ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾವನ್ನು ದಿಟ್ಟವಾಗಿ ಎದುರಿಸಿದ ಆಡಳಿತ: ಉಸ್ತುವಾರಿ ಸಚಿವ ಬೈರತಿ ಬಸವರಾಜ

Last Updated 26 ಜನವರಿ 2021, 14:25 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾವನ್ನು ದಿಟ್ಟವಾಗಿ ಎದುರಿಸಲಾಗಿದೆ. ಹಾಗಾಗಿ ಪ್ರಸ್ತುತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲಾಡಳಿತದಿಂದ ಮಂಗಳವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣವನ್ನು ನೆರೆವೇರಿಸಿ ಸಂದೇಶ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್‌ ದರವು ಶೇ 0.6 ಮಾತ್ರ ಇದೆ. 240 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 20 ಹಾಸಿಗೆಗಳ ವೈದ್ಯಕೀಯ ತೀವ್ರ ನಿಗಾ ಘಟಕದ ವ್ಯವಸ್ಥೆ ಮಾಡಲಾಗಿದೆ. 6,000 ಲೀಟರ್ ಸಾಮರ್ಥ್ಯದ ಮೆಡಿಕಲ್ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗಿದೆ. ಕೋವಿಡ್-19 ರೋಗಿಗಳಿಗೆ ದಿನದ 24 ಗಂಟೆ ಆಕ್ಸಿಜನ್ ವ್ಯವಸ್ಥೆ ದೊರೆಯುವಂತೆ ಮಾಡಲಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ರೋಗ ಪತ್ತೆಗಾಗಿ ದಿನಕ್ಕೆ ಒಂದು ಸಾವಿರ ಪರೀಕ್ಷಾ ಪ್ರಯೋಗಗಳ ವ್ಯವಸ್ಥೆ ಇರುವ ಸುಸಜ್ಜಿತ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 1.40 ಲಕ್ಷ ಪ್ರಯೋಗ ಮಾಡಲಾಗಿದೆ ಎಂದು ತಿಳಿಸಿದರು.

ಲಾಕ್‍ಡೌನ್ ವೇಳೆಯಲ್ಲಿ ಸರ್ಕಾರ ವಿವಿಧ ಯೋಜನೆಗಳಡಿ ಸಂತ್ರಸ್ತರಿಗೆ ಪರಿಹಾರ ನೀಡಿ ಸಂತ್ರಸ್ತರ ನೆರವಿಗೆ ನಿಂತಿದೆ. ಮೆಕ್ಕೆಜೋಳ ಬೆಳೆದ 66,148 ರೈತರಿಗೆ ₹ 33.7 ಕೋಟಿ, ಹೂ, ಹಣ್ಣು ಹಾಗೂ ತರಕಾರಿ ಬೆಳೆದ 4,199 ರೈತರಿಗೆ ₹ 3.97 ಕೋಟಿ, ಕಟ್ಟಡ ಕಾರ್ಮಿಕರಿಗೆ ₹ 45.90 ಕೋಟಿ, 1,438 ಕ್ಷೌರಿಕರಿಗೆ ಹಾಗೂ 2,200 ಅಗಸರಿಗೆ ₹ 1.81 ಕೋಟಿ ಸಹಾಯಧನ ನೀಡಲಾಗಿದೆ. 5,159 ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ₹ 2.57 ಕೋಟಿ ಸಹಾಯಧನ ವಿತರಿಸಲಾಗಿದೆ ಎಂದು ವಿವರಿಸಿದರು.

ಲಾಕ್‍ಡೌನ್ ವೇಳೆ ನಗರ ಸ್ಥಳೀಯ ಸಂಸ್ಥೆಯಿಂದ 5.73 ಲಕ್ಷ ಲೀಟರ್ ಹಾಲು ವಿತರಣೆ ಮಾಡಲಾಗಿದೆ. 13.19 ಲಕ್ಷ ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ, ತೊಗರಿಬೇಳೆ, ರಾಗಿ, ಕಡಲೇಕಾಳು, ಹಂಚಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 6,979 ವಲಸೆ ಕಾರ್ಮಿಕರು, ಅಲೆಮಾರಿಗಳು, ಸಂಕಷ್ಟದಲ್ಲಿದ್ದ ಪಡಿತರಚೀಟಿರಹಿತ ಕುಟುಂಬಗಳು, ಭಿಕ್ಷುಕರು, ಲಿಂಗತ್ವ ಅಲ್ಪಸಂಖ್ಯಾತರಿಗೆ ₹ 67.69 ಲಕ್ಷ ಮೌಲ್ಯದ ಆಹಾರ ಕಿಟ್‍ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ಸಂದರ್ಭದಲ್ಲಿ ರೈತರು, ಕಾರ್ಮಿಕರು, ನೇಕಾರರು ಸೇರಿದಂತೆ ದುಡಿಯುವ ವರ್ಗಗಳ ನೆರವಿಗೆ ನಿಂತಿದೆ. ಅತಿವೃಷಿಯಿಂದಾದ ಬೆಳೆ, ಮನೆ, ಜಾನುವಾರು ಹಾನಿಗಳಿಗೆ ಪರಿಹಾರವನ್ನು ನೀಡಲಾಗಿದೆ. ಕೊರೊನಾದಿಂದ ಮೃತಪಟ್ಟ ನಾಲ್ಕು ಪೊಲೀಸರ ಕುಟುಂಬಗಳಿಗೆ ತಲಾ ₹ 30 ಲಕ್ಷ ಪರಿಹಾರ ನೀಡಲಾಗಿದೆ ಎಂದರು.

ಪೌರಕಾರ್ಮಿಕರಿಗೆ 381 ಜಿ+1 ಮಾದರಿಯಲ್ಲಿ ವಸತಿ ಸಮುಚ್ಛಯಗಳನ್ನು ನಿರ್ಮಿಸುವ ಕಾಮಗಾರಿಯು ಪ್ರಗತಿಯಲ್ಲಿದೆ. ಜಲಸಿರಿ ಯೋಜನೆಯಡಿಯಲ್ಲಿ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಸಲು ಅಂದಾಜು ಮೊತ್ತ ₹ 83.37 ಕೋಟಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ ಕೆ.ವಿ, ಮೇಯರ್ ಬಿ.ಜಿ. ಅಜಯಕುಮಾರ್, ಧೂಡಾ ಅಧ್ಯಕ್ಷ ಶಿವಕುಮಾರ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, , ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್‌ ಗಿರೀಶ್ ಅವರೂ ಇದ್ದರು.

ವಿಡಿಯೊ, ಫೋಟೊಗ್ರಫಿ ಗೊಂದಲ

ಧ್ವಜಾರೋಹಣ, ಪಥಸಂಚಲನ, ವಂದನೆ ಸ್ವೀಕಾರ ಸಹಿತ ಗಣರಾಜ್ಯೋತ್ಸವದ ಪ್ರಕ್ರಿಯೆಗಳನ್ನು ಸೆರೆ ಹಿಡಿಯಲು ದೃಶ್ಯಮಾಧ್ಯಮದ ಕ್ಯಾಮೆರಾಮನ್‌ ಮತ್ತು ಪತ್ರಿಕಾಮಾಧ್ಯಮದ ಛಾಯಾಗ್ರಾಹಕರಿಗೆ ನೇರ ಅವಕಾಶ ನೀಡದೇ ಇರುವುದು ಗೊಂದಲಕ್ಕೆ ಕಾರಣವಾಯಿತು.

ಮಾಧ್ಯಮದವರಿಗೆ ಪ್ರತ್ಯೇಕವಾಗಿ ಶಾಮಿಯಾನ ಹಾಕಿ ಕೂರಿಸಲಾಗಿತ್ತು. ಅಲ್ಲಿಂದಲೇ ಫೊಟೊ, ವಿಡಿಯೊ ಮಾಡಬೇಕು ಎಂದು ಎಂದು ನಿರ್ಬಂಧ ವಿಧಿಸಲಾಗಿತ್ತು. ಆದರೆ ವೇದಿಕೆಯ ಬಲಪಾರ್ಶ್ವದಲ್ಲಿ ಇದ್ದ ಕ್ಯಾಮೆರಾಮನ್‌, ಫೋಟೊಗ್ರಾಫರ್‌ಗಳಿಗೆ ಸೆರೆಹಿಡಿಯಲು ಆಗುತ್ತಿರಲಿಲ್ಲ. ಎದುರಿನಿಂದ ತೆಗೆಯುವಂತಿರಲಿಲ್ಲ.

ಬಳಿಕ ಸನ್ಮಾನ ಕಾರ್ಯಕ್ರಮವನ್ನು ಸೆರೆಹಿಡಿಯಲು ಕರೆದಾಗ ಕ್ಯಾಮೆರಾಮನ್, ಫೋಟೊಗ್ರಾಫರ್‌ಗಳು ನಿರಾಕರಿಸಿದರು. ಅವರಿಗೆ ಪತ್ರಕರ್ತರು ಬೆಂಬಲವಾಗಿ ನಿಂತರು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಐಜಿಪಿ ಸಹಿತ ಅಧಿಕಾರಿಗಳು ಬಂದು ಮನವೊಲಿಸಲು ಪ್ರಯತ್ನಿಸಿದರೂ ಮಾಧ್ಯಮದವರು ಜಗ್ಗಲಿಲ್ಲ. ಉಸ್ತುವಾರಿ ಸಚಿವ ಪತ್ರಿಕಾಗೋಷ್ಠಿಯನ್ನು ಕೂಡ ಬಹಿಷ್ಕರಿಸಿದರು.

ಐಜಿಪಿ ಎಸ್‌. ರವಿ ಅವರು ಪ್ರೆಸ್‌ಕ್ಲಬ್‌ಗೆ ಬಂದು, ‘ಶಿಸ್ತುಬದ್ಧವಾಗಿ ನಡೆಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಫೋಟೊ, ವಿಡಿಯೊ ತೆಗೆಯಲು ಅನುಕೂಲ ಆಗುವಲ್ಲಿ ವ್ಯವಸ್ಥೆ ಮಾಡಿಕೊಡದೇ ಲೋಪವಾಗಿದೆ. ಮುಂದೆ ಅವುಗಳನ್ನು ಸರಿಪಡಿಸಿಕೊಂಡು ಹೋಗಲಾಗುವುದು’ ಎಂದು ಗೊಂದಲವನ್ನು ಸರಿಪಡಿಸಿದರು.

ಮೇಯರ್‌ಗೂ ಅಸಮಾಧಾನ

ನಗರದ ಪ್ರಥಮ ಪ್ರಜೆ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ವೇದಿಕೆಗೆ ಹತ್ತಲು ಪೊಲೀಸರು ಅಡ್ಡಿ ಪಡಿಸಿದರು. ಈ ಬಗ್ಗೆ ಮೇಯರ್‌ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸನ್ಮಾನ, ಗೌರವಾರ್ಪಣೆ

‘ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ(ಕೋಟಾ)-2003’ರ ಅಡಿಯಲ್ಲಿ ದಾವಣಗೆರೆ ನಗರ ಶೇಕಡಾ 90 ರಷ್ಟು ಅನುಷ್ಠಾನ ಹೊಂದಿರುವ ಪ್ರಯುಕ್ತ ‘ತಂಬಾಕು ಮುಕ್ತ ದಾವಣಗೆರೆ ನಗರ’ ವನ್ನಾಗಿ ಘೋಷಿಸಲಾಗಿದೆ. ಅದಕ್ಕಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧ್ಯಕ್ಷ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕೋಶದ ಉಪಾಧ್ಯಕ್ಷ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ, ನೋಡಲ್ ಅಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸಹಿತ ಹಲವರನ್ನು ಗೌರವಿಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ಸೇವೆ ಸಲ್ಲಿಸಿದ ಡಾ. ಮುನಾವರ್ ಹುಸೇನ್, ಡಾ. ಚಂದ್ರಪ್ಪ, ಡಾ. ಆರ್.ಎಂ.ಗಿರಿ, ಡಾ.ಹರ್ಷ ಬಿ.ಎಂ., ಡಾ.ನವೀನ್, ಸ್ಪಂದನಾ, ಎನ್‌ಸಿಸಿ ಸಾಧಕರಾದ ಶ್ರೀಷ್ಮ ಹೆಗಡೆ, ಮಹಮ್ಮದ್ ಮುಸವೀರ್ ಪಾಷಾ, ಇಂಫನಾ ಆರ್., ಅನುಶ್ರೀ ಬಿ.ಜಿ, ಅವರನ್ನು ಗೌರವಿಸಲಾಯಿತು.

ಆಕರ್ಷಕ ಪಥ ಸಂಚಲನ

ಡಿಎಆರ್ ಪೊಲೀಸ್ ತಂಡ, ನಾಗರಿಕ ಪೊಲೀಸ್ ತಂಡ, ಗೃಹ ರಕ್ಷಕದಳ, ಅರಣ್ಯ ಇಲಾಖೆ, ಅಬಕಾರಿ ಪೊಲೀಸ್ ತಂಡ, ಅಗ್ನಿಶಾಮಕ ದಳಗಳು ಪೊಲೀಸ್ ವಾದ್ಯವೃಂದದ ಹಿಮ್ಮೇಳದಲ್ಲಿ ಶಿಸ್ತಿನ ಪಥಸಂಚಲನ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT