ಶನಿವಾರ, ಸೆಪ್ಟೆಂಬರ್ 25, 2021
29 °C
ರೈತನ ಮನೆಗೆ ಭೇಟಿ* 3.29 ಲಕ್ಷ ದನಗಳು ಹಾಗೂ ಎಮ್ಮೆಗಳಿಗೆ ಲಸಿಕೆ

ಆಗಸ್ಟ್‌ 2ನೇ ವಾರದಲ್ಲಿ ಕಾಲು–ಬಾಯಿ ರೋಗಕ್ಕೆ ಲಸಿಕೆ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಾನುವಾರಿಗೆ ಕಾಣಿಸಿಕೊಳ್ಳುವ ಕಾಲು–ಬಾಯಿ ರೋಗಕ್ಕೆ ಆಗಸ್ಟ್ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಜಿಲ್ಲೆಗೆ ಲಸಿಕೆ ಬರಲಿದೆ.

ಜಿಲ್ಲೆಯ 3.29 ಲಕ್ಷ ದನಗಳು ಹಾಗೂ ಎಮ್ಮೆಗಳು ಇದ್ದು, ಇವುಗಳಿಗೆ ಅಕ್ಟೋಬರ್ ತಿಂಗಳ ವೇಳೆಗೆ ಲಸಿಕೆ ಪೂರ್ಣಗೊಳ್ಳಲಿದೆ. ಪೊಲಿಯೋ ಲಸಿಕೆ ಮಾದರಿಯಲ್ಲಿ ಪ್ರತಿ ರೈತನ ಮನೆಗೆ ಹೋಗಿ ಲಸಿಕೆ ಹಾಕಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಭಾಸ್ಕರ್‌ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಸಿಕೆ ಹಾಕಿದ ಬಳಿಕ ಪ್ರತಿ ಪ್ರಾಣಿಯ ಕಿವಿಗೆ ಆಧಾರ್ ನಂಬರ್ ಮಾದರಿಯಲ್ಲಿ ಒಂದು ಸಂಖ್ಯೆಯನ್ನು ಟ್ಯಾಗ್ ಮಾಡಲಾಗುವುದು. ಕೊರೊನಾ ಲಸಿಕೆ ಮಾದರಿಯಲ್ಲೇ ಆ ನಂಬರ್ ನೋಂದಣಿಯಾಗುತ್ತದೆ. ಕೇಂದ್ರ ಸರ್ಕಾರದಿಂದ ನೀಡುವ ಈ ಲಸಿಕೆಯನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಎಲ್ಲಾ ರಾಸಿಗೂ ಲಸಿಕೆ ನೀಡಲು 45 ದಿವಸ ಬೇಕಾಗುತ್ತದೆ. ನೋಂದಣಿ ಇಲ್ಲದಿದ್ದರೆ 15 ದಿವಸಕ್ಕೆ ಮುಗಿಸಬಹುದು’ ಎಂದು ಹೇಳಿದರು.

66 ಜಾನುವಾರಿಗೆ ಕಾಲು–ಬಾಯಿ ರೋಗ: 

‘ಜೂನ್ ಅಂತ್ಯದ ವೇಳೆಗೆ ದಾವಣಗೆರೆ ತಾಲ್ಲೂಕಿನ ಬಾಡ, ಹೆಬ್ಬಾಳು ಹಾಗೂ ನರಗನಹಳ್ಳಿ, ಚನ್ನಗಿರಿ ಪಟ್ಟಣ ಮತ್ತು ಅದೇ ತಾಲೂಕಿನ ಈರಗನಹಳ್ಳಿಯಲ್ಲಿ ಕಳೆದ ವಾರ ಹರಿಹರ ತಾಲ್ಲೂಕಿನ ಜಿಗಳಿಯಲ್ಲಿ 66 ಜಾನುವಾರಿಗೆ ಕಾಲು–ಬಾಯಿ ರೋಗ ಕಾಣಿಸಿಕೊಂಡಿದ್ದು, ಅವುಗಳಲ್ಲಿ ಎರಡು ಕರುಗಳು ಮಾತ್ರ ಮೃತಪಟ್ಟಿವೆ’ ಎಂದು ಭಾಸ್ಕರ್ ನಾಯ್ಕ್ ಮಾಹಿತಿ ನೀಡಿದರು.

ರೋಗ ನಿಯಂತ್ರಣಕ್ಕೆ ರಿಂಗ್ ವ್ಯಾಕ್ಸಿನೇಷನ್

‘ಕಾಲು–ಬಾಯಿ ರೋಗ ನಿಯಂತ್ರಣಕ್ಕಾಗಿ ಲಸಿಕೆ ಕಾಣಿಸಿಕೊಂಡ ಗ್ರಾಮಗಳ 5 ಕಿ.ಮೀ ವ್ಯಾಪ್ತಿಯಲ್ಲಿ ರಾಸುಗಳಿಗೆ ರಿಂಗ್ ವ್ಯಾಕ್ಸಿನೇಷನ್ ನೀಡಿದ್ದರಿಂದ ರೋಗ ನಿಯಂತ್ರಣಕ್ಕೆ ಬಂದಿತು’ ಎಂದು ಹೇಳಿದರು. 

‘ಕಾಲು–ಬಾಯಿ ರೋಗಕ್ಕೆ ಇಡೀ ದೇಶದಲ್ಲಿ ವರ್ಷಕ್ಕೆ 2 ಬಾರಿ ಲಸಿಕಾ ಕಾರ್ಯಕ್ರಮ ಆಂದೋಲನದ ಮಾದರಿಯಲ್ಲಿ ಆಗುತ್ತದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಲಸಿಕೆ ಆಗಿತ್ತು. ಮಾರ್ಚ್‌ ತಿಂಗಳಲ್ಲಿ 2ನೇ ಸುತ್ತಿನ ಲಸಿಕೆ ನೀಡಬೇಕಾಗಿತ್ತು. ಲಾಕ್‌ಡೌನ್ ಕಾರಣ ಲಸಿಕೆ ನೀಡಲು ಆಗದೇ ಇದ್ದುದರಿಂದ ಕೆಲವು ಕಡೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತು’ ಎಂದು ಭಾಸ್ಕರ್‌ ನಾಯ್ಕ್ ತಿಳಿಸಿದರು.

ರೋಗದ ಲಕ್ಷಣಗಳು

‘ಜಾನುವಾರಿಗೆ ತೀವ್ರ ಜ್ವರ, ಬಾಯಲ್ಲಿ ಜೊಲ್ಲು, ನಾಲಿಗೆಯಲ್ಲಿ ಉಣ್ಣು, ಕಾಲು ಗೊರಸಿನಲ್ಲಿ ಗಾಯವಾಗುವುದು ಕಾಲು–ಬಾಯಿ ಲಕ್ಷಣಗಳಾಗಿದ್ದು, ರೋಗ ಲಕ್ಷಣ ಕಾಣಿಸಿಕೊಂಡಾಗ ಹಾಲು ಕಡಿಮೆಯಾಗುತ್ತಿದೆ. ಮೇವು ತಿನ್ನಲು ಆಗುವುದಿಲ್ಲ. ಇದರಿಂದಾಗಿ ಸುಸ್ತು ಕಾಣಿಸಿಕೊಳ್ಳುತ್ತದೆ’ ಎಂದು ಭಾಸ್ಕರ್ ನಾಯ್ಕ್ ತಿಳಿಸಿದರು.

 ಕಾಲು–ಬಾಯಿ ಲಸಿಕೆ ನಿಯಂತ್ರಣಕ್ಕೆ ಖಾಸಗಿಯವರಿಂದ 20 ಸಾವಿರ ಡೋಸ್ ಲಸಿಕೆಯನ್ನು ಖರೀದಿಸಿ ಜಾನುವಾರಿಗೆ ನೀಡಿದ್ದರಿಂದ ರೋಗ ಹತೋಟಿಯಲ್ಲಿದೆ.

ಡಾ. ಭಾಸ್ಕರ್ ನಾಯ್ಕ್,  ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ 

ನಮ್ಮ ಗ್ರಾಮದಲ್ಲಿ ಗರ್ಭಕಟ್ಟಿದ ಹಸುಗಳಿಗೆ ಈ ರೋಗ ಕಾಣಿಸಿಕೊಂಡಿತು. ಈಗ ನಿಯಂತ್ರಣಕ್ಕೆ ಬಂದಿದೆ. ಕೇಂದ್ರ ಸರ್ಕಾರ ಶೀಘ್ರ ಲಸಿಕೆ ನೀಡಬೇಕು.
ಜಗದೀಶ್, ಬಾಡ ಗ್ರಾಮದ ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.