ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ಶಿಕ್ಷಣ ತರಗತಿಯೊಳಗೆ ಇಲ್ಲ: ಕರಡು ಸಮಿತಿ ಸದಸ್ಯ ಪ್ರೊ.ತೇಜಸ್ವಿ ಕಟ್ಟೀಮನಿ

ಹೊಸ ಶಿಕ್ಷಣ ನೀತಿ
Last Updated 22 ಅಕ್ಟೋಬರ್ 2021, 6:11 IST
ಅಕ್ಷರ ಗಾತ್ರ

ದಾವಣಗೆರೆ: ‘ಶಿಕ್ಷಣ ಇಂದು ತರಗತಿಯೊಳಗೆ ಉಳಿದಿಲ್ಲ. ಅದಕ್ಕೆ ಸರಿಯಾಗಿ ಶಿಕ್ಷಣ ನೀತಿ ರೂಪಿಸಬೇಕು. ಆ ಕೆಲಸವನ್ನು ಹೊಸ ಶಿಕ್ಷಣ ನೀತಿ ಮಾಡಿದೆ. ಆಧುನಿಕ ಸವಾಲುಗಳಿಗೆ ಬೇಕಾದ ಮಾನವ ಸಂಪನ್ಮೂಲವನ್ನು ತಯಾರು ಮಾಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶ. ಬಡತನ, ಡಯಾಬಿಟೀಸ್‌, ಕೋವಿಡ್‌, ಅನಕ್ಷರತೆ, ಬೇಗ ಮಕ್ಕಳು ಸಾಯೋದು, ಮಹಿಳೆಯರು ಸಾಯೋದು, ವಿವಿಧ ರೋಗಗಳು ಹೆಚ್ಚಾಗುವುದು ಎಲ್ಲವೂ ಆಧುನಿಕ ಸವಾಲುಗಳು. ಅದನ್ನು ಎದುರಿಸುವ ಶಿಕ್ಷಣ ನಮ್ಮದಾಗಬೇಕು. ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಕೂಡ ಸವಾಲು. ತಂತ್ರಜ್ಞಾನದ ಮೂಲಕ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ...’

ಆಂಧ್ರಪ್ರದೇಶ ಕೇಂದ್ರೀಯ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯರಾಗಿರುವ ಪ್ರೊ. ಟಿ.ವಿ. ಕಟ್ಟೀಮನಿ ಅವರ ಮಾತುಗಳು ಇವು. ಹೊಸ ಶಿಕ್ಷಣ ನೀತಿ ಬಗ್ಗೆ ಅವರು ‘ಪ್ರಜಾವಾಣಿ’ ಜತೆಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವುಗಳ ವಿವರ ಇಲ್ಲಿವೆ.

‘ಹೊಸ ಶಿಕ್ಷಣ ನೀತಿ ಚರ್ಚೆಯಾಗಿಯೇ ಜಾರಿಗೆ ತರಲಾಗಿದೆ. ದೇಶದ ವಿವಿಧ ಭಾಗಗಳ 2.5 ಲಕ್ಷ ಜನರ ಜತೆಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ಧಾರ್ಮಿಕ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾಂಸ್ಕೃತಿಕ ಸಂಘಗಳು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳು, ಕೊಳೆಗೇರಿ ಸಂಸ್ಥೆಗಳು, ಬುಡಕಟ್ಟು ಸಂಸ್ಥೆಗಳು, ದಲಿತ ಕಾಲೊನಿ, ಮುಸ್ಲಿಂ ಸಹಿತ ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳು ಹೀಗೆ ಎಲ್ಲರನ್ನೂ ಸಂಪರ್ಕಿಸಿ ಸಂವಾದ‌, ಚರ್ಚೆಗಳನ್ನು ನಡೆಸಲಾಗಿದೆ. ಮುಂಬೈ, ಕೋಲ್ಕತ್ತ, ಬೆಂಗಳೂರು, ಸೂರತ್‌, ಅಹಮದಾಬಾದ್‌, ಕಚ್‌, ರಣಕಚ್‌ ಸಹಿತ ಎಲ್ಲ ನಗರಗಳಲ್ಲಿ ನೇರವಾಗಿ ಭಾಗಿಯಾಗಿ ಈ ಬಗ್ಗೆ ಚರ್ಚೆ ಮಾಡಲಾಗಿದೆ.’

‘800 ವಿಶ್ವವಿದ್ಯಾಲಯಗಳಲ್ಲಿ ನಾನೇ 400 ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದೇನೆ. ಇದೇ ರೀತಿ ಕರಡು ಸಮಿತಿಯಲ್ಲಿ ಇರುವವರು ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.’

‘ಪ್ರಧಾನಮಂತಿ ಘೋಷಣೆ ಮಾಡಿದ ಮೇಲೆ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಬಗ್ಗೆ ಚರ್ಚಿಸಿದ್ದಾರೆ. ವಿಧಾನಪರಿಷತ್‌, ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಕರ್ನಾಟಕ ಸರ್ಕಾರ ಕೂಡ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಉನ್ನತ ಶಿಕ್ಷಣದಲ್ಲಿ ಮಾತ್ರ ಜಾರಿಯಾಗುತ್ತಿದೆ. ನಿಜವಾಗಿ ಮೊದಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಜಾರಿಯಾಗಬೇಕಿತ್ತು. ಬಳಿಕ ಉನ್ನತ ಶಿಕ್ಷಣದಲ್ಲಿ ತರಬೇಕಿತ್ತು. ಆದರೆ, ಉನ್ನತ ಶಿಕ್ಷಣ ಸಚಿವರು ಬೇಗ ಸ್ಪಂದಿಸಿದ್ದಾರೆ. ಅಲ್ಲದೇ ಉನ್ನತ ಶಿಕ್ಷಣ ಅನ್ನುವುದು ಒಂದು ಮಿತಿಯಲ್ಲಿ ಇರುತ್ತದೆ. ಪ್ರಾಥಮಿಕ ಹಂತದಲ್ಲಿ ಜಾರಿಗೆ ತರುವುದೇ ದೊಡ್ಡ ಸವಾಲು. ಪ್ರಾಥಮಿಕ ಶಿಕ್ಷಣ ಸಚಿವ ನಾಗೇಶ್‌ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡರು.

‘ಶಿಕ್ಷಣಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ. ಶಿಕ್ಷಣ ಎಲ್ಲರ ಮಕ್ಕಳಿಗೂ ಬೇಕು. ಕಾಂಗ್ರೆಸ್‌ನವರ ಮಕ್ಕಳಿಗೆ ಅಥವಾ ಬಿಜೆಪಿಯವರ ಮಕ್ಕಳಿಗೆ ಅಥವಾ ಜೆಡಿಎಸ್‌ನವರ ಮಕ್ಕಳಿಗೆ ಮಾತ್ರ ಶಿಕ್ಷಣ ಎಂಬುದಿಲ್ಲ. ಹಾಗಾಗಿ ಕಮ್ಯುನಿಸ್ಟ್‌, ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲರೂ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ಹೊಸ ಶಿಕ್ಷಣ ನೀತಿ ಬಗ್ಗೆ ಚರ್ಚೆಯಾಗುತ್ತಿದೆ’ ಎಂದು ಹೇಳುವ ಮೂಲಕ ಟೀಕೆಗಳಿಗೆ ಪ್ರತಿಕ್ರಿಯಿಸಿದರು.

‘ಪ್ರಧಾನಿ ಹೇಳಿದರೆ, ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹೇಳಿದರೆ ಈ ನೀತಿ ಜಾರಿಯಾಗುವುದಿಲ್ಲ. ಎಲ್ಲ ಕಡೆ ಜಾರಿ ಮಾಡುವವರು ಶಿಕ್ಷಕರು. ಸ್ವತಃ ಮೋದಿ ಕೋಲು ಹಿಡಿದುಕೊಂಡು ನಿಂತರೂ ಶಿಕ್ಷಕರು ಮನಸ್ಸು ಮಾಡಿದರೆ ಈ ನೀತಿಯನ್ನು ವಿಫಲಗೊಳಿಸಬಹುದು. ಹಾಗಾಗಿ ಇದರ ಯಶಸ್ವಿಗೊಳಿಸಬಲ್ಲ ಅಥವಾ ಫೈಲ್‌ ಮಾಡಬಲ್ಲ ಶಕ್ತಿ ಶಿಕ್ಷಕರಲ್ಲಿದೆ.’

‘ಅಮೆರಿಕ ಉತ್ಪಾದನೆಯಲ್ಲಿ ಮುಂದಿಲ್ಲ. ಆದರೆ, ತಾಂತ್ರಿಕತೆಯ ಮೂಲಕ ಮಾರುಕಟ್ಟೆ ಮಾಡಿ ಅವರು ಮುಂದೆ ಹೋಗುತ್ತಿದ್ದಾರೆ. ನಾವು ಹಿಂದೆ ಉಳಿಯುತ್ತಿದ್ದೇವೆ. ರೊಟ್ಟಿ ನಾವು ಮಾಡುತ್ತೇವೆ. ಮಂಡಕ್ಕಿ ನಾವು ಮಾಡುತ್ತೇವೆ. ಆದರೆ, ಅದರ ಮಾರುಕಟ್ಟೆ ನಾವು ಮಾಡುವುದಿಲ್ಲ. ಕಾರು ನಮ್ಮದು, ಚಾಲಕರೂ ನಮ್ಮವರು. ಪಂಚರ್‌ ಹಾಕೋರು ನಮ್ಮವರು. ಪೆಟ್ರೋಲ್‌ ಬಂಕ್‌ ನಮ್ಮದು. ಆದರೆ ಅದನ್ನು ನಡೆಸುವವರು ಅಮೆರಿಕದವರು. ಟೆಕ್ನಾಲಜಿ ಮೂಲಕ ವ್ಯಾಪಾರ ಮಾಡೋ ಶಿಕ್ಷಣ ನಾವೂ ಪಡೆಯಬೇಕು. ತಾಂತ್ರಿಕತೆಯ ಮೂಲಕ ಆಧುನಿಕ ದೇಶವನ್ನು ಕಟ್ಟಲು ಭಾರತವನ್ನು ಸಜ್ಜು ಮಾಡಬೇಕು ಎಂಬುದು ಹೊಸ ಶಿಕ್ಷಣ ನೀತಿಯ ಉದ್ದೇಶ.’

‘ಓಕಲ್ ಫಾರ್‌ ಲೋಕಲ್‌ ಎಂಬ ಪ್ರಧಾನಿಯವರ ಮಾತು ಬಹಳ ಅರ್ಥಪೂರ್ಣವಾದುದು. ದಾವಣಗೆರೆಯ ವಿಶೇಷ ವಸ್ತುಗಳ ಬಗ್ಗೆ ದಾವಣಗೆರೆಯವರು ಮಾತನಾಡಬೇಕು. ಇಲ್ಲಿನ ಅಡಿಕೆ ಬಗ್ಗೆ, ಇಲ್ಲಿನ ಮಂಡಕ್ಕಿ ಬಗ್ಗೆ ನಾವು ಮಾತನಾಡದೇ ಹೋದರೆ ಬೇರೆ ಯಾರೋ ಮಾತನಾಡಿ, ವ್ಯಾಪಾರ ಮಾಡಿ ದುಡ್ಡು ಮಾಡಿಕೊಂಡು ಹೋಗುತ್ತಾರೆ.’

‘ನಮ್ಮ ರೈತರು ಬೆಳೆಯುವ ಟೊಮೆಟೊ, ಅಕ್ಕಿ, ಅರಿಶಿನ, ಜೋಳ ಸಹಿತ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ತಾಂತ್ರಿಕತೆಯ ಮೂಲಕ ಒಳ್ಳೆಯ ದರಕ್ಕೆ ಮಾರುವ ತಾಂತ್ರಿಕತೆಯನ್ನು ಕಂಡುಕೊಳ್ಳಬೇಕು. ಅದನ್ನು 10ನೇ ತರಗತಿ ಪಾಸ್‌ ಆದವನೂ ಕಲಿಯಬೇಕು. ಫೈಲ್‌ ಆದವನೂ ಕಲಿಯಬೇಕು. ಅದಕ್ಕೆ ಸರಿಯಾದ ಶಿಕ್ಷಣ ನಮ್ಮದಾಗಬೇಕು.’

‘ಆಂಧ್ರದಲ್ಲಿ ನಾವು ಅಡ್ಡಾಡುತ್ತಿದ್ದಾಗ ಒಂದು ಊರಿನಲ್ಲಿ ಕುರಿ, ಆಡು ಸಾಕುವವರು ಬಹಳ ಮಂದಿ ಇರುವುದು ಕಂಡು ಬಂತು. ನಮ್ಮ ಶಿಕ್ಷಕರ ಮೂಲಕ ಅದನ್ನು ಸರ್ವೆ ಮಾಡಿಸಿದಾಗ ಅಲ್ಲಿ 800ಕ್ಕೂ ಅಧಿಕ ಮಂದೆಗಳಿದ್ದವು. ಅದರಲ್ಲಿ ಪರಂಪರಾಗತವಾಗಿ ಕುರಿ, ಆಡು ಸಾಕುವ ಜಾತಿಯವರ ಪ್ರಮಾಣ ಶೇ 30ರಷ್ಟು ಇದ್ದರೆ, ಶೇ 70ರಷ್ಟು ಮಂದಿ ಬೇರೆ ಬೇರೆ ಜಾತಿ ಸಮುದಾಯದವರಾಗಿದ್ದರು. ಸಾಕುವವರು ಬೇರೆ ಬೇರೆಯವರಾಗಿದ್ದರೂ ಅವುಗಳನ್ನು ಕಾಯುವವರು ಮಾತ್ರ ಕುರಿ ಸಾಕುವ ಜಾತಿಯೇ ಆಗಿತ್ತು. ವಾಣಿಜ್ಯ ಮೌಲ್ಯ ಇರುವುದರಿಂದ ಸಾಕಲು ಬೇರೆಯವರು ಬಂದಿದ್ದರು. ಕುರಿ ಕಾಯುವವರಿಗೆ ಬಿರುಗಾಳಿ, ಚಂಡಮಾರುತಗಳ ಬಗ್ಗೆ, ಕುರಿಗೆ ಬರುವ ವೈರಸ್‌ಗಳ ಬಗ್ಗೆ ಮಾಹಿತಿ ಸಿಗುವಂತಾಗಬೇಕು. ಅದಕ್ಕೆ ಸಿಂಪಲ್‌ ಮೊಬೈಲ್‌ ಆ್ಯಪ್‌ ಮಾಡಬೇಕು. ಒಂದು ಬಟನ್‌ ಒತ್ತಿದ ಕೂಡಲೇ ಮೊಬೈಲ್‌ ಮಾತನಾಡಬೇಕು. ಇವರು ಮಾತನಾಡಿದ್ದನ್ನು ರಿಸಿವ್‌ ಮಾಡಬೇಕು. ಅಂಥ ಆ್ಯಪ್‌ ಕೂಡ ಡೆವಲಪ್‌ ಆಗುತ್ತಿದೆ. ಇದೆಲ್ಲ ಶಿಕ್ಷಣದಲ್ಲಿ ಆಗಬೇಕಿದೆ. ಪ್ರತಿ ಮೂರು ವರ್ಷಕ್ಕೆ ತಂತ್ರಜ್ಞಾನ ಬದಲಾಗುತ್ತಿದೆ. ಅದೇ ವೇಗಕ್ಕೆ ನಮ್ಮ ಶಿಕ್ಷಣವೂ ಬದಲಾಗಬೇಕು’ ಎಂದು ಹೇಳುವ ಮೂಲಕ ನೂತನ ಶಿಕ್ಷಣ ನೀತಿಯ ಪ್ರಯೋಜನದ ಮೇಲೆ ಬೆಳಕು ಚೆಲ್ಲಿದರು.

‘ಸಂಪನ್ಮೂಲದ ಕೊರತೆ ಇದೆ ಎಂದು ಹೇಳುತ್ತಾರೆ. ಆದರೆ ನಮ್ಮ ದೇಶದಲ್ಲಿ ಇದ್ದಷ್ಟು ಸಂಪನ್ಮೂಲ ಎಲ್ಲಿಯೂ ಇಲ್ಲ. ಆ ಸಂಪನ್ಮೂಲಗಳನ್ನು ಅತಿಹೆಚ್ಚು ಬಳಕೆ ಮಾಡುವುದನ್ನು ನಾವು ಕಲಿಯಬೇಕು. ಒಂದು ಕಾಲೇಜಲ್ಲಿ ಕೆಮೆಸ್ಟ್ರಿ, ಫಿಸಿಕ್ಸ್‌ ಲ್ಯಾಬ್‌ ಇದೆ. ಅದು ದಿನಕ್ಕೆ ಎರಡು ಗಂಟೆ ಅತಿ ಹೆಚ್ಚು ಅಂದರೆ ನಾಲ್ಕು ಗಂಟೆ ಬಳಕೆಯಾಗುತ್ತದೆ. 20 ಗಂಟೆ ಖಾಲಿ ಇರುತ್ತದೆ. ಖಾಲಿ ಇರುವ ಸಮಯ ಅದು ಬೇರೆ ಕಾಲೇಜು, ಬೇರೆ ವಿಶ್ವವಿದ್ಯಾಲಯಗಳಿಗೆ ಬಳಕೆಗೆ ಸಿಗುವಂತಾಗಬೇಕು. ಇದುವೇ ಸಂಪನ್ಮೂಲದ ಹಂಚಿಕೆ’ ಎಂದು ಪ್ರೊ. ಟಿ.ವಿ. ಕಟ್ಟೀಮನಿ ಅಭಿಪ್ರಾಯಪಟ್ಟರು.

‘ಬಹು ಪ್ರವೇಶ, ನಿರ್ಗಮನದಿಂದ ಬಹು ಅವಕಾಶ’

‘ಬಹು ಪ್ರವೇಶ ಮತ್ತು ನಿರ್ಗಮನ ಅಂದರೆ ಯಾವಾಗ ಬೇಕಾದರೂ ತರಗತಿಗೆ ಬರೋದು, ಯಾವಗಬೇಕಾದರೂ ಹೋಗೋದು ಎಂದರ್ಥವಲ್ಲ. ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸುವುದನ್ನು ಕಡಿಮೆ ಮಾಡಲು ದೊಡ್ಡ ಹೆಜ್ಜೆ ಇದು. ಯಾರೋ ಒಬ್ಬರು ಒಂದು ವರ್ಷ ಓದಿದರು. ಯಾವುದೋ ಸಂಕಷ್ಟ ಬಂದು ಮತ್ತೆ ಓದಲು ಆಗಲಿಲ್ಲ. ನಾಲ್ಕೈದು ವರ್ಷ ಕಳೆದಾಗ ಸಂಕಷ್ಟ ಮುಗಿದು ಮತ್ತೆ ಓದಬೇಕು ಅನಿಸಿದಾಗ ನಿಲ್ಲಿಸಿದಲ್ಲಿಂದಲೇ ಮುಂದುವರಿಸುವ ವ್ಯವಸ್ಥೆ ಇದು. ಆಟೊಮೊಬೈಲ್‌ ಕಲಿಯುತ್ತಿದ್ದವ ಅರ್ಧದಲ್ಲಿ ನಿಲ್ಲಿಸಿ ಆಟೊಮೊಬೈಲ್‌ ಸಂಸ್ಥೆಯಲ್ಲಿ ಕೆಲಸ ಮಾಡಿದರೆ ಅದನ್ನೂ ಕಲಿಕೆ ಎಂದೇ ಪರಿಗಣಿಸಲು ಅವಕಾಶ ಇರುತ್ತದೆ’ ಎಂದು ಪ್ರೊ. ಟಿ.ವಿ. ಕಟ್ಟೀಮನಿ ತಿಳಿಸಿದರು.

‘ಒಂದು ಕಾಲೇಜಿನಲ್ಲಿ ಆರ್ಟ್‌ ವಿಭಾಗ ಮಾತ್ರ ಇದೆ. ವಿದ್ಯಾರ್ಥಿಯು ಆರ್ಟ್‌ ಜತೆಗೆ ಒಂದು ಸಬ್ಜೆಕ್ಟ್‌ ಸೈನ್ಸ್‌ ತೆಗೆದುಕೊಂಡರೂ ಕಲಿಯಲು ಅವಕಾಶ ಇದೆ. ಆತ ಆರ್ಟ್‌ ಅನ್ನು ಅದೇ ಕಾಲೇಜಲ್ಲಿ ಕಲಿತರೆ ಸೈನ್ಸ್‌ ಅನ್ನು ಸೈನ್ಸ್‌ ಯಾವ ಕಾಲೇಜಿನಲ್ಲಿ ಇದೆಯೋ ಅಲ್ಲಿಂದ ಆನ್‌ಲೈನ್‌ ಮೂಲಕ ಕಲಿಯುತ್ತಾನೆ’ ಎಂದು ಉದಾಹರಿಸಿದರು.

‘ಪ್ರಜಾವಾಣಿಯ ಮುತುವರ್ಜಿ’

‘ಹೊಸ ಶಿಕ್ಷಣ ನೀತಿ ಬಗ್ಗೆ ನಾನು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದೆ. ಆಗ ಅದರ ಆಧಾರದ ಮೇಲೆ ಶಿಕ್ಷಕರೇ ಎಲ್ಲ ಅನಾಹುತಗಳಿಗೆ ಕಾರಣ ಎಂದು ಯಾರೋ ಬರೆದುಬಿಟ್ಟಿದ್ದರು. ‘ಪ್ರಜಾವಾಣಿ’ ಈ ಬಗ್ಗೆ ಮುತುವರ್ಜಿ ವಹಿಸಿತು. ಇವರು ಹೇಳಿದ್ದು ಸರಿಯೋ ತಪ್ಪೋ ಎಂದು ಚರ್ಚೆ ಮಾಡಲು ವೇದಿಕೆ ಕಲ್ಪಿಸಿತು. ಇದರಿಂದ ಮೂರು ತಿಂಗಳುಗಳ ಕಾಲ ಬೇರೆ ಬೇರೆ ಪತ್ರಿಕೆಗಳಲ್ಲಿ ಚರ್ಚೆಗಳಾದವು. ಕಮ್ಯುನಿಸ್ಟರು, ಬಿಜೆಪಿಗರು, ಕಾಂಗ್ರೆಸಿಗರು ನಡೆಸುವ ಸಂಸ್ಥೆಗಳಲ್ಲಿಯೂ ಸೆಮಿನಾರ್‌ಗಳು ನಡೆದವು ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT