ಕಡರನಾಯ್ಕನಹಳ್ಳಿ: ಸಮೀಪದ ಉಕ್ಕಡಗಾತ್ರಿ ಸಮೀಪ ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚಿದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡು ಹಲವು ಜಮೀನುಗಳು ಜಲಾವೃತಗೊಂಡಿವೆ. ತರಕಾರಿ ಬೆಳೆಯುತ್ತಿದ್ದ ಪ್ರದೇಶಗಳೂ ಮುಳುಗಡೆಯಾಗಿದ್ದು ರೈತರು ತೀವ್ರ ನಷ್ಟದ ಭೀತಿಯಲ್ಲಿದ್ದಾರೆ.
ಉಕ್ಕಡಗಾತ್ರಿಯ ರೈತ ಪದ್ಮಪ್ಪ ಪೂಜಾರ್ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಮೂಲಂಗಿ, ಬೆಂಡೆ, ಸೊಪ್ಪು ಮುಂತಾದ ತರಕಾರಿ ಬೆಳೆಯುತ್ತಿದ್ದರು. ಇದ್ದಕ್ಕಿದ್ದಂತೆ ಜಮೀನು ಜಲಾವೃತಗೊಂಡಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗ್ರಾಮದ ಮಾಲತೇಶ, ಶಿವಾಜಿ, ಬ್ರಹ್ಮಪ್ಪ ಅವರ ತರಕಾರಿ ಜಮೀನುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಇದ್ದಕ್ಕಿದ್ದಂತೆ ನದಿಯಲ್ಲಿ ನೀರು ಹೆಚ್ಚಳವಾಗಿದ್ದರಿಂದ ರೈತರು ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ಪಂಪ್‌ಸೆಟ್ ಇವೆಯೋ, ಕೊಚ್ಚಿಕೊಂಡು ಹೋಗಿವೆಯೋ ತಿಳಿಯುತ್ತಿಲ್ಲ. ಕೊಚ್ಚಿಕೊಂಡು ಹೋದಲ್ಲಿ ಲಕ್ಷಗಟ್ಟಲೆ ನಷ್ಟವಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ತೋಟಗಳಿಗೆ ಹಾನಿ:
ಹಲವು ಅಡಿಕೆ ಹಾಗೂ ತೆಂಗಿನ ತೋಟಗಳು ಇನ್ನೂ ಜಲಾವೃತಗೊಂಡಿದ್ದು, ನೀರು ತಗ್ಗಿದ ಮೇಲೆ ಹಾನಿಯ ನಿಖರ ಲೆಕ್ಕ ಸಿಗಲಿದೆ. ಅಡಿಕೆ ಮರಗಳು ಉಳಿದರೂ ಇಳುವರಿ ಬರುವುದಿಲ್ಲ. ನೀರಿನಿಂದ ಮೆಕ್ಕಲು ಮಣ್ಣು ತೋಟಕ್ಕೆ ಬಂದಿದ್ದರೆ ಸಮಸ್ಯೆ ಇಲ್ಲ. ಆದರೆ ನೀರಿನ ರಭಸಕ್ಕೆ ತೋಟದ ಮಣ್ಣು ಕೊಚ್ಚಿ ಹೋದರೆ ಗಿಡಗಳೇ ಉಳಿಯುವುದಿಲ್ಲ. ನೂರಕ್ಕೂ ಹೆಚ್ಚು ಎಕರೆಗಳಲ್ಲಿ ನೀರು ನಿಂತಿದ್ದು, ಬೆಳೆ ಕೈಕೊಟ್ಟಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಉಕ್ಕಡಗಾತ್ರಿ ದೇವಸ್ಥಾನದ ಇಕ್ಕೆಲಗಳಲ್ಲಿ ಇದ್ದ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ. ಕೆಲವು ಅಂಗಡಿಗಳು ಶನಿವಾರದಿಂದ ಕಾರ್ಯಾರಂಭ ಮಾಡಿವೆ. ಸದಾ ತುಂಬಿ ತುಳುಕುತ್ತಿದ್ದ ಉಕ್ಕಡಗಾತ್ರಿಗೆ ಮಳೆ ಮತ್ತು ಪ್ರವಾಹದಿಂದ ಭಕ್ತರ ಸಂಖ್ಯೆ ವಿರಳವಾಗಿದೆ.
ಕರಿಬಸವೇಶ್ವರ ಅಜ್ಜಯ್ಯನ ಗದ್ದುಗೆ ದರ್ಶನಕ್ಕೆ ಬಂದ ಭಕ್ತರು ಗೇಟಿನ ಒಳಗೆ ಸ್ನಾನ ಮಾಡಿ ನಂತರ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ವತಿಯಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಪ್ರದೇಶಗಳಲ್ಲಿ ಮತ್ತೆ ಮಳೆಯಾದರೆ ಮತ್ತೆ ಪ್ರವಾಹ ಆಗಬಹುದೆಂಬ ಆತಂಕ ರೈತರಲ್ಲಿ ಮನೆ ಮಾಡಿದೆ.
ನದಿಯ ಪ್ರವಾಹ ಕಡಿಮೆ ಆದ ಮೇಲೆ ತರಕಾರಿ ಬೆಳೆಯುವ ಜಮೀನನ್ನು ಪರಿಶೀಲಿಸಲಾಗುವುದು. ನೆರೆ ಪರಿಹಾರಕ್ಕೆ ಶಿಫಾರಸು ಮಾಡಲು ಕ್ರಮಕೈಗೊಳ್ಳಲಾಗುವುದು.ಎಚ್.ಎನ್. ಶಶಿಧರ್ ಸ್ವಾಮಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹರಿಹರ
ನನಗೆ ಇರುವುದೇ ಒಂದೆಕರೆ ಜಮೀನು. ಅದರಲ್ಲಿ ಬೆಂಡೆ ಮೂಲಂಗಿ ಸೊಪ್ಪು ಟೊಮೆಟೊ ಕೊತ್ತಂಬರಿ ಇನ್ನಿತರೆ ತರಕಾರಿ ಬೆಳೆಯುತ್ತಿದ್ದೆ. ಕುಟುಂಬ ನಿರ್ವಹಣೆಗೆ ಸಮಸ್ಯೆ ಇರಲಿಲ್ಲ. ಇದ್ದಕ್ಕಿದ್ದಂತೆ ತುಂಬಿ ಹರಿದ ನದಿ ನೀರಿನಿಂದ ಜಮೀನು ನೀರಿನಲ್ಲಿ ಮುಳುಗಿದೆ. ₹2 ಲಕ್ಷ ಆದಾಯ ನೀರುಪಾಲಾಗಿದೆ. ಸಂಬಂಧಪಟ್ಟ ಇಲಾಖೆ ಪರಿಹಾರ ಒದಗಿಸಬೇಕು.ಪದ್ಮಪ್ಪ ಪೂಜಾರ್, ತರಕಾರಿ ಬೆಳೆಗಾರ ಉಕ್ಕಡಗಾತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.