ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮೂವರಿಂದ ಮೂವತ್ತಾದ ಕೊರೊನಾ ಸೋಂಕು

ಇನ್ನೂ ಸಿಗದ ಇಬ್ಬರ ಟ್ರಾವೆಲ್‌ ಹಿಸ್ಟರಿ * ಸೋಂಕಿತರು ವಿದೇಶದಿಂದ ಬಂದವರೂ ಅಲ್ಲ
Last Updated 5 ಮೇ 2020, 9:52 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮೂವರನ್ನು ಕೋವಿಡ್‌–19 ಪ್ರಕರಣ ಮೊದಲು ಪತ್ತೆಯಾದವರು ಎಂದು ಗುರುತಿಸಲಾಗಿದೆ. ಈ ಮೂವರಲ್ಲಿ ಇಬ್ಬರಿಂದಲೇ ಮತ್ತೆ 27 ಮಂದಿಗೆ ಹರಿಡಿದೆ. ಆದರೆ ಆ ಇಬ್ಬರು ಜಿಲ್ಲೆ ಬಿಟ್ಟು ಹೊರಗೆ ಹೋಗಿಲ್ಲ ಎಂದು ಜಿಲ್ಲಾಡಳಿತ ಪ್ರಾಥಮಿಕ ಮಾಹಿತಿ ನೀಡಿದೆ. ಹಾಗಾದರೆ ಆ ಇಬ್ಬರಿಗೆ ಎಲ್ಲಿಂದ ಬಂತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬಾಷಾನಗರದ ಸ್ಟಾಫ್‌ ನರ್ಸ್‌ (ಪಿ.533), ಜಾಲಿನಗರದ ವೃದ್ಧ (ಪಿ.556) ಮತ್ತು ಬೇತೂರಿನ ವ್ಯಕ್ತಿ (ಪಿ.623) ಪ್ರತ್ಯೇಕ ಸೋಂಕಿತರಾಗಿದ್ದಾರೆ. ಬೇತೂರಿನ ವ್ಯಕ್ತಿ ಈರುಳ್ಳಿ ಸಾಗಾಟದ ಲಾರಿಯಲ್ಲಿ ಹೊರ ಜಿಲ್ಲೆಗೆ ಹೋಗಿ ಬಂದಿದ್ದಾರೆ. ಅವರ ಪ್ರಥಮ ಸಂಪರ್ಕದಲ್ಲಿದ್ದವರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಫಲಿತಾಂಶ ಇನ್ನಷ್ಟೇ ಬರಬೇಕು.

‘ಸ್ಟಾಫ್‌ ನರ್ಸ್‌ ಅವರ ಮಗ ಬೇರೆ ಜಿಲ್ಲೆಗೆ ಹೋಗಿ ಬಂದಿದ್ದಾರೆ. ಅದರ ಪರಿಶೀಲನೆಯಾಗಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮೊದಲು ತಿಳಿಸಿದ್ದರೂ ಬಳಿಕ ಖಚಿತ ಪಡಿಸಿಲ್ಲ. ನರ್ಸ್‌ ಅವರಲ್ಲಿ ಸೋಂಕು ಪತ್ತೆಯಾಗುವುದಕ್ಕಿಂತ ತಿಂಗಳ ಹಿಂದೆ ಹೋಗಿರುವುದು ಎಂಬ ವದಂತಿ ಹರಡಿದೆ. ಹಾಗಾಗಿ ಪಿ.533 ಅವರಿಗೆ ಎಲ್ಲಿಂದ ಬಂತು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಪಿ.556 ಅವರ ಸೊಸೆ ಬೇರೆ ರಾಜ್ಯದಿಂದ ಬಂದಿದ್ದಾರೆ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು’ ಎಂದಿದ್ದರೂ ಅದೂ ಸ್ಪಷ್ಟವಾಗಿಲ್ಲ. ಕೊರೊನಾ ಸೋಂಕು ಪತ್ತೆಯಾಗಿರುವವರಲ್ಲಿ ಮೂವರು ಸೊಸೆಯಂದಿರಿದ್ದಾರೆ. ಅದರಲ್ಲಿ ಯಾವ ಸೊಸೆ? ಯಾವಾಗ ಬಂದರು? ಎಂಬ ಮಾಹಿತಿ ಇಲ್ಲ.

ಈ ಎರಡು ಟ್ರಾವೆಲ್‌ ಹಿಸ್ಟರಿ ಸಿಗದೇ ಇರುವುದು ಗೊಂದಲವನ್ನು ಸೃಷ್ಟಿಸಿದೆ. ಈ ಎಲ್ಲ ಗೊಂದಲಗಳಿಗೆ ಉತ್ತರಿಸಲು ಜಿಲ್ಲಾಧಿಕಾರಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT