ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಕ್ಕಾಗಿ ಬದುಕಿದವರೇ ಅಜರಾಮರ

‘ಸ್ವಾತಂತ್ರ್ಯ ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 1 ಸೆಪ್ಟೆಂಬರ್ 2021, 6:38 IST
ಅಕ್ಷರ ಗಾತ್ರ

ದಾವಣಗೆರೆ: ಯಾರು ಸ್ವಂತಕ್ಕಾಗಿ ಬದುಕಿದ್ದಾರೋ ಅವರು ಯಾರೂ ನೆನಪಲ್ಲಿ ಉಳಿದಿಲ್ಲ. ಯಾರು ಸಮಾಜಕ್ಕಾಗಿ ಬದುಕಿದ್ದಾರೋ ಅವರು ಶಾಶ್ವತವಾಗಿ ನೆನಪಿರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಮುಂದೆ ಕುಟುಂಬಕ್ಕೆ ಸೀಮಿತವಾಗದೇ ಸಮಾಜಕ್ಕಾಗಿ ಬದುಕಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ ನೀಡಿದರು.

ಶಿವಮೊಗ್ಗದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಬೆಂಗಳೂರು ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ, ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಸ್ವಾತಂತ್ರ್ಯ ಅಮೃತ ಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಏನಾದರೂ ಒಂದು ಆಗಬೇಕು. ಅದು ಒಳ್ಳೆಯದಾಗಿರಬೇಕು. ತನ್ನ ವೈಶಿಷ್ಠ್ಯ ಏನು ಎಂದು ತಿಳಿದು ಅದರಲ್ಲಿ ಸಾಧನೆ ಮಾಡಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಈಗ ಕನಸು ಕಾಣಬೇಕು. ಆ ಕನಸು ನನಸು ಮಾಡಲು ಸತತ ಪ್ರಯತ್ನ ಪ‍ಡಬೇಕು. ಪದವಿಯಲ್ಲಿರುವ ವಿದ್ಯಾರ್ಥಿಗಳು ದೊಡ್ಡ ಕನಸು ಕಂಡರೆ ಆರೇಳು ವರ್ಷಗಳಲ್ಲಿ ನನಸಾಗುತ್ತದೆ ಎಂದು ತಿಳಿಸಿದರು.

‘ಮಹಾತ್ಮ ಗಾಂಧೀಜಿ, ಅಂಬೇಡ್ಕರ್‌, ನೇತಾಜಿ. ಭಗತ್‌ ಸಿಂಗ್‌, ರಾಜಗುರು, ಸುಖದೇವ್‌ ಹೀಗೆ ನಾವು ಯಾರನ್ನೆಲ್ಲ ಇವತ್ತು ನೆನಪಿಸಿಕೊಳ್ಳುತ್ತೇವೋ ಅವರೆಲ್ಲ ದೇಶಕ್ಕಾಗಿ ಬದುಕಿದವರು. ಅವರೆಲ್ಲರ ತ್ಯಾಗ ಬಲಿದಾನಗಳಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂತು’ ಎಂದು ವಿವರಿಸಿದರು.

ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಬಿ.ಸಿ. ಮಹಾಬಲೇಶ್ವರಪ್ಪ, ‘ಪ್ರಜಾಪ್ರಭುತ್ವದ ಹೋರಾಟವೇ ಸ್ವಾತಂತ್ರ್ಯ ಸಂಗ್ರಾಮ. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತಾದರೂ ಅದು ಸಂಪೂರ್ಣ ಸ್ವಾತಂತ್ರ್ಯ ಆಗಿರಲಿಲ್ಲ. 1948ರಲ್ಲಿ ನಿಜಾಮರಿಂದ ಹೈದರಾಬಾದನ್ನು ಒಕ್ಕೂಟಕ್ಕೆ ಸೇರಿಸಿಕೊಂಡ ಮೇಲೆ, 1964ರಲ್ಲಿ ಗೋವಾವನ್ನು ಪೋರ್ಚುಗೀಸರಿಂದ ವಿಮೋಚನೆಗೊಳಿಸಿದ ಮೇಲೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿತು’ ಎಂದು ಹೇಳಿದರು.

ವ್ಯಾಪಾರಕ್ಕೆಂದು ಬಂದು ಆರ್ಥಿಕ ಮತ್ತು ರಾಜಕೀಯ ಪ್ರಭುತ್ವವನ್ನು ಪಡೆದು ಇಲ್ಲಿನ ಸಂಪತ್ತನ್ನು ತಮ್ಮ ದೇಶದ ಅಭಿವೃದ್ಧಿಗೆ ಪಾಶ್ಚಾತ್ಯ ದೇಶಗಳು ಬಳಸಿಕೊಂಡವು. ಅವರಿಂದ ತಾಯಿನಾಡನ್ನು ಮುಕ್ತಗೊಳಿಸುವ ಪ್ರಕ್ರಿಯೆಯೇ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾಹಿತಿ ನೀಡಿದರು.

ಬಟನ್‌ಗಳಲ್ಲಿ ಭಗತ್‌ಸಿಂಗ್‌ ಚಿತ್ರ ಬಿಡಿಸಿದ ಪ್ರದೀಪ್‌, ರಂಗೋಲಿ ಸಹಿತ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರಿನ್ಸಿಪಾಲ್‌ ಡಾ. ಸಾಯಿರಾಬಾನು ಎ. ಫರೂಖಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಟಿ. ವೀರೇಶ್‌ ಉಪಸ್ಥಿತರಿದ್ದರು. ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ನಿವೇದಿತಾ ಸ್ವಾಗತಿಸಿದರು. ಕ್ಷೇತ್ರ ಪ್ರಚಾರ ಸಹಾಯಕ ಲಕ್ಷ್ಮೀಕಾಂತ ವಂದಿಸಿದರು. ಗುಂಡಮ್ಮ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT