ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಡಾಂಗೆಪಾರ್ಕ್‌ ಬಳಿಯ ನಿಟುವಳ್ಳಿ ರಸ್ತೆ ಬದಿಯಲ್ಲಿ ಹಣ್ಣಿನ ರಾಶಿ

ಬಾಯಾರಿಕೆ ತಣಿಸುವ ತಾಳೆಹಣ್ಣು

Published:
Updated:
Prajavani

ದಾವಣಗೆರೆ: ಬೇಸಿಗೆಯಲ್ಲಿ ದಾಹ ತಣಿಸಲು ಜನ ಎಳನೀರು, ಕಬ್ಬಿನ ಹಾಲು, ವಿವಿಧ ಹಣ್ಣುಗಳ ಜ್ಯೂಸ್‌ಗಳ ಮೊರೆ ಹೋಗುವುದು ಸಾಮಾನ್ಯ. ನಗರದಲ್ಲಿ ಮೂರ್ನಾಲ್ಕು ದಿನಗಳಿಂದ ತಮಿಳುನಾಡಿನಿಂದ ಬಂದ ತಾಳೆಹಣ್ಣೂ ಇವುಗಳ ಸಾಲಿಗೆ ಸೇರ್ಪಡೆಗೊಂಡಿದೆ.

ಡಾಂಗೆಪಾರ್ಕ್‌ ಬಳಿ ನಿಟುವಳ್ಳಿ ರಸ್ತೆ ಬದಿಯಲ್ಲಿ ಲಾರಿಯಲ್ಲಿ ತಂದು ರಾಶಿ ಹಾಕಿಡಲಾಗಿದೆ. ತಮಿಳುನಾಡಿನಿಂದ ಬಂದ 8 ಮಂದಿಯ ತಂಡ ತಾಳೆಹಣ್ಣು ಮಾರಾಟ ಮಾಡಲು ನಿಂತಿದೆ. ಅತ್ತಿತ್ತ ಹೋಗುವವರು ಈ ಹಣ್ಣು ಕಂಡು ಆಕರ್ಷಿತರಾಗಿ ಖರೀದಿಸಿ ತಿಂದು ಮನೆಗೂ ತೆಗೆದುಕೊಂಡು ಹೋಗುತ್ತಿದ್ದಾರೆ. ಕೆಲವು ತಳ್ಳುವ ಗಾಡಿಯ ವ್ಯಾಪಾರಿಗಳು ಅವರಿಂದ ತಾಳೆಹಣ್ಣು ಖರೀದಿಸಿ ಜನವಸತಿ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದಾರೆ. ಆದರೆ ಇವರ ಸಂಖ್ಯೆ ಬಹಳ ಕಡಿಮೆ.

‘ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಂಬೂರು ತಾಲ್ಲೂಕು ಮೇಲು ಮಿಟ್ಟಾಲಂನಿಂದ 4 ಟನ್‌ ತಾಟಿನುಂಗು (ತಾಳೆಹಣ್ಣು) ತಂದಿದ್ದೇನೆ. ನನ್ನ ಜತೆಗೆ ಸುಕುಮಾರ್‌, ಶ್ರೀನಾಥ್‌, ವಲ್ಲರಸು, ಬೋಸು, ಪ್ರವೀಣ್‌ ಹಾಗೂ ಮತ್ತಿಬ್ಬರು ಜತೆ ಬಂದಿದ್ದಾರೆ. ಒಂದು ವಾರದಲ್ಲಿ ಇದು ಖಾಲಿಯಾಗಲಿದೆ. ಮತ್ತೆ ತರುವಷ್ಟು ತಾಟಿನುಂಗು ಸಿಕ್ಕಿದರೆ ತರುತ್ತೇನೆ. ಇಲ್ಲದಿದ್ದರೆ ಮುಂದಿನ ವರ್ಷ ಬರುತ್ತೇನೆ’ ಎನ್ನುತ್ತಾರೆ ವೆಲ್ಲೂರಿನ ಪಿಚ್ಚಂಡಿ.

‘ಮೂರು ಕಣ್ಣು ಇರುವ ಒಂದು ತಾಳೆಹಣ್ಣನ್ನು ₹ 30ಕ್ಕೆ ಮಾರಾಟ ಮಾಡುತ್ತಿದ್ದೇವೆ. ಗ್ರಾಹಕರು ತೀರ ಚೌಕಾಸಿಗೆ ಇಳಿದರೆ ₹ 25ಕ್ಕೂ ಕೊಡಬೇಕಾಗುತ್ತದೆ. ದಿನಕ್ಕೆ ₹ 4 ಸಾವಿರದಷ್ಟು ವ್ಯಾಪಾರ ಆಗುತ್ತಿದೆ’ ಎನ್ನುತ್ತಾರೆ ಅವರು.

‘ತಾಳೆಹಣ್ಣಿನ ರುಚಿಯೇ ಬೇರೆ. ಅಲ್ಲದೇ ಈ ಹಣ್ಣು ಬೇರೆ ಸಮಯದಲ್ಲಿ ಖರೀದಿಸಲು ಸಿಗುವುದಿಲ್ಲ. ಅದಕ್ಕಾಗಿ ತೆಗೆದುಕೊಳ್ಳುತ್ತಿದ್ದೇವೆ’ ಎಂದು ರಂಗನಾಥ್‌, ಕಿಶನ್‌ ಅವರು ತಾಳೆಹಣ್ಣು ಕೆತ್ತಿಸಿ ಮಂಜುಗಡ್ಡೆಯಂಥ ಹಣ್ಣನನ್ನು ಕೊಂಡುಹೋದರು.

ನಮ್ಮಲ್ಲೂ ಇದೆ: ‘ನಮ್ಮಲ್ಲೂ ಹಳ್ಳಿಗಳಲ್ಲಿ ತಾಳೆಹಣ್ಣು ಇದೆ. ಹಳ್ಳಿಯ ಜನ ಅದನ್ನು ಅಲ್ಲಲ್ಲೇ ಮಾರಾಟ ಮಾಡುತ್ತಾರೆ. ನಗರಕ್ಕೆ ತಂದು ಮಾರುವಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲ’ ಎನ್ನುತ್ತಾರೆ ಕೆಟಿಜೆ ನಗರದ ಜೋಸೆಫ್‌.

ಕರಾವಳಿ, ಮಲೆನಾಡು ಮತ್ತು ಆಂಧ್ರಪ್ರದೇಶದ ಕೆಲವು ಪ್ರದೇಶಗಳಲ್ಲಿ ತೆಂಗಿನ ಮರದಿಂದ ನೀರಾ ಇಳಿಸಿದ ಹಾಗೆ ತಾಳೆ ಮರಗಳಿಂದಲೂ ಇಳಿಸುತ್ತಾರೆ ಎನ್ನುತ್ತಾರೆ ಅವರು.

ಆರೋಗ್ಯಕ್ಕೆ ಒಳ್ಳೆಯದು: ದೇಹ ನಿರ್ಜಲೀಕರಣಗೊಂಡು ಅಸ್ವಸ್ಥರಾಗುವವರಿಗೆ ಈ ಹಣ್ಣು ತುಂಬಾ ಉಪಯೋಗಿ. ವಾಂತಿ ಶಮನಗೊಳಿಸುತ್ತದೆ. ಬಿಸಿಲಿನಿಂದ ತಲೆಸುತ್ತುವುದು, ಜೀರ್ಣಕ್ರಿಯೆ ಸಮಸ್ಯೆಗಳಿಗೂ ಈ ಹಣ್ಣು ಸೇವಿಸಿ ಪರಿಹಾರ ಕಂಡುಕೊಳ್ಳಬಹುದು’ ಎಂದು ಪಿಚ್ಚಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)