ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಶಾಖಾ ಮಠಕ್ಕೆ ಚಿಂತನೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ ಸುಳಿವು

Last Updated 1 ಅಕ್ಟೋಬರ್ 2021, 5:14 IST
ಅಕ್ಷರ ಗಾತ್ರ

ದಾವಣಗೆರೆ: ‘ನಾನು ದಾವಣಗೆರೆಯವನು. ಇಲ್ಲಿಂದ ಹಿಂದೆ ಕೂಡಲಸಂಗಮಕ್ಕೆ ತೆರಳುವ ಸಂದರ್ಭದಲ್ಲಿ ಚಿಂದೋಡಿ ಲೀಲಾ ಅವರು 1 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಇಲ್ಲಿಯೇ ಉಳಿಯಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆದರೆ ಕೂಡಲಸಂಗಮದಲ್ಲಿ ಮಠ ಕಟ್ಟಿದ ಮೇಲೆಯೇ ಇಲ್ಲಿ ಬರಬೇಕು ಎಂದು ತೀರ್ಮಾನಿಸಿದ್ದೆ. ಮುಂದೆ ಶಾಖಾ ಮಠದಂಥ ಸತ್ಕಾರ್ಯಗಳಿಗೆ ಈ ಜಮೀನನ್ನು ಬಳಸಿಕೊಳ್ಳಲಾಗುವುದು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ತ್ರಿಶೂಲ್‌ ಕಲಾ ಭವನದಲ್ಲಿ ಗುರುವಾರ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನದ ಕೊನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಹಣ ಗಳಿಸಿಲ್ಲ. ಆಸ್ತಿ ಗಳಿಸಿಲ್ಲ. ಆದರೆ ಜನರ ಪ್ರೀತಿ ಗಳಿಸಿದ್ದೇನೆ. ಪೀಠಾಧ್ಯಕ್ಷನಾದ ಬಳಿಕ ತುಳಿಯುವ ಕಾರ್ಯ ನಿರಂತರ ನಡೆಯಿತು. ಅಂಥ ಕೆಲಸಗಳು ಆದಾಗೆಲ್ಲ ಜನರ ಪ್ರೀತಿ ಹೆಚ್ಚಾಗಿದೆ. ಜನರ ಅಭಿಮಾನದಿಂದಾಗಿ ಅಂಥವರ ದುರಭಿಮಾನಗಳು ಅಡಗಿ, ಜನರಲ್ಲಿ ಸ್ವಾಭಿಮಾನ ಉಂಟಾಗಿದೆ’ ಎಂದು ಮಾರ್ಮಿಕವಾಗಿ ತಿಳಿಸಿದರು.

‘2016ರಲ್ಲಿ ದಾವಣಗೆರೆಯ ರೇಣುಕ ಮಂದಿರದಲ್ಲಿ ನಡೆದ ಮಹಾಂತ ಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ನನ್ನನ್ನು ಅವಮಾನಿಸಿ ಕಳುಹಿಸಿದರು. ಪಂಚಮಸಾಲಿಗಳು ಮಾತ್ರ ನನ್ನನ್ನು ಬೆಳೆಸಿದ್ದಲ್ಲ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಎಲ್ಲರೂ ನನ್ನನ್ನು ಬೆಳೆಸಿದ್ದಾರೆ. ಅವರೆಲ್ಲರಿಗೂ ಅಪಮಾನವಾಗಿದೆ ಎಂದು ಅಂದು ಹೇಳಿದ್ದೆ. ಇಂದು ಅದೇ ರೇಣುಕ ಮಂದಿರದಿಂದ ಸಾವಿರಾರು ಮಂದಿಯ ಸಮಕ್ಷಮದಲ್ಲಿ ಮಹಾಂತ ಸ್ವಾಮಿಗಳ ಸ್ಮರಣೋತ್ಸವ ಮೆರವಣಿಗೆ ನಡೆಯಿತು. ಅಂದಿನ ಅವಮಾನಕ್ಕೆ ಕಾಲವೇ ಉತ್ತರಿಸಿದೆ’ ಎಂದು ಹೇಳಿದರು.

‘ಈ ಭಾಗದ ದೊಡ್ಡ ಸ್ವಾಮೀಜಿಯೊಬ್ಬರು ನಾನು ಎಲ್ಲಿ ಬೆಳೆದು ಬಿಡುತ್ತೇನೋ ಎಂದು ತುಳಿಯಲು ಪ್ರಯತ್ನಿಸಿದರು. ನನ್ನನ್ನು ಹಳಿಯಲು ಇನ್ನೊಂದು ಪೀಠ ಕಟ್ಟಲಾಯಿತು. ಈಗ ಮತ್ತೊಂದು ಪೀಠ ಕಟ್ಟುವ ಮಾತುಗಳು ಬರುತ್ತಿವೆ. ಮತ್ತೆ ನೂರು ಪೀಠ ಕಟ್ಟಬಹುದು. ಆದರೆ ನಾನು ಜನರ ಜತೆಗೆ ಇರುತ್ತೇನೆ. ಕಲ್ಲು, ಸಿಮೆಂಟುಗಳಿಂದ ಪೀಠ ಕಟ್ಟುವುದಕ್ಕಿಂತ ಜನರ ಬಳಿ ಹೋಗಿ ಅವರ ಸಂಕಷ್ಟಕ್ಕೆ ನೆರವಾಗಿ ಅವರ ಪ್ರೀತಿಯ ಭಾವನೆಯಿಂದ ಪೀಠ ಕಟ್ಟುತ್ತೇನೆ’ ಎಂದರು.

‘2ಎ ಮೀಸಲಾತಿಗಾಗಿ ಹೋರಾಟಕ್ಕೆ ಇಳಿದಾಗ ಆಮಿಷಗಳು ಬಂದವು. ಒತ್ತಡಗಳು ಬಂದವು. ಬೇರೆ ಕೆಲವು ಸ್ವಾಮೀಜಿಗಳ ರೀತಿಯಲ್ಲಿ ನಾನು ಓಡಿ ಹೋಗಿದ್ದರೆ ಜನರು ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸುತ್ತಿರಲಿಲ್ಲ’ ಎಂದು ವಿವರಿಸಿದರು.

‘ಪಂಚಮಸಾಲಿಗಳು 80 ಲಕ್ಷ ಇರುವುದಲ್ಲ. ಗೌಡ ಲಿಂಗಾಯತ, ಮಲೇಗೌಡ, ದೀಕ್ಷಾ ಲಿಂಗಾಯತರೂ ನಮ್ಮದೇ ಸಮಾಜ. ಎಲ್ಲ ಸೇರಿ 1.30 ಕೋಟಿ ಜನ ಇದ್ದಾರೆ. ನಮ್ಮ ಸಮಾಜದವರನ್ನು ಮುಖ್ಯಮಂತ್ರಿ ಮಾಡಲು ನಮ್ಮ ಪೀಠ ಇರುವುದಲ್ಲ. ನಮ್ಮ ಸಮಾಜಕ್ಕೆ 2ಎ ಸಿಗಬೇಕು. ಎಲ್ಲ ಲಿಂಗಾಯತ ಸಮಾಜಗಳು ಒಬಿಸಿ ಪಟ್ಟಿಯಲ್ಲಿ ಬರಬೇಕು. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಈ ಮೂರು ಗುರಿಗಳನ್ನು ಸಾಧಿಸುವುದಕ್ಕಾಗಿಯೇ ನಮ್ಮ ಪೀಠ ಪ್ರತಿಜ್ಞೆ ಮಾಡುತ್ತದೆ’ ಎಂದು ಹೇಳಿದರು.

ನಂದಿಗುಡಿ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ಲಿಂಗಾತಯ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಅರವಿಂದ ಬೆಲ್ಲದ, ಮುಖಂಡರಾದ ಕೊನ್ನೂರು ಮಂಜುನಾಥ, ಸೋಮಣ್ಣ ಬೇವಿನಮಠದ, ನಂದಿಹಳ್ಳಿ ಹಾಲಪ್ಪ, ಮೈಸೂರು ಮಲ್ಲೇಶ್‌, ಪುಟ್ಟಸ್ವಾಮಿ, ವೀಣಾ ಕಾಶಪ್ಪನವರ, ನಾಗರಾಲು ಹುಲಿ, ರುದ್ರೇಗೌಡ, ಕೇಬಲ್‌ ಮಹೇಶ, ಭಾರತಿ ಜಂಬಗಿ, ಚಂದ್ರಶೇಖರ, ಚಿದಾನಂದಪ್ಪ, ಎಂ.ಟಿ. ಶುಭಾಶ್ಚಂದ್ರ, ಭರಮಸಾಗರ ತಿಪ್ಪೇಸ್ವಾಮಿ, ದರಿಯಪ್ಪ ಟಕ್ಕಣ್ಣವರ, ಹುಚ್ಚಪ್ಪ ಮಾಸ್ತರ್‌, ಬಕ್ಕೇಶ್‌ ಅವರೂ ಇದ್ದರು.

ಇಲ್ಲೇ ಕಾರ್ಯಕ್ಷೇತ್ರ ಮಾಡಿ: ಎಚ್‌ಎಸ್‌ಎಸ್‌

‘ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಲ್ಲಿ ಧರ್ಮ ಕೇಂದ್ರವನ್ನು ಮಾಡಿದ್ದೀರಿ. ಇಲ್ಲಿ ದಾವಣಗೆರೆಯಲ್ಲಿ ಕಾರ್ಯಕ್ಷೇತ್ರವನ್ನು ಸ್ಥಾಪಿಸಬೇಕು’ ಎಂದು ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘ಸ್ವಾಮೀಜಿ ಅವರ ಮಲಗುವ ಕೊಠಡಿವರೆಗೆ ಎಲ್ಲ ಭಕ್ತರಿಗೆ ಹೋಗಲು ಅವಕಾಶ ಇದೆ. ಆದರೆ ಕೆಲವು ಸ್ವಾಮೀಜಿಗಳ ಕೊಠಡಿಗೆ ಸೆನ್ಸಾರ್‌ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ’ ಎಂದು ಕುಟುಕಿದರು.

ಸ್ವಾಮಿಗಳಾದವರು ಭೋಗಿ ಆಗಬಾರದು, ತ್ಯಾಗಿ ಆಗಬೇಕು. ಅದರಂತೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಜೋಳಿಗೆ ಹಿಡಿದು ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರು ಈ ಶತಮಾನ ಕಂಡ ಶ್ರೇಷ್ಠ ಕಾವಿಧಾರಿ ಹೋರಾಟಗಾರ. ಪವಾಡ ಪುರುಷ ಎಂದು ಬಣ್ಣಿಸಿದರು.

‘ನಮ್ಮ ಸ್ವಾಮೀಜಿ ತಂತ್ರ–ಮಂತ್ರ ಮಾಡಲಿಲ್ಲ. ಬುರುಡೆ ತಂದು ಬೂದಿ ಬಿಚ್ಚಲಿಲ್ಲ. ಬಟ್ಟೆ ಬಿಚ್ಚಿಕೊಂಡು ಹ್ಯಾಪಿ ಹೋಳಿ ಎಂದಿಲ್ಲ. ಬೆಣ್ಣೆ ತಿನ್ನಲಿಲ್ಲ. ಕಾಲುಗಳ್ಲಿ ಬೊಬ್ಬೆ ಎಬ್ಬಿಸಿಕೊಳ್ಳಲಿಲ್ಲ. ಅರಿಷಡ್ವರ್ಗ ತ್ಯಜಿಸಿ, ಸಂಸ್ಕಾರ ನೀಡುತ್ತಾ ಹೋರಾಡುತ್ತಿದ್ದಾರೆ. ಧರ್ಮ ಸಂಸ್ಕಾರ, ಸಮಾಜದ ಒಳಿತು ಮಾಡುತ್ತಿರುವ ಸ್ವಾಮೀಜಿ ಜತೆ ನಾವು ಎಂದಿಗೂ ಇದ್ದೇವೆ’ ಎಂದರು.

ಅಜಯ್ ಕುಮಾರ್‌ ಪದಗ್ರಹಣ

ಅಖಿಲ ಭಾರತ ಲಿಂಗಾತಯ ಪಂಚಮಸಾಲಿ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷರ ಪದಗ್ರಹಣದ ಕಾರ್ಯಕ್ರಮ ನಡೆಯಿತು.

ಮಾಜಿ ಮೇಯರ್‌ ಬಿ.ಜಿ. ಅಜಯ್‌ ಕುಮಾರ್‌ ಅವರಿಗೆ ಪಂಚಲಾಂಛನಗಳನ್ನು ನೀಡುವ ಮೂಲಕ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪದಗ್ರಹಣ ನೆರವೇರಿಸಿದರು.

ಭವ್ಯ ಮೆರವಣಿಗೆ

ಮಹಾಂತ ಸ್ವಾಮೀಜಿ ಅವರ ಸ್ಮರಣೋತ್ಸವ ಮತ್ತು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಸ್ವಾಗತ ಕಾರ್ಯಕ್ರಮ ಭವ್ಯ ಮೆರವಣಿಗೆಯೊಂದಿಗೆ ನಡೆಯಿತು.

ರೇಣುಕಾಮಂದಿರದಿಂದ ತ್ರಿಶೂಲ್‌ ಕಲಾ ಭವನದವರೆಗೆ ಮೂರು ಆನೆಗಳ ಮೇಲೆ ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಮಹಾಂತ ಸ್ವಾಮೀಜಿ ಅವರ ಫೋಟೊಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ಕುದುರೆಗಳು ಸಾಥ್‌ ನೀಡಿದವು. ನಂದಿಕೋಲು, ಫೂರ್ಣಕುಂಭ, ಗೊಂಬೆ ಕುಣಿತ, ಕೀಲು ಕುದುರೆ, ವಿವಿಧ ವಾದ್ಯಗಳು, ನಾಸಿಕ್‌ ಬ್ಯಾಂಡ್‌, ತಮಟೆ ವಿವಿಧ ಜನಪದ ವಾದನಗಳು ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT