ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸ್ಮಾರ್ಟ್‌ ಬಸ್‌ನಿಲ್ದಾಣದಲ್ಲಿ ಶೌಚಾಲಯಕ್ಕೆ ಬೀಗ

ಜಗಳೂರು, ಹರಪನಹಳ್ಳಿಗೆ ಹೋಗುವ ಖಾಸಗಿ ಬಸ್‌ನಿಲ್ದಾಣದಲ್ಲಿ ಪರದಾಟ
Last Updated 14 ನವೆಂಬರ್ 2022, 4:16 IST
ಅಕ್ಷರ ಗಾತ್ರ

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ಹಳೇ ದಾವಣಗೆರೆಯಲ್ಲಿ ಜಗಳೂರು, ಹರಪನಹಳ್ಳಿ ಕಡೆಗೆ ಹೋಗುವ ಬಸ್‌ಗಳಿಗೆ ಸ್ಮಾರ್ಟ್‌ ಆದ ಬಸ್‌ ನಿಲ್ದಾಣ ನಿರ್ಮಾಣಗೊಂಡಿದೆ. ಉದ್ಘಾಟನೆಯಾಗಿ 5 ತಿಂಗಳು ಕಳೆದರೂ ಶೌಚಾಲಯ ಮಾತ್ರ ತೆರೆದಿಲ್ಲ. ಶೌಚಾಲಯ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ.

ಈ ಬಸ್‌ ನಿಲ್ದಾಣವನ್ನು ₹ 3.20 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಕಳೆದ ಜೂನ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಉದ್ಘಾಟಿಸಿದ್ದು, ಬಸ್‌ ಸಂಚಾರ ಆರಂಭಗೊಂಡಿತು. ಆದರೆ, ಶೌಚಾಲಯದ ಬೀಗ ಮಾತ್ರ ತೆರೆದಿರಲಿಲ್ಲ. ಈ ಬಗ್ಗೆ ಸಾರ್ವಜನಿಕರು ಮಹಾನಗರ ಪಾಲಿಕೆಯ ಗಮನಕ್ಕೆ ತಂದ ಬಳಿಕ ಶೌಚಾಲಯ ತೆರೆಯಲಾಗಿತ್ತು. ಒಂದೇ ವಾರದಲ್ಲಿ ಮತ್ತೆ ಬೀಗ ಬಿದ್ದಿದ್ದು, ಇಲ್ಲಿವರೆಗೆ ತೆರೆದಿಲ್ಲ.

‘ಬಸ್‌ ನಿಲ್ದಾಣಕ್ಕೆ ಬರುವ ಮಹಿಳೆಯರು, ಮಕ್ಕಳು, ವೃದ್ಧರು ನಿಸರ್ಗದ ಕರೆಗೆ ಎಲ್ಲಿ ಹೋಗುವುದು ಎಂದು ಗೊತ್ತಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಹೆಣ್ಣುಮಕ್ಕಳು ನಮ್ಮ ಸ್ಟುಡಿಯೊ ಇರುವ ಕಟ್ಟಡಕ್ಕೆ ಬರುತ್ತಾರೆ. ಆದರೆ, ಕೇಳಲು ಸಂಕೋಚ ಪಡುತ್ತಾರೆ. ಇತ್ತೀಚೆಗೆ ಗರ್ಭಿಣಿಯೊಬ್ಬರು ಶೌಚಾಲಯ ಇಲ್ಲದೇ ಬಹಳ ತೊಂದರೆ ಅನುಭವಿಸಿದ್ದರು’ ಎಂದು ಕರ್ನಾಟಕ ಸ್ಟುಡಿಯೊ ಮಾಲೀಕ ತಿಪ್ಪೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಸ್‌ನಿಲ್ದಾಣ ಉದ್ಘಾಟನೆ ಗೊಂಡ ಒಂದು ತಿಂಗಳ ಬಳಿಕ ಸ್ವಲ್ಪ ದಿನ ತೆರೆದಿತ್ತು. ಟೆಂಡರ್‌ ಆಗದೇ ಹೇಗೆ ತೆರೆದಿದ್ದೀರಿ ಎಂದು ಶೌಚಾಲಯ ನೋಡಿಕೊಳ್ಳುತ್ತಿದ್ದವರಿಗೆ ಯಾರೋ ಬಂದು ದಬಾಯಿಸಿದ ಬಳಿಕ ಅವರು ಬೀಗ ಹಾಕಿ ಹೋದರು’ ಎಂದು ಅವರು ವಿವರಿಸಿದರು.

ನಿತ್ಯ ನೂರಾರು ಬಸ್‌ಗಳು ಬಂದು ಹೋಗುವ, ಸಾವಿರಾರು ಮಂದಿ ಓಡಾಡುವ ಈ ಬಸ್‌ ನಿಲ್ದಾಣದಲ್ಲಿ ಶೌಚಾಲಯಕ್ಕೆ ಬೀಗ ಹಾಕಿರುವುದು ಮಹಾನಗರ ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ವಹಿಸಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿ. ಅಲ್ಲದೇ ಬಸ್‌ ನಿಲ್ದಾಣದಲ್ಲಿ ನಿರ್ಮಿಸಿರುವ ಮಹಿಳೆಯರ ವಿಶ್ರಾಂತಿ ಕೊಠಡಿಯ ಬಾಗಿಲನ್ನೂ ತೆರೆದಿಲ್ಲ. ಮಹಿಳೆಯರು ಹೊರಗೇ ಕೂರುತ್ತಿದ್ದಾರೆ. ಶೌಚಾಲಯ ತೆರೆಯಲು ಟೆಂಡರ್‌ ನೆಪವಾದರೂ ಇದೆ. ವಿಶ್ರಾಂತಿ ಕೊಠಡಿ ತೆರೆಯಲು ಯಾವ ಟೆಂಡರ್‌ ಬೇಕಾಗಿಲ್ಲ. ಆದರೆ ತೆರೆಯುವ ಇಚ್ಛೆಯೇ ಇದ್ದಂತಿಲ್ಲ. ಶೌಚಾಲಯವನ್ನು ಮತ್ತು ಮಹಿಳಾ ವಿಶ್ರಾಂತಿ ಕೊಠಡಿಯ ಬೀಗ ತೆಗೆದು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಆಗ್ರಹಿಸಿದರು.

ಸಾರ್ವಜನಿಕರ ಉಪಯೋಗಕ್ಕೆ ಇರುವ ಶೌಚಾಲಯವೂ ತೆರೆದಿಲ್ಲ. ಸರ್ಕಾರಕ್ಕೆ ಆದಾಯ ತರುವ ಮಳಿಗೆಗಳ ಹರಾಜು ಕೂಡ ನಡೆದಿಲ್ಲ. ನಗರವು ಹೆಸರಿಗಷ್ಟೇ ಸ್ಮಾರ್ಟ್‌ಸಿಟಿಯಾಗಿದೆ. ಜನರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಎಲ್‌. ಹರೀಶ್‌ ಬಸಾಪುರ ತಿಳಿಸಿದರು.

ಅಧಿಕಾರಿಗಳು ಏನಂತಾರೆ...

ಸ್ಮಾರ್ಟ್‌ಸಿಟಿ ಯೋಜನೆ ಅಡಿ ಬಸ್‌ನಿಲ್ದಾಣ ನಿರ್ಮಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ನಿರ್ವಹಣೆಯನ್ನು ಪಾಲಿಕೆಯವರು ಮಾಡಬೇಕು.

-ರವೀಂದ್ರ ಮಲ್ಲಾಪುರ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ

ಶೌಚಾಲಯ ಟೆಂಡರ್‌ ಹಂತದಲ್ಲಿದೆ. ಹಿಂದೆಯೇ ಶೌಚಾಲಯದ ಬೀಗ ತೆರೆದು ಸಾರ್ವಜನಿಕರ ಬಳಕೆಗೆ ನೀಡಲಾಗಿತ್ತು. ಮತ್ತೆ ಬೀಗ ಹಾಕಿದ್ದರೆಕೂಡಲೇ ತೆರೆಸಲಾಗುವುದು.

-ವಿಶ್ವನಾಥ ಪಿ. ಮುದಜ್ಜಿ, ಪಾಲಿಕೆ ಆಯುಕ್ತ

ಪೌರಕಾರ್ಮಿಕರನ್ನು ಕಳುಹಿಸಿ ನಾಳೆಯೆ ಶೌಚಾಲಯದ ಬೀಗ ತೆರೆಸುತ್ತೇವೆ. ಶೌಚಾಲಯದ ಟೆಂಡರ್‌ ಕರೆಯಲು ಎಂಜಿನಿಯರ್‌ ವಿಭಾಗಕ್ಕೆ ಕಡತ ಹೋಗಿದೆ.

ಲಕ್ಷ್ಮೀ ಎಸ್‌., ಪಾಲಿಕೆ ಉಪ ಆಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT