ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೃಪ್ತಿ ತರುವ ಗುಣಮುಖರಾದವರ ಧನ್ಯವಾದ

Last Updated 12 ಮೇ 2021, 4:29 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊರೊನಾ ಸೋಂಕಿಗೆ ಚಿಕಿತ್ಸೆಗಾಗಿ ಬಂದಿರುತ್ತಾರೆ. ಅವರು ವಾಪಸ್‌ ಹೋಗುವಾಗ ಮನದುಂಬಿ ಧನ್ಯವಾದ ಹೇಳಿ ಹೋಗುತ್ತಾರಲ್ಲ. ಅದು ನೀಡುವ ಸಂತೃಪ‍್ತಿ ಮತ್ಯಾವುದರಲ್ಲಿಯೂ ಸಿಗಲ್ಲ’

ಬಾಪೂಜಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿರುವ,ಫ್ಲಾರೆನ್ಸ್ ನೈಟಿಂಗೇಲ್ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿರುವ ಎಚ್.ಎಸ್. ಪುಷ್ಪಾ ಮಂಜುನಾಥ್ ಅವರ ನುಡಿಗಳು ಇವು.

‘ಜಿಲ್ಲೆಯಲ್ಲಿ ಕೊರೊನಾ ಸೋಂಕು ಬಂದಲ್ಲಿಂದ ಸೋಂಕಿತರ ಜತೆಗೆ ಕೆಲಸ ಮಾಡುತ್ತಿದ್ದೇನೆ. ರೋಗಿಗಳು ಬಂದಾಗ ಅವರ ಗಂಟಲು ದ್ರವ ತೆಗೆದು ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡುವುದು ಮತ್ತು ಅದರ ಫಲಿತಾಂಶವನ್ನು ನಾನು ತಿಳಿಸಬೇಕು. ಅಧಿಕ ರಕ್ತದೊತ್ತಡ, ಮಧುಮೇಹ ಇನ್ನಿತರ ಕಾಯಿಲೆ ಇರುವವರು ಅಡ್ಮಿಟ್‌ ಆಗಬೇಕಾಗುತ್ತದೆ. ಬೇರೆ ಯಾವ ಕಾಯಿಲೆ ಇಲ್ಲದವರೂ ಪಾಸಿಟಿವ್‌ ಎಂದು ಗೊತ್ತಾದಾಗ ಕುಗ್ಗಿ ಹೋಗುತ್ತಾರೆ. ಈ ಎಲ್ಲರಿಗೂ ನಾನು ಧೈರ್ಯ ತುಂಬುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಂಕಿತರು ಎದೆಗುಂದಿಲ್ಲ ಅಂದರೆ ಅರ್ಧ ಗೆದ್ದಂತೆ. ಉಳಿದರ್ಧವನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವ ಔಷಧದ ಮೂಲಕ ಗೆಲ್ಲಬಹುದು. ಬಹುತೇಕರು ಪಾಸಿಟಿವ್‌ ಬಂದ ಕೂಡಲೇ ರೋಗಕ್ಕಿಂತಲೂ ಇನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕು. ಯಾರೂ ಮಾತನಾಡಿಸಲ್ಲ ಮುಂತಾದ ವಿಚಾರಗಳಿಗೇ ತಲೆಕೆಡಿಸಿಕೊಂಡಿರುತ್ತಾರೆ. ಈ ಚಿಂತೆಯನ್ನು ದೂರ ಮಾಡಬೇಕು. ಹಾಗೇ ನೋಡಬೇಡಿ ಎಂದು ಅವರ ಮನೆಯವರಿಗೂ ತಿಳಿ ಹೇಳಬೇಕಾಗುತ್ತದೆ ಎಂದು ವಿವರಿಸಿದರು.

‘ಆರಂಭದಲ್ಲಿ ನನಗೂ ಕೊರೊನಾ ಅಂದರೆ ಭಯ ಇತ್ತು. ಕೆಲಸ ಮಾಡುತ್ತಾ ಮಾಡುತ್ತಾ ಅಭ್ಯಾಸವಾಗಿ ಹೋಯಿತು. ನಮ್ಮ ಆಸ್ಪತ್ರೆಯ ಎಲ್ಲ ಮೇಲಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ನೆನಪಿಸಿಕೊಂಡರು.

‘ಮನೆಯಲ್ಲಿ 8 ವರ್ಷದ ಮಗಳು ಇದ್ದಾಳೆ. ಮನೆಯವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ. ನಮ್ಮ ಅತ್ತೆಗೆ ನ್ಯೂಮೋನಿಯ ಬಂದಾಗ ಪರೀಕ್ಷೆ ಮಾಡಿಸಿದೆ. ಆಗ ಕೊರೊನಾ ಪಾಸಿಟಿವ್ ಬಂತು. ಬೇರೆಯವರಿಗೆ ಹೇಳುವುದಕ್ಕಿಂತ ನಮ್ಮ ಕುಟುಂಬದ ಸದಸ್ಯರಿಗೇ ಕೊರೊನಾ ಬಂದಾಗ ಆಗುವ ಅನುಭವ ಬೇರೇನೆ. 70 ವರ್ಷದ ಅತ್ತೆ ಒಂದು ವಾರ ಆಸ್ಪತ್ರೆಯಲ್ಲಿ, ಒಂದು ತಿಂಗಳು ಮನೆಯಲ್ಲಿ ಆರೈಕೆಯಲ್ಲಿದ್ದರು. ನಾನು ಆಸ್ಪತ್ರೆ ಮತ್ತು ಮನೆ ಎರಡನ್ನೂ ನಿರ್ವಹಿಸಿದೆ. ನಮ್ಮ ಮನೆಯ ಎಲ್ಲರ ಸಹಕಾರ ಇದಕ್ಕೆ ಕಾರಣ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT