ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

10 ಮೀಟರ್‌ ಸಮೀಪಿಸಿದ ತುಂಗಭದ್ರಾ ನದಿ ನೀರಿನ ಮಟ್ಟ

ಹೊನ್ನಾಳಿಯಲ್ಲಿ ಮೈದುಂಬಿ ಹರಿಯುತ್ತಿರುವ
Last Updated 8 ಜುಲೈ 2022, 2:45 IST
ಅಕ್ಷರ ಗಾತ್ರ

ಹೊನ್ನಾಳಿ: ನಾಲ್ಕೈದು ದಿನಗಳಿಂದ ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವುದರಿಂದ ಈ ಭಾಗದ ಜೀವನದಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ.

ನದಿ ನೀರಿನ ಪ್ರಮಾಣ 11 ಮೀಟರ್ ಎತ್ತರಕ್ಕೆ ತಲುಪಿದರೆ ಅದು ಎಚ್ಚರಿಕೆಯ ಮಟ್ಟ, 12 ಮೀಟರ್ ತಲುಪಿದರೆ ಅದು ಅಪಾಯದ ಮಟ್ಟ ಎಂದು ಗುರುತಿಸಲಾಗಿದೆ. ಗುರುವಾರಕ್ಕೆ ನದಿ ನೀರಿನ ಮಟ್ಟ 10 ಮೀಟರ್ ಸಮೀಪದಲ್ಲಿದೆ. ಮಲೆನಾಡಿನಲ್ಲಿ ಮಳೆ ಇದೇ ರೀತಿಯಲ್ಲಿ ಮುಂದುವರಿದರೆ ಇನ್ನೊಂದೆರಡು ದಿನಗಳಲ್ಲಿ ಅಪಾಯದ ಮಟ್ಟವನ್ನು ತಲುಪುವ ಸಾಧ್ಯತೆ ಇದೆ. ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದರು ಕೂಡ ನದಿ ನೀರಿನ ಮಟ್ಟ ಅಪಾಯದ ಮಟ್ಟವನ್ನು ತಲುಪಲಿದೆ.

‘ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಹೊನ್ನಾಳಿಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಎಚ್.ಜೆ. ರಶ್ಮಿ ಮಾಹಿತಿ ನೀಡಿದ್ದಾರೆ.

ತುಂಗಭಾದ್ರಾ ಕೊಪ್ಪಳ, ರಾಯಚೂರು, ಬಳ್ಳಾರಿ ತ್ರಿವಳಿ ಜಿಲ್ಲೆಗಳ ಪ್ರಮುಖ ಜೀವನದಿಯಾಗಿದೆ. ‘ಗಂಗಾ ಸ್ನಾನ, ತುಂಗಾ ಪಾನ’ ಎಂಬ ಪ್ರಸಿದ್ಧ ನಾಣ್ಣುಡಿಗೆ ತುಂಗಾ ನದಿ ಸಾಕ್ಷಿಯಾಗಿದೆ. ತುಂಗಾ ಮತ್ತು ಭದ್ರಾ ಎರಡು ಪ್ರತ್ಯೇಕ ನದಿಗಳಾಗಿದ್ದು, ಸಮುದ್ರ ಮಟ್ಟಕ್ಕಿಂತ 1,198 ಮೀಟರ್ ಎತ್ತರದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ವರಾಹ ಪರ್ವತದ ಗಂಗಾಮೂಲದಲ್ಲಿ ಹುಟ್ಟುತ್ತದೆ.

ಕೂಡಲಿಯಲ್ಲಿ ಸಂಗಮ: ತುಂಗಾ ನದಿಯು 147 ಕಿ.ಮೀ, ಭದ್ರಾ ನದಿಯು 171 ಕಿ.ಮೀವರೆಗೆ ಹರಿದು ಸಮುದ್ರ ಮಟ್ಟದಿಂದ 610 ಮೀಟರ್ ಎತ್ತರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಕೂಡಲಿಯಲ್ಲಿ ಸಂಗಮವಾಗುತ್ತದೆ. ಇಲ್ಲಿಂದ ತುಂಗಭದ್ರಾ ಎನ್ನುವ ಹೆಸರಿನೊಂದಿಗೆ ಹರಿಯುತ್ತದೆ

ಈ ನದಿಯು ವರದಾ, ಕುಮದ್ವತಿ, ಚಿಕ್ಕಹಗರಿ, ವೇದಾವತಿ ಎಂಬ ಉಪನದಿಗಳನ್ನು ತನ್ನೊಂದಿಗೆ ಸೇರಿಸಿಕೊಂಡು ಶಿವಮೊಗ್ಗ, ಹಾವೇರಿ, ದಾವಣಗೆರೆ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಮೂಲಕ ಒಟ್ಟು 383 ಕಿ.ಮೀ. ದೂರದವರೆಗೆ ಕರ್ನಾಟಕದಲ್ಲಿ ಹರಿಯುತ್ತದೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಕೂಡಲಿಯಲ್ಲಿ ಸಂಗಮವಾಗಿ ಹರಿದು ಬರುವ ಈ ನದಿ ಹೊನ್ನಾಳಿ ಮೂಲಕ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯವನ್ನು ಸೇರುತ್ತದೆ.

ಹೊನ್ನಾಳಿ ತಾಲ್ಲೂಕಿನ 23 ಹಳ್ಳಿಗಳು ಹಾಗೂ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಹಾಗೂ ಚೀಲೂರು ಹಳ್ಳಿಗಳು ತುಂಗಭದ್ರಾ ನದಿ ತೀರದಲ್ಲಿವೆ. ಹೊನ್ನಾಳಿ ನಗರದಲ್ಲಿಯೇ ಹಾದು ಹೋಗಿರುವ ಈ ನದಿಯು ಮಳೆಗಾಲದಲ್ಲಿ ಇಲ್ಲಿಯ ಬಾಲರಾಜ್ ಘಾಟ್, ಮೇದಾರ ಕೇರಿ ನಿವಾಸಿಗಳಿಗೆ ಕಂಟಕವಾಗಿ ಪರಿಣಮಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT