ನಿಯಮ ಉಲ್ಲಂಘನೆ: ದ್ವಿಚಕ್ರ ವಾಹನಗಳೇ ಅಧಿಕ
ದ್ವಿಚಕ್ರ ವಾಹನ ಸವಾರರ ವಿರುದ್ಧವೇ ಸಂಚಾರ ನಿಯಮ ಉಲ್ಲಂಘನೆಯ ಅಧಿಕ ಪ್ರಕರಣಗಳು ದಾಖಲಾಗಿವೆ. ದಂಡ ಪಾವತಿಸಿದವರ ಪೈಕಿಯೂ ದ್ವಿಚಕ್ರ ವಾಹನ ಸವಾರರೇ ಮುಂದಿದ್ದಾರೆ. ದ್ವಿಚಕ್ರ ವಾಹನ ಸವಾರರೊಬ್ಬರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಯಡಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ರಿಯಾಯಿತಿ ಇರುವುದರಿಂದ ಅರ್ಧದಷ್ಟು ದಂಡದ ಮೊತ್ತವನ್ನು (₹13000) ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ. ಇಂತಹ ಹಲವು ಪ್ರಕರಣಗಳು ರಿಯಾಯಿತಿ ಸೌಲಭ್ಯದಿಂದ ಇತ್ಯರ್ಥಗೊಂಡಿವೆ ಎಂದು ಸಂಚಾರ ವಿಭಾಗದ ಸಿಪಿಐ ನೆಲವಾಗಲು ಮಂಜುನಾಥ್ ತಿಳಿಸಿದರು. ‘ವಾಹನ ಸವಾರರು ಯಾವುದೇ ಕಾರಣಕ್ಕೂ ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದು. ನಿಯಮ ಉಲ್ಲಂಘನೆಯಿಂದ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳೂ ಹೆಚ್ಚುತ್ತಿವೆ. ತಮ್ಮ ಪ್ರಾಣ ಮಾತ್ರವಲ್ಲದೇ ಬೇರೆಯವರ ಜೀವದ ಬಗ್ಗೆಯೂ ವಾಹನ ಸವಾರರು ಕಾಳಜಿ ವಹಿಸಬೇಕು. ಚಾಲನೆ ವೇಳೆ ನಿರ್ಲಕ್ಷ್ಯ ತೋರಬಾರದು’ ಎಂದು ಅವರು ಮನವಿ ಮಾಡಿದರು.