ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ವಿಚಾರ: ರಾಜಕಾರಣ ಬೇಡ

ಭೂಮಿ ಪೂಜೆ ನೆರವೇರಿಸಿದ ಹರಿಹರದ ಶಾಸಕ ಎಸ್‌. ರಾಮಪ್ಪ ಆಗ್ರಹ
Last Updated 17 ಆಗಸ್ಟ್ 2021, 2:05 IST
ಅಕ್ಷರ ಗಾತ್ರ

ಹರಿಹರ: ತುಂಗಭದ್ರಾ ಸೇತುವೆ ಸಮೀಪದ ರಸ್ತೆ ಕಾಮಗಾರಿ ವಿಚಾರದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್‍ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಎಸ್‍. ರಾಮಪ್ಪ ಅವರು ಸಂಸದರಿಗೆ ದೂರು ಸಲ್ಲಿಸಿದರು.

ನಗರದ ಲೇಬರ್‍ ಕಾಲೊನಿಯ ಉದ್ಯಾನಕ್ಕೆ ಧೂಡಾ ಅನುದಾನದಲ್ಲಿ ನಡೆಯುತ್ತಿರುವ ಕಾಂಪೌಂಡ್‍ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು.

ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿರುವ ನಾಡ್‍ ಬಂದ್‍ ಷಾ ವಲಿ ದರ್ಗಾವನ್ನು ಈ ಹಿಂದೆ ನಡೆದ ರಸ್ತೆ ವಿಸ್ತರಣೆ ವೇಳೆ ತೆರವುಗೊಳಿಸಲಾಗಿತ್ತು. ಭಕ್ತರ ದೇಣಿಗೆ ಹಣದಲ್ಲಿ ಮತ್ತೆ ನಿರ್ಮಿಸಲಾಗಿದೆ. ದರ್ಗಾ ಮುಂದಿನ ರಸ್ತೆ ನಿರ್ಮಾಣಕ್ಕೆ ಮಾಜಿ ಶಾಸಕ ಬಿ.ಪಿ. ಹರೀಶ್‍ ಜಿಲ್ಲಾಡಳಿತ ಮೇಲೆ ಒತ್ತಡ ಹೇರುವ ಮೂಲಕ ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ನಗರಸಭೆಗೆ ಮಂಜೂರಾದ₹ 8 ಕೋಟಿ ಅನುದಾನವನ್ನು ಸರ್ಕಾರ ಹಿಂಪಡೆದಿದೆ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ಮುಂದಿನ ವಾರ ಸಂಸದರೊಂದಿಗೆ ಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ’ ಎಂದು ತಿಳಿಸಿದರು.

ಧೂಡಾ ಸದಸ್ಯ ರಾಜು ರೋಖಡೆ ಮಾತನಾಡಿ, ‘ರಸ್ತೆ ವಿಚಾರದಲ್ಲಿ ಯಾರು ಅಡ್ಡಿಪಡಿಸಿಲ್ಲ. ಜಿಲ್ಲಾಡಳಿತ ಲೋಕಪಯೋಗಿ ಇಲಾಖೆಯ ನಿಯಮಗಳನ್ನು ಪರಿಶೀಲಿಸಿ, ಕಾನೂನು ರೀತಿ ಕ್ರಮ ಕೈಗೊಂಡು ರಸ್ತೆ ನಿರ್ಮಿಸಲಿ ಎಂದು ತಿರುಗೇಟು’ ನೀಡಿದರು.

ಕಾಂಗ್ರೆಸ್‍ ಬೆಂಬಲಿಗರು ವಾಗ್ವಾದಕ್ಕಿಳಿದಾಗ ಮಧ್ಯ ಪ್ರವೇಶಿಸಿದ ಸಂಸದ ಜಿ.ಎಂ. ಸಿದ್ದೇಶ್ವರ, ‘ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಸ್ಥಳೀಯ ನಾಯಕರು ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ನಗರದ ಉದ್ಯಾನವನದ ಅಭಿವೃದ್ಧಿಗೆ ₹ 1.50 ಕೋಟಿ, ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ₹ 35 ಲಕ್ಷ ಹಾಗೂ ಅಲಂಕಾರಿಕ ದೀಪಗಳ ಅಳವಡಿಕೆಗೆ ಧೂಡಾದಿಂದ ಅನುದಾನ ಬಿಡುಗಡೆಯಾಗಿದೆ’ ಎಂದು ತಿಳಿಸಿದರು.

ಬಹುತೇಕ ಕಾಮಗಾರಿಗಳಿಗೆ ಗುತ್ತಿಗೆದಾರರು ಟೆಂಡರ್‍ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಬಿಡ್‍ ಮಾಡಿದ್ದಾರೆ. ಆದಕಾರಣ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕಾಮಗಾರಿಯ ಗುಣಮಟ್ಟದ ಬಗ್ಗೆ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.

ಗುತ್ತಿಗೆದಾರನಿಗೆ ನೋಟಿಸ್‍: ನಗರದಲ್ಲಿ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸದ ಗುತ್ತಿಗೆದಾರ ಬಾಷಾ ಅವರಿಗೆ ನೋಟಿಸ್‍ ನೀಡಿ, ಕಾಮಗಾರಿಗಳಿಗೆ ಮರು ಟೆಂಡರ್‍ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಎಸ್‍. ರಾಮಪ್ಪ ಈ ಸೂಚನೆಗೆ ಸಹಮತ ಸೂಚಿಸಿದರು.

ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‍, ನಗರಸಭೆ ಅಧ್ಯಕ್ಷೆ ಡಿ.ಯು. ರತ್ನಾ, ಸದಸ್ಯರಾದ ಎನ್‍. ರಜನಿಕಾಂತ್‍, ಅಶ್ವಿನಿ, ಹನುಮಂತಪ್ಪ, ಎಇಇ ಎಸ್.ಎಸ್‍. ಬಿರಾದಾರ್‍, ದೂಡಾ ಎಇಇ ಶ್ರೀಕರ್‍, ಮುಖಂಡರಾದ ಎಚ್‍.ಎಂ. ಮಾರುತಿ ಶ್ರೇಷ್ಠಿ, ಮಾಲತೇಶ ಭಂಡಾರೆ, ಬಾತಿ ಚಂದ್ರಶೇಖರ್‍ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT