ಶನಿವಾರ, ಜುಲೈ 31, 2021
28 °C

ಇಂದಿರಾಗಾಂಧಿ ಭಾವಚಿತ್ರಕ್ಕೆ ಮಸಿ: ಒಬ್ಬನ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಂದಿರಾ ಕ್ಯಾಂಟೀನ್‌ನಲ್ಲಿದ್ದ ಇಂದಿರಾ ಭಾವಚಿತ್ರಕ್ಕೆ ಶನಿವಾರ ರಾತ್ರಿ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರ ಸಾವರ್ಕರ್‌ ಅಭಿಮಾನಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಭಾರತ್‌ ಕಾಲೊನಿಯ ನಾಲ್ಕನೇ ಕ್ರಾಸ್‌ ನಿವಾಸಿ, ಹೋಟೆಲ್‌ ಕಾರ್ಮಿಕ ಉಮೇಶ್‌ ಕತ್ತಿ (36) ಬಂಧಿತ ಆರೋಪಿ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ಸಿ.ಜಿ. ಆಸ್ಪತ್ರೆಯ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇರುವ ಇಂದಿರಾ ಗಾಂಧಿಯ ಭಾವಚಿತ್ರಕ್ಕೆ ಮಸಿ ಬಳಿಯಲಾಗಿತ್ತು. ಈ ಬಗ್ಗೆ ಕೆಟಿಜೆ ನಗರ ಮತ್ತು ಬಡಾವಣೆ ಪೊಲೀಸ್ ಠಾಣೆಯಲ್ಲಿ ನವೀನ್‌ ಕುಮಾರ್‌ ದೂರು ದಾಖಲಿಸಿದ್ದರು.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದಲ್ಲಿ ಮತ್ತು ಪೊಲೀಸರ ತನಿಖೆಯ ಆಧಾರದಲ್ಲಿ ಉಮೇಶ್‌ ಕತ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

‘ನಾನು ವೀರ ಸಾವರ್ಕರ್‌ ಅಭಿಮಾನಿ. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ಇಡುವುದನ್ನು ಕೆಲವರು ವಿರೋಧಿಸಿರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿತ್ತು. ಹಾಗಾಗಿ ಎಪಿಎಂಸಿ ಬಳಿ ಹೋಗಿ ಅಲ್ಲಿ ಟ್ರ್ಯಾಕ್ಟರ್‌ ಒಂದರಿಂದ ವೇಸ್ಟ್‌ ಆಯಿಲ್‌ ಅನ್ನು ಬಾಟಲಿಯಲ್ಲಿ ತುಂಬಿಸಿಕೊಂಡು ಬೈಕಲ್ಲಿ ಬಂದು ಬಳಿದಿದ್ದೇನೆ’ ಎಂದು ಆರೋಪಿ ತಿಳಿಸಿದ್ದಾನೆ. ವೀರ ಸಾವರ್ಕರ್‌ ಎಂದು ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾನೆ ಎಂದು ಹೇಳಿದರು.

ಅವನು ಮದ್ಯ ಸೇವಿಸಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಸದ್ಯ ಆತನೊಬ್ಬನೇ ಈ ಕೃತ್ಯ ಎಸಗಿರುವುದು ಕಂಡು ಬಂದಿದೆ. ಬೇರೆ ಸಂಘಟನೆಗಳಲ್ಲಿ ಇರುವುದು ಗೊತ್ತಾಗಿಲ್ಲ. ತನಿಖೆ ಮುಂದುವರಿಯಲಿದೆ ಎಂದರು.

ಸಮಾಜದ ಶಾಂತಿ ಕದಡುವ ಕೃತ್ಯಗಳಲ್ಲಿ ಹಿಂದೆಯೂ ಈತ ಭಾಗಿ ಆಗಿದ್ದ. ಈತನ ಮೇಲೆ ಹರಿಹರ ನಗರ ಪೊಲೀಸ್‌ ಠಾಣೆ, ಆರ್‌ಎಂಸಿ ಪೊಲೀಸ್‌ ಠಾಣೆ, ಬಸವನಗರ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ವಿವರಿಸಿದರು.

‘ವೀರ ಸಾವರ್ಕರ್‌ ಅಭಿಮಾನಿ ಎಂದು ಹೇಳಿಕೊಂಡು ಕಾಂಗ್ರೆಸ್‌ ಮುಖಂಡ ಡಿ. ಬಸವರಾಜ್‌ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇದೆಯೇ ಎಂಬುದನ್ನು ತನಿಖೆ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ರಾಜೀವ್, ಡಿವೈಎಸ್‌ಪಿ ನಾಗೇಶ್‌ ಐತಾಳ್‌, ಡಿಸಿಆರ್‌ಬಿ ಡಿವೈಎಸ್‌ಪಿ ಬಸವರಾಜ್‌, ಇನ್‌ಸ್ಪೆಕ್ಟರ್‌ ತಿಮ್ಮಣ್ಣ, ಎಸ್‌ಐ ವೀರೇಶ್‌, ಎಎಸ್‌ಐ ತಿಪ್ಪೇಸ್ವಾಮಿ ಅವರೂ ಇದ್ದರು.

‘ಹಲ್ಲೆ ಪ್ರಕರಣ ದೂರು ಕೊಟ್ಟಿರಲಿಲ್ಲ’

ಶೇಖರಪ್ಪ ನಗರದಲ್ಲಿ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿರಲಿಲ್ಲ. ಆದರೂ ಪೊಲೀಸರು ದೂರು ದಾಖಲಿಸಿಲ್ಲ ಎಂದು ಮಾಧ್ಯಮದ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಎಸ್‌ಪಿ ಸ್ಪಷ್ಟನೆ ನೀಡಿದರು.

ಶ್ರೀಕಾಂತ್‌ ಹಿಂದೆ ಗಾಯ ಮಾಡಿಕೊಂಡಿದ್ದರು. ಶನಿವಾರ ರಾತ್ರಿ ಯಾರೊಂದಿಗೋ ಜಗಳವಾಡಿದ್ದು, ಹಿಂದೆ ಇದ್ದ ಗಾಯದ ಮೇಲೆಯೇ ಮತ್ತೆ ಗಾಯವಾಗಿದೆ. ಅವರು ಆಸ್ಪತ್ರೆಗೆ ಬಂದು ಔಷಧ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಭಾನುವಾರ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಕೊನೆಗೆ ನಾವೇ ಪೊಲೀಸರನ್ನು ಕಳುಹಿಸಿ ದೂರು ನೀಡುವಂತೆ ತಿಳಿಸದ ಮೇಲೆ ಶ್ರೀಕಾಂತ್‌ ದೂರು ನೀಡಿದ್ದಾರೆ. ಹಲ್ಲೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.

ಜಗಳೂರಿನಲ್ಲಿ 21 ಮಂದಿ ಕ್ವಾರಂಟೈನ್‌

ಜಗಳೂರಿಗೆ ಬಳ್ಳಾರಿಯ ಪೊಲೀಸ್‌ ಒಬ್ಬ ಬಂದು ಹೋಗಿದ್ದು, ಈಗ ಪೊಲೀಸ್‌ಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಅವರ ಸಂಪರ್ಕಕ್ಕೆ ಬಂದಿದ್ದ ಜಗಳೂರಿನ 21 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಹನುಮಂತರಾಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು