ಭಾನುವಾರ, ಫೆಬ್ರವರಿ 28, 2021
20 °C
ರೈತ ಸಂಘಟನೆ, ಸಿಪಿಐ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ

ಮೂರು ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್ ಪೆರೇಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳಿಂದ ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ಪೆರೇಡ್ ನಡೆಯಿತು. ಸಿಪಿಐ, ನೆರಳು ಬೀಡಿ ಕಾರ್ಮಿಕರ ಯೂನಿಯನ್, ಡಿಎಸ್ಎಸ್–4, ಜಿಲ್ಲಾ ಕಿಸಾನ್ ಕಾಂಗ್ರೆಸ್, ಎಐಕೆಎಸ್ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.

ದೆಹಲಿ ಹಾಗೂ  ಬೆಂಗಳೂರುನಲ್ಲಿ ನಡೆಸುತ್ತಿರುವ ಜನಗಣರಾಜ್ಯೋತ್ಸವ ಟ್ರಾಕ್ಟರ್ ಪೆರೇಡ್‌ಗೆ ದಾವಣಗೆರೆ ಅನ್ನದಾತರು ಬೆಂಬಲ ವ್ಯಕ್ತಪಡಿಸಿದರು.

ಹುಚ್ಚವನಹಳ್ಳಿ ಮಂಜುನಾಥ್ ಬಣದ ಮುಖಂಡರು 25ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ನಗರದ ವಿವಿಧೆಡೆ ಪೆರೇಡ್ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಿಂದ ಆರಂಭಿಸಿದ ರೈತರು ಜಯದೇವ ವೃತ್ತಕ್ಕೆ ಬಂದು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಕೃಷಿ ಬೆಂಬಲ ಬೆಲೆ ಕಾಯ್ದೆ ಮಾಡಿ

ರೈತ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್ ಮಾತನಾಡಿ, ‘ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಖರೀದಿಸದಂತೆ ಕಾಯ್ದೆ ಜಾರಿ ಮಾಡಬೇಕು. ಕಡಿಮೆ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿ ಮಾಡಿದರೆ ಅವರ ಲೈಸೆನ್ಸ್ ರದ್ದು ಮಾಡಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘2024ರ ಲೋಕಸಭಾ ಚುನಾವಣೆಯವರೆಗೂ ರೈತರ ಹೋರಾಟ ಇರುತ್ತದೆ. ಕ್ರೀಡಾಪಟುಗಳು, ಚಿತ್ರನಟರು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. ಹಲವು ಮಂದಿ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ. ರೈತರು ಯಾವುದೇ ಏಜೆಂಟರಲ್ಲ. ಅನ್ನದಾತರು. ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ. ಕರ್ನಾಟಕ ವಿದ್ಯುಚ್ಛಕ್ತಿ ಕಾಯ್ದೆಯಿಂದ ರೈತರಿಗೆ ನಷ್ಟವಾಗುತ್ತಿದೆ. ರಾಜಕಾರಣಿಗಳು ಮೊದಲು ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಹಾಕಿಸಿಕೊಳ್ಳಲಿ. ಸರ್ಕಾರಕ್ಕೆ ಲಾಭವಾದರೆ ನಾವು ಹಾಕಿಸುತ್ತೇವೆ’ ಎಂದು ತಿರುಗೇಟು ನೀಡಿದರು.

ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ‘ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 142 ರೈತರು ಮೃತಪಟ್ಟಿದ್ದಾರೆ. ಈ ಸರ್ಕಾರ ರೈತರು ಹಾಗೂ ಕಾರ್ಮಿಕರ ಬೆನ್ನೆಲುಬು ಮುರಿದಿದೆ. ರೈತ ಹೋರಾಟಗಾರರನ್ನು ಕೇಂದ್ರ ಸರ್ಕಾರ ಭಯೋತ್ಪಾದಕರಂತೆ  ಬಿಂಬಿಸುತ್ತಿದೆ. ಹೀಗಿದ್ದರೆ 11 ಬಾರಿ ಸಭೆ ಏಕೆ ಮಾಡಬೇಕಿತ್ತು’ ಎಂದು ಪ್ರಶ್ನಿಸಿದರು.

‘ಎಲ್ಐಸಿ, ರೈಲ್ವೆ, ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಹೊರಟಿದ್ದು, ಕೇಂದ್ರ ಸರ್ಕಾರ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಜನಪ್ರತಿನಿಧಿಗಳಿಗೆ ಗಣರಾಜ್ಯೋತ್ಸವ ಆಚರಿಸುವ ಅರ್ಹತೆ ಇಲ್ಲ’  ಎಂದರು.

ನೆರಳು ಬೀಡಿ ಯೂನಿಯನ್ ಕಾರ್ಮಿಕ ಸಂಘಟನೆಯ ಜಬೀನಾ ಖಾನಂ ಮಾತನಾಡಿ, ‘ನರೇಂದ್ರಮೋದಿ ಸಬ್‌ ಕಾ ಸಾತ್, ಈಗ ‘ಅಂಬಾನಿ ಕಾ ಸಾತ್’ ಎಂದು ಹೇಳಬೇಕಿದೆ. ಸರ್ಕಾರದ ನೀತಿಗಳನ್ನು ಧಿಕ್ಕರಿಸಬೇಕು. ಛಳಿ ಎನ್ನದೇ 60 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಮೋದಿ ಸರ್ಕಾರ ಏನು ಮಾತನಾಡಲಿಲ್ಲ’ ಎಂದು ಆರೋಪಿಸಿದರು. ಆವರಗೆರೆ ವಾಸು, ಆವರಗೆರೆ ಚಂದ್ರು, ಆವರಗೆರೆ ಉಮೇಶ್, ಇಂಟಕ್‌ನ ದಾಕ್ಷಾಯಿಣಮ್ಮ, ಕೊಂಡಜ್ಜಿ ಮಲ್ಲಿಕಾರ್ಜುನ, ಮಹಾಂತೇಶ್, ಗೀತಾ ಚಂದ್ರಶೇಖರ್, ಯಶೋಧಮ್ಮ, ರಾಜೇಶ್ವರಿ, ಇಂದ್ರಮ್ಮ, ಹೆಗ್ಗರೆ ರಂಗಪ್ಪ, ಪೂಜಾರ್ ಅಂಜಿನಪ್ಪ, ಗುಮ್ಮನೂರು ಬಸವರಾಜ್, ದೇವನಹಳ್ಳಿ ರವಿ, ಹೂವಿನಮಡು ಅಂಜಿನಪ್ಪ, ಆನಂದರಾಜ್, ಶ್ರೀನಿವಾಸ್ ಮೂರ್ತಿ, ಐರಣಿಚಂದ್ರು, ಇ.ಶ್ರೀನಿವಾಸ್,  ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸರಾಜು ವಿ. ಶಿವಗಂಗಾ ಪಾಲ್ಗೊಂಡಿದ್ದರು. ತೇಜಸ್ವಿ ಪಟೇಲ್ ನೇತೃತ್ವದ ಕಬ್ಬು ಬೆಳೆಗಾರರ ಸಂಘದ 150ಕ್ಕೂ ಹೆಚ್ಚು ರೈತರು ಬಸ್ ಹಾಗೂ ಕ್ರೂಸರ್‌ಗಳ ಮೂಲಕ ಬೆಂಗಳೂರಿಗೆ ತೆರಳಿ ಬೆಂಬಲ ವ್ಯಕ್ತಪಡಿಸಿದರು. ಬಲ್ಲೂರು ರವಿಕುಮಾರ್ ಬಣದ ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು