ಶನಿವಾರ, ಅಕ್ಟೋಬರ್ 23, 2021
25 °C

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮಹತ್ವದ ಎರಡು ನಿರ್ಣಯ: ಕ್ಯಾ.ಗಣೇಶ್ ಕಾರ್ಣಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗರೆ: ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಎರಡು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ತಿಳಿಸಿದರು.

ಹಿಂದುಳಿದ ವರ್ಗಗಳ ವರ್ಗೀಕರಣ ಅಧಿಕಾರವನ್ನು ರಾಜ್ಯಗಳಿಗೆ ನೀಡಿದ ಮೋದಿ ಸರ್ಕಾರಕ್ಕೆ ಅಭಿನಂದಿಸಿ ಮೊದಲ ನಿರ್ಣಯ ಕೈಗೊಳ್ಳಲಾಯಿತು ಎಂದು ಕಾರ್ಯಕಾರಿಣಿ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೈತವಿದ್ಯಾನಿಧಿ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನಗಳನ್ನು ಹೆಚ್ಚಿಸಿ ಫಲಾನುಭವಿಗಳಿಗೆ ಉಪಯೋಗ ಆಗುವಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ನೆನಪಲ್ಲಿ ಅಮೃತ ಯೋಜನೆಗಳನ್ನು ಜಾರಿಗೆ ತಂದು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಪಣತೊಟ್ಟಿರುವ ಮುಖ್ಯಮಂತ್ರಿಯನ್ನು ಅಭಿನಂದಿಸಿ ಎರಡನೇ ನಿರ್ಣಯ ಕೈಗೊಳ್ಳಲಾಯಿತು ಎಂದರು.

ಮುಖ್ಯಮಂತ್ರಿ ಜತೆಗೆ ಮುಕ್ತ ಚರ್ಚೆ ಎಂದು 15 ನಿಮಿಷಗಳ ಅವಧಿ ನೀಡಲಾಗಿತ್ತು. ಮುಕ್ತ ಚರ್ಚೆ ಅರ್ಧ ಗಂಟೆ ದಾಟಿತು. ಅದಕ್ಕಾಗಿ ಮುಂದಿನ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಜತೆಗಿನ ಚರ್ಚೆಗೆ ಹೆಚ್ಚು ಅವಧಿಯನ್ನು ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು ಎಂದು ಹೇಳಿದರು.

ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ವಿವಿಧ ಕಾರಣಗಳಿಗಾಗಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು. ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಠಾಣಗಳನ್ನು ಅಭಿವೃದ್ಧಿ ಮಾಡಬೇಕು. ಕುಮ್ಕಿ, ಕಾನ–ಬಾಣೆ, ದೇವರಪಟ್ಟ ಸಮಸ್ಯೆಗಳನ್ನು ಬಗೆಹರಿಸಬೇಕು. ಆಡಳಿತ ಚುರುಕಿಗಾಗಿ ಕಡತ ವಿಲೇವಾರಿ ವೇಗಪಡೆಯಬೇಕು. ಅದಕ್ಕಾಗಿ ತಂತ್ರಜ್ಞಾನ ಬಳಸಬೇಕು. ಆಡಳಿತ ಸುಧಾರಣೆ ಮಾಡಬೇಕು. ಎಂ–ನರೇಗಾದಲ್ಲಿ ಮಳೆ ನೀರು ಸಂಗ್ರಹ ಸೇರಿಸಬೇಕು. ಬಸ್‌ನಿಲ್ದಾನದ ಶೌಚಾಲಯ ನಿರ್ವಹಣೆ ಸರಿಯಾಗಬೇಕು. ಜಿಲ್ಲೆಗಳು ವಿಭಾಗವಾಗಿ ಎರಡಾಗಿದ್ದರೂ ಡಿಸಿಸಿ ಬ್ಯಾಂಕ್‌, ಕೆಎಂಎಫ್‌ ಒಂದೇ ಇದೆ. ಅದು ಆಯಾ ಜಿಲ್ಲೆಗಳಿಗೆ ಆಗಬೇಕು ಮುಂತಾದ ಪ್ರಶ್ನೆಗಳು, ಚರ್ಚೆಗಳು ಮುಖ್ಯಮಂತ್ರಿಯ ಮುಂದೆ ಬಂದವು ಎಂದರು.

ಹಿಂದಿನ ಕಾರ್ಯಕಾರಿಣಿಯ ಬಳಿಕ ಇಲ್ಲಿವರೆಗೆ ನಿಧನರಾದವರಿಗೆ ಕಾರ್ಯಕಾರಿಣಿಯ ಆರಂಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು ಎಂದು ತಿಳಿಸಿದರು.

ಕಾರ್ಯಕಾರಿಣಿಗೆ 574 ಮಂದಿ ಅಪೇಕ್ಷಿತರಾಗಿದ್ದರು. ಅದರಲ್ಲಿ 509 ಮಂದಿ ಭಾಗವಹಿಸಿದ್ದರು. ಇದು ಉತ್ತಮ ಹಾಜರಾತಿ ಎಂದು ಶ್ಲಾಘಿಸಿದರು.

ಭಾರತವನ್ನು ಬೆಳಗುವವರನ್ನು, ದೇಶದ ವರ್ಚಸ್ಸು ಹೆಚ್ಚು ಮಾಡುವವರನ್ನು ಬಿಜೆಪಿ ನೀಡುತ್ತದೆ. ವೈಯಕ್ತಿಕ ವರ್ಚಸ್ಸು ಬೆಳೆಸಲು ಅಲ್ಲ ಎಂದು ಸಮಾರೋಪದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ ಎಂದು ಕಾರ್ಣಿಕ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ,  ಜಿಲ್ಲಾ ವಕ್ತಾರ ಡಿ.ಎಸ್‌. ಶಿವಶಂಕರ್‌, ಎಚ್‌.ಪಿ. ವಿಶ್ವಾಸ್‌, ಹರೀಶ್‌, ಅವಿನಾಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು