು ಕಿರಿಯರು ಕೇಳಿಸಿಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರ ಮಕ್ಕಳು ಭಾಗವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿವಿಧ ಸಂಘಗಳು ನಗರದ ಸದ್ಯೋಜಾತ ಶಿವಾಚಾರ್ಯಮಠದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪುಸ್ತಕ ಜ್ಞಾನಕ್ಕಿಂತ ಹಿರಿಯರ ಅನುಭವದ ಜ್ಞಾನ ಹೆಚ್ಚಾಗಿದ್ದು, ಮನೆಯಲ್ಲಿ ಹಿರಿಯರು ಇರದಿದ್ದರೆ ಬದುಕಿಗೆ ಸ್ಫೂರ್ತಿ ಇರುವುದಿಲ್ಲ. ಸರಿದಾರಿ ತೋರುವವರಿರುವುದಿಲ್ಲ ಎಂದರು.

ಮಕ್ಕಳಿಲ್ಲದ ಹಿರಿಯರಿಗೆ ಆಶ್ರಯ ನೀಡುವುದಕ್ಕಾಗಿ ವೃದ್ಧಾಶ್ರಮಗಳು ಇರಬೇಕಾಗುತ್ತದೆ. ಮಕ್ಕಳಿದ್ದೂ ಹೆತ್ತವರು ವೃದ್ಧಾಶ್ರಮ ಸೇರುತ್ತಿರುವುದು ಸಮಾಜದ ನೈತಿಕ ಅಧಃಪತನಕ್ಕೆ ಸಾಕ್ಷಿ ಎಂದು ವಿಷಾದಿಸಿದರು.

ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಸ್.ಟಿ. ಕುಸುಮಶ್ರೇಷ್ಠಿ ಮಾತನಾಡಿ, ಹಿರಿಯ ನಾಗರಿಕರ ಸಮಸ್ಯೆ ಬಗೆಹರಿಸಲು ಸರ್ಕಾರದ ನಿಯಮಗಳಡಿಯಲ್ಲಿ ಅಧಿಕಾರಿಗಳು ಸ್ಪಂದಿಸಬೇಕು. ಮಕ್ಕಳು ಹೆತ್ತವರನ್ನು ಗೌರದಿಂದ ನೋಡಿಕೊಳ್ಳಬೇಕು. ಕೊರೊನಾ ಸಂದರ್ಭದಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು’ ಎಂದರು. 

ಪಾಲಿಕೆ ಸದಸ್ಯ ಗಡಿಗುಡಾಳ್‌ ಮಂಜುನಾಥ್‌ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ್, ಸುರಕ್ಷ ವಿವಿಧೋದ್ದೇಶ ಸಂಸ್ಥೆಯ ಅಧ್ಯತಕ್ಷ ಶಹನಾಜ್‌ ಚಿತೆವಾಲೆ, ಜಿಲ್ಲಾ ಹಿರಿಯ ನಾಗರಿಕರ ಸಂಘದ ಗೌರವ ಕಾರ್ಯದರ್ಶಿ ಎಸ್.ಗುರುಮೂರ್ತಿ, ಸದಸ್ಯರಾದ ದೇವಾಚಾರ್, ಹಾಲಪ್ಪ, ಎ.ಜಯಣ್ಣ, ವೆಂಕಟ್‌ರೆಡ್ಡಿ ಅವರೂ ಇದ್ದರು. ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿ.ಎಸ್‌. ಶಶಿಧರ್‌ ಸ್ವಾಗತಿಸಿದರು. ಕೆ.ಕೆ. ಪ್ರಕಾಶ್‌ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.