ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ತೀರ್ಪಿಗೆ ಸಾಕ್ಷ್ಯ ಸಂರಕ್ಷಣೆ ಮುಖ್ಯ: ಕೆ.ಎನ್‌. ಫಣೀಂದ್ರ

ಎಲೆಕ್ಟ್ರಾನಿಕ್‌ ಸಾಕ್ಷ್ಯ ಬಗೆಗಿನ ಕಾರ್ಯಾಗಾರ ಉದ್ಘಾಟನೆ
Last Updated 15 ಡಿಸೆಂಬರ್ 2019, 14:39 IST
ಅಕ್ಷರ ಗಾತ್ರ

ದಾವಣಗೆರೆ: ಸಾಕ್ಷ್ಯಗಳನ್ನು ಸಂಗ್ರಹಿಸುವಷ್ಟೇ ಮುಖ್ಯ ಅವುಗಳನ್ನು ಸಂರಕ್ಷಿಸುವುದು ಕೂಡ. ಇಲ್ಲದೇ ಇದ್ದರೆ ನ್ಯಾಯಾಲಯದಲ್ಲಿ ಸರಿಯಾದ ತೀರ್ಪು ನೀಡುವುದು ಕಷ್ಟ ಎಂದು ಕರ್ನಾಟಕ ನ್ಯಾಯಾಂಗ ಅಕಾಡೆಮಿ ಗವರ್ನರ್‌, ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಹೇಳಿದರು.

ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಜಿಲ್ಲಾ ನ್ಯಾಯಾಲಯದ ಆಶ್ರಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಭಾನುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಲೆಕ್ಟ್ರಾನಿಕ್‌ ಸಾಕ್ಷ್ಯ ಬಗೆಗಿನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತೇ ಆನ್‌ಲೈನ್‌ ಆಗಿ ಪರಿವರ್ತನೆಯಾಗಿದೆ. ಮೊಬೈಲ್‌ನಿಂದಾಗಿ ಪ್ರಪಂಚದ ಎಲ್ಲ ಮಾಹಿತಿ ನಮ್ಮ ಕೈಯೊಳಗೆ ಬಂದಿದೆ. ಅದರ ಜತೆಗೆ ಸೈಬರ್‌ ಕ್ರೈಂ ಕೂಡ ಹೆಚ್ಚಾಗಿದೆ. ಇವುಗಳನ್ನು ಪತ್ತೆ ಹಚ್ಚಲು ಅನೇಕ ದಾರಿಗಳಿವೆ. ಪತ್ತೆ ಹಚ್ಚುವುದು ಹೇಗೆ? ಪತ್ತೆ ಹಚ್ಚಿದ ಮೇಲೆ ಸಾಕ್ಷ್ಯಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? ಸಂರಕ್ಷಿಸಿದ ಬಳಿಕ ನ್ಯಾಯಾಧೀಶರ ಮುಂದೆ ಅದನ್ನು ಸಾಬೀತು ಮಾಡುವುದು ಹೇಗೆ? ಎಂಬುದೆಲ್ಲ ಸರಿಯಾಗಿ ತಿಳಿದುಕೊಂಡಾಗ ಅ‍ಪರಾಧಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವುಗಳನ್ನು ಪೊಲೀಸರು ಮತ್ತು ವಕೀಲರಿಗೆ ತಿಳಿಸುವುದಕ್ಕಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೊಬೈಲ್‌, ಕಂಪ್ಯೂಟರ್‌ಗಳು ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಅಪರಾಧ ನಡೆದಾಗ ಆರೋಪಿಗಳಿಂದ ಅವುಗಳನ್ನು ವಶಪಡಿಸಿಕೊಂಡಾಗ ಅದರಲ್ಲಿ ಇರುವ ದತ್ತಾಂಶಗಳನ್ನು ತನಿಖೆಗಾಗಿ ಜಾಗರೂಕವಾಗಿ ಉಳಿಸಿಕೊಳ್ಳಬೇಕಾಗುತ್ತದೆ. ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಕಾನೂನು ಪ್ರಕ್ರಿಯೆಗಳು ಹೇಗಿವೆ ಎಂಬುದನ್ನು ತಿಳಿದಿಕೊಳ್ಳಬೇಕು. ಸುಪ್ರೀಂಕೋರ್ಟ್‌ವರೆಗೆ ಅಪೀಲು ಹೋದರೂ ಅಲ್ಲಿಯೂ ಸಾಕ್ಷ್ಯ ನೀಡಲು ಅವುಗಳನ್ನು ಉಳಿಸಿಕೊಂಡಿರಬೇಕು ಎಂದು ಸಲಹೆ ನೀಡಿದರು.

ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ದಾವಣಗೆರೆ ಆಡಳಿತ್ಮಾತಕ ನ್ಯಾಯಾಧೀಕರಣದ ನ್ಯಾಯಾಧೀಶ ಎಸ್.ಜಿ ಪಂಡಿತ್ ಮಾತನಾಡಿ, ‘ಸಾಕ್ಷ್ಯವೇ ತೀರ್ಪಿನ ಅಡಿಪಾಯ. ಅವಿಲ್ಲದೇ ಯಾವ ಪ್ರಕರಣವೂ ನಿಲ್ಲಲಾರದು. ಹಾಗಾಗಿ ಸಾಕ್ಷ್ಯ ಸಂಗ್ರಹ, ಸಂರಕ್ಷಣೆ, ಮಂಡನೆ ಮೂರು ಮುಖ್ಯ. ಇದು ಕ್ರಿಮಿನಲ್‌ ಮತ್ತು ಸಿವಿಲ್‌ ಎರಡೂ ಪ್ರಕರಣಗಳಿಗೂ ಅನ್ವಯವಾಗುತ್ತದೆ. ಎಲೆಕ್ಟ್ರಾನಿಕ್ಸ್‌ ಎನ್ನುವುದು ಅತಿ ವೇಗದಲ್ಲಿ ಬೆಳೆಯುತ್ತಿರುವ ಮಾಧ್ಯಮ. ಇಂದಿರುವ ಮೊಬೈಲ್‌ ನಾಳೆಗೆ ಹಳೇ ವರ್ಶನ್‌ ಆಗಿರುತ್ತದೆ. ಮೊಬೈಲ್‌ ಮಾತನಾಡಲಷ್ಟೇ ಸೀಮಿತವಾಗಿಲ್ಲ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಎಂ. ಭೃಂಗೇಶ್, ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ಸೋಮಶೇಖರ್, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ದೇವೆಂದ್ರಪ್ಪ ಯಮುನಪ್ಪ ಬಸಾಪುರ ಉಪಸ್ಥಿತರಿದ್ದರು.

ಸೈಬರ್ ಕ್ರೈಂ ವಿಭಾಗದ ಪೊಲೀಸ್ ಇನ್ಸಪೆಕ್ಟರ್ ಯಶವಂತಕುಮಾರ್, ಸೈಬರ್‌ ಭದ್ರತೆ ಮತ್ತು ಕಾನೂನು ತರಬೇತುದಾರ ಡಾ. ಅನಂತಪ್ರಭು ಜಿ. ಕಾರ್ಯಾಗಾರ ನಡೆಸಿಕೊಟ್ಟರು. ನ್ಯಾಯಾಧೀಶರಾದ ಎಸ್‌.ನಾಗಶ್ರೀ ಕಾರ್ಯಕ್ರಮ ನಿರೂಪಿಸಿದರು.

‘ಮೊದಲ ಸೀಟಿನಲ್ಲಿ ಸೈಬರ್‌ ಕ್ರೈಂ’
’ಎಲ್ಲ ಅಪರಾಧಗಳನ್ನು ಮೀರಿ ಈಗ ಸೈಬರ್‌ಕ್ರೈಂ ಮೊದಲ ಸೀಟಿಗೆ ಬಂದಿದೆ. ಉಳಿದವುಗಳು ಹಿಂದೆ ಹೋಗಿವೆ. ಹಿಂದೆ ಯಾವುದೇ ಅಪರಾಧ ಮಾಡಬೇಕಿದ್ದರೆ ಸ್ಥಳಕ್ಕೆ ಆ ವ್ಯಕ್ತಿ ಹೋಗಬೇಕಿತ್ತು. ಈಗ ಎಲ್ಲೋ ಕಂಪ್ಯೂಟರ್‌ನ ಮುಂದೆ ಕುಳಿತು ಅಪರಾಧ ಮಾಡಬಹುದು’ ಎಂದು ಸೈಬರ್‌ ಭದ್ರತೆ ಮತ್ತು ಕಾನೂನು ತರಬೇತುದಾರ ಡಾ. ಅನಂತಪ್ರಭು ಜಿ. ಹೇಳಿದರು.

ಇಂಟರ್‌ನೆಟ್‌ ಇನ್‌ಸೈಡ್‌ ಎಂದು ಈಗಿನ ಎಲ್ಲ ಕಾರುಗಳಲ್ಲಿ ಇದೆ. ₹ 1,390ಕ್ಕೆ ಸಿಗುವ ಒಂದು ಸಣ್ಣ ಡಿವೈಸರ್‌ ಅನ್ನು ಒಂದು ಕಾರಿನಲ್ಲಿ ಹಾಕಿ ಬಿಟ್ಟರೆ ಆ ಕಾರು ಎಲ್ಲೆಲ್ಲ ಹೋಗುತ್ತಿದೆ ಎಂದು ನಾವು ಕುಳಿತಲ್ಲಿಂದಲೇ ನೋಡಬಹುದು. ಇನ್ನೊಂದು ₹ 3,500ಕ್ಕೆ ಸಿಗುವ ಡಿವೈಸರ್‌ ಹಾಕಿ ಬಿಟ್ಟರೆ ಎಲ್ಲಿಂದಲೋ ಆ ಕಾರಿನ ವೇಗ ಹೆಚ್ಚಿಸುವುದು. ಸ್ಟಿಯರಿಂಗ್ ಲಾಕ್‌ ಮಾಡುವುದು, ಬ್ರೇಕ್‌ ಹಿಡಿಯದಂತೆ ಮಾಡುವುದು ಎಲ್ಲವನ್ನೂ ಮಾಡಬಹುದು. ಆಗ ಸಹಜವಾಗಿಯೇ ಅಪಘಾತವಾಗುತ್ತದೆ. ಪೊಲೀಸರು ಬಂದು ನೋಡುತ್ತಾರೆ. ಇದು ಸಹಜ ಅಪಘಾತ ಎಂದು ತಿಳಿಯುತ್ತಾರೆ. ಇದು ಕೊಲೆ ಎಂಬುದು ಗೊತ್ತಾಗುವುದಿಲ್ಲ ಎಂದು ವಿವರಿಸಿದರು.

‘ಜಿಪಿಎಸ್‌ ನಾವು ಬಳಸುತ್ತಿದ್ದೇವೆ. ಇದು ಅಮೆರಿಕನ್‌ ಜಿಪಿಎಸ್‌. ಹಾಗಾಗಿ ಅವರಿಗೆ ಮಾಹಿತಿ ಸಿಗುತ್ತದೆ. ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ಷೆಸ್ಟ್‌ ಕಳುಹಿಸುವ ಮೂಲಕ ನಿಮ್ಮ ಮಾಹಿತಿ ಕದಿಯಬಹುದು. ವ್ಯಾಟ್ಸ್‌ಆ್ಯಪ್‌ ಕೂಡ ಭದ್ರತೆ ಇರುವ ಜಾಲತಾಣವಲ್ಲ’ ಎಂದು ವಿವರಿಸಿದ ಅವರು ಹೇಗೆ ಹ್ಯಾಕ್‌ ಮಾಡಲಾಗುತ್ತದೆ. ಅದನ್ನು ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ವಿವರಿಸಿದರು.

ಮೊಬೈಲ್‌ ರಿಪೇರಿಗೆ ಕೊಡುವಾಗಲೂ ಜಾಗರೂಕರಾಗಿ ಇರಿ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT