ಗುರುವಾರ , ಆಗಸ್ಟ್ 11, 2022
22 °C
ಹೂಳುವುದು ಇಲ್ಲವೇ ಅಗ್ನಿಸ್ಪರ್ಶ ಕಾರ್ಯ 2019ರಿಂದಲೂ ರಸ್ತೆ ಬದಿಯಲ್ಲೇ ನಡೆಯುತ್ತಿದೆ

ಪುಟಗನಾಳ್‌: ಶವ ಹೂಳಲು ಈ ಗ್ರಾಮದಲ್ಲಿ ರುದ್ರಭೂಮಿಯೇ ಇಲ್ಲ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

ದಾವಣಗೆರೆ ತಾಲ್ಲೂಕಿನ ಪುಟಗನಾಳ್ ಗ್ರಾಮದ ಬಳಿ ರಸ್ತೆಯ ಬದಿಯಲ್ಲೇ ಅಂತ್ಯ ಸಂಸ್ಕಾರ ಮಾಡಿರುವುದು.

ದಾವಣಗೆರೆ: ತಾಲ್ಲೂಕಿನ ಪುಟಗನಾಳ್ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲು ಭೂಮಿ ಇಲ್ಲದೇ ರಸ್ತೆ ಬದಿಯಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಹೊರವಲಯದಲ್ಲಿ ಹರಪನಹಳ್ಳಿ ರಸ್ತೆಯ ಬಳಿ ಭೂಮಿ ಇಲ್ಲದ ಪರಿಶಿಷ್ಟ ಜಾತಿಯವರು ಮೃತಪಟ್ಟರೆ ಅವರ ಅಂತ್ಯ ಸಂಸ್ಕಾರ ರಸ್ತೆ ಬದಿಯಲ್ಲೇ ನಡೆಯುತ್ತದೆ. ಹೂಳುವುದು ಇಲ್ಲವೇ ಅಗ್ನಿಸ್ಪರ್ಶ ಕಾರ್ಯ 2019ರಿಂದಲೂ ಈ ರೀತಿ ನಡೆಯುತ್ತಿದೆ.

ಗ್ರಾಮದ ಯುವಕ ಹನುಮಂತಪ್ಪ (22) ಮೃತಪಟ್ಟ ವೇಳೆ ಅಂತ್ಯ ಸಂಸ್ಕಾರಕ್ಕಾಗಿ ಗುದ್ದಲಿ, ಸಲಾಕೆ, ಹಿಡಿದು ಗುಂಡಿ ತೆಗೆಯುತ್ತಿದ್ದಾಗ ಕೆಲವರು ವಿಡಿಯೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

‘ಗ್ರಾಮದ 400ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ವಂತ ಜಮೀನು ಇಲ್ಲ. ಅವರ ಸಂಬಂಧಿಕರು ಸತ್ತರೆ ಹೂಳಲು ಸ್ವಂತ ಜಮೀನು ಇಲ್ಲ. ಈ ಹಿಂದೆ ಒಂದು ಮಡಿ (ಜಮೀನು) ಇತ್ತು. ಆನೆಕೊಂಡ ಗ್ರಾಮದ ಮಾಲೀಕ ತನ್ನ ಸ್ವಂತಕ್ಕೆ ತೆಗೆದುಕೊಂಡಿದ್ದರಿಂದ ಅದು ಕೈತಪ್ಪಿ ಹೋಯಿತು’ ಎನ್ನುತ್ತಾರೆ ಪುಟಗನಾಳ್ ಗ್ರಾಮ ಪಂಚಾಯಿತಿ ಸದಸ್ಯ ರುದ್ರಮುನಿ.

‘ಉಪ್ಪಾರ, ಲಂಬಾಣಿ, ಲಿಂಗಾಯತ, ವಿಶ್ವಕರ್ಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿ ಹಲವು ಸಮುದಾಯಗಳು ಇವೆ. ಆದರೆ ಹಿಂದುಳಿದ ಪರಿಶಿಷ್ಟ ಜಾತಿಯವರಿಗೆ ಹೂಳಲು ಜಮೀನು ಇಲ್ಲ. ಜಮೀನು ಇದ್ದವರು ಅಲ್ಲಿ ಹೂಳುತ್ತಾರೆ. ಇಲ್ಲದವರು ಎಲ್ಲಿ ಹೋಗಬೇಕು. ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಹಣವೂ ಬಿಡುಗಡೆಯಾಗಿದೆ. ಆದರೆ ಜಾಗ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ.

‘2019ರಲ್ಲಿ ನಮ್ಮ ಅತ್ತೆ ತೀರಿಕೊಂಡರು ಆಗ ರಸ್ತೆಯಲ್ಲೇ ಅಂತ್ಯ ಸಂಸ್ಕಾರ ನಡೆಸಬೇಕಾದ ಪರಿಸ್ಥಿತಿ ಬಂತು. ಈವರೆಗೆ ನನಗೆ ಗೊತ್ತಿರುವಂತೆ 10ರಿಂದ 12 ಮಂದಿಯ ಶವಸಂಸ್ಕಾರ ರಸ್ತೆ ಪಕ್ಕದಲ್ಲೇ ಆಗಿದೆ. ಯಾವುದಾದರೂ ಜಾಗ ಗುರುತಿಸಬೇಕು’ ಎಂದು ದಲಿತ ಸಂಘಟನೆ ಮುಖಂಡ ಬೇತೂರು ಮಂಜುನಾಥ್ ಒತ್ತಾಯಿಸುತ್ತಾರೆ.

‘ಸ್ಮಶಾನಕ್ಕೆ ಒಂದು ಎಕರೆ ಜಾಗ ಬೇಕಾಗಿದೆ. ಆದರೆ, ಜಮೀನು ಮಾಲೀಕ ಎರಡು ಎಕರೆಯನ್ನು ಕೊಂಡುಕೊಂಡರೆ ಮಾತ್ರ ಮಾರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದು ತಹಶೀಲ್ದಾರ್ ಕೆ.ಎನ್‌.ಗಿರೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು