ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಸಂಭ್ರಮ; ಖರೀದಿ ಭರಾಟೆ

ಹೂವು, ಹಣ್ಣುಗಳ ದರ ದುಬಾರಿ; ಮಾವಿನ ಎಲೆ, ಬೇವಿನ ಎಲೆಗೆ ಬೇಡಿಕೆ
ರಾಮಮೂರ್ತಿ ಪಿ.
Published 9 ಏಪ್ರಿಲ್ 2024, 7:35 IST
Last Updated 9 ಏಪ್ರಿಲ್ 2024, 7:35 IST
ಅಕ್ಷರ ಗಾತ್ರ

ದಾವಣಗೆರೆ: ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಬಿಸಿಲಿನ ಝಳ ಮಾತ್ರವಲ್ಲದೇ, ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಬಿಸಿ ಮುಟ್ಟಿಸಿದೆ.

ಯುಗಾದಿ ಹಬ್ಬದ ಖರೀದಿಗಾಗಿ ಸಾರ್ವಜನಿಕರು ಬೆಳಿಗ್ಗೆಯೇ ಮಾರುಕಟ್ಟೆಯತ್ತ ಹೆಜ್ಜೆ ಹಾಕಿದ್ದರು. ನಗರದ ಕೆ.ಆರ್‌.ಮಾರುಕಟ್ಟೆ, ಪಾಲಿಕೆ ಮುಂಭಾಗ, ಪ್ರವಾಸಿ ಮಂದಿರ ರಸ್ತೆ, ಹೊಸ ಬಸ್‌ ನಿಲ್ದಾಣದ ಮುಂಭಾಗ ಸೇರಿದಂತೆ ನಗರದ ಹಲವೆಡೆ ಹೂವು, ಹಣ್ಣು, ಎಲೆ, ಮಾವಿನ ಎಲೆ, ಬೇವಿನ ಸೊಪ್ಪು ಖರೀದಿ ಕಂಡುಬಂತು.

ಮಧ್ಯಾಹ್ನದ ಸುಡುಬಿಸಿಲಿನಿಂದ ಪಾರಾಗಲು ಬಹುತೇಕರು ಬೆಳಿಗ್ಗೆ ಹಾಗೂ ಸಂಜೆ ಮಾರುಕಟ್ಟೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿದರು. ವ್ಯಾಪಾರಿಗಳು ಮಾತ್ರ ಸುಡುಬಿಸಿಲಿನಲ್ಲಿಯೇ ಇಡೀ ದಿನ ವ್ಯಾಪಾರದಲ್ಲಿ ತೊಡಗಿದ್ದರು.

ಬೆಲೆ ಏರಿಕೆ ಬಿಸಿ:

ಕನಕಾಂಬರ, ಸೇವಂತಿಗೆ, ಮಲ್ಲಿಗೆ ಸೇರಿದಂತೆ ಬಹುತೇಕ ಹೂವುಗಳ ದರದಲ್ಲಿ ಏರಿಕೆಯಾಗಿದೆ. ಹಬ್ಬದ ಪೂಜೆಗೆ ಹೂವು ಅನಿವಾರ್ಯವಾದ್ದರಿಂದ ವ್ಯಾಪಾರಿಗಳೊಂದಿಗೆ ದರ ಜಟಾಪಟಿ ನಡೆಸುತ್ತಲೇ ಗ್ರಾಹಕರು ಹೂವು ಖರೀದಿಸುತ್ತಿರುವ ದೃಶ್ಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿತ್ತು.

ಮಾರು ಹೂವಿಗೆ ಕನಕಾಂಬರ ₹ 80, ಸೇವಂತಿಗೆ ₹ 120ರಿಂದ ₹ 150, ಮಲ್ಲಿಗೆ, ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ ₹ 100 ಹಾಗೂ ಬಟನ್‌ ರೋಜಾ ಕಾಲ್‌ಕೆಜಿಗೆ ₹ 100 ದರ ಇತ್ತು. ಬೆಲೆ ಏರಿಕೆಯಿಂದಾಗಿ ಮಾರು ಹೂವು ಖರೀದಿಸುವವರಿಗಿಂತ ಅರ್ಧ ಮಾರು ಖರೀದಿಸುವವರೇ ಜಾಸ್ತಿ ಕಂಡುಬಂದರು.

ಹಣ್ಣುಗಳ ದರವೂ ಜಾಸ್ತಿ ಆಗಿದ್ದು, ಕೆ.ಜಿ. ಕಿತ್ತಳೆ ಹಣ್ಣು ₹ 120ರಿಂದ 150, ಪಪ್ಪಾಯ ₹ 50ರಿಂದ 70, ಮಾವು ₹100ರಿಂದ ₹ 150 ಇದೆ. ಡಜನ್‌ ಬಾಳೆಹಣ್ಣಿನ ದರ ₹ 50ರಿಂದ ₹ 60 ಇದೆ. ಮಾವಿನ ಎಲೆ 2 ಕಟ್ಟಿಗೆ ₹ 10, ಬೇವಿನ ಎಲೆಯ 2 ಕಟ್ಟಿಗೆ ₹ 10 ಇದೆ. ತೆಂಗಿನಕಾಯಿ, ನಿಂಬೆ ಹಣ್ಣುಗಳಿಗೂ ಬೇಡಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT