ಶುಕ್ರವಾರ, ಜೂನ್ 25, 2021
21 °C
45 ವರ್ಷದ ಮೇಲಿನವರಿಗೇ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ ಲಸಿಕೆ

ದಾವಣಗೆರೆ: 18 ವರ್ಷ ದಾಟಿದವರಿಗೆ ವ್ಯಾಕ್ಸಿನ್‌ ಇನ್ನೂ ದೂರ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 45 ದಾಟಿದವರಿಗೆ ನೀಡಲು ಬೇಡಿಕೆ ಇರುವಷ್ಟು ಪೂರೈಕೆಯಾಗುತ್ತಿಲ್ಲ. ಹಾಗಾಗಿ 18 ವರ್ಷ ದಾಟಿದವರಿಗೆ ಮೇ 1ರಿಂದ ಲಸಿಕೆ ಸಿಗುವ ಸಾಧ್ಯತೆ ಕಡಿಮೆಯಾಗಿದೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆ ಒಳಗೊಂಡಂತೆ ಜಿಲ್ಲೆಯ ಒಟ್ಟು 100 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಜನರು ಲಸಿಕೆ ತೆಗೆದುಕೊಳ್ಳಲು ಪ್ರತಿ ಕೇಂದ್ರದಲ್ಲಿ ನೂರಾರು ಮಂದಿ ಸರದಿ ಸಾಲಿನಲ್ಲಿ ನಿಂತಿರುತ್ತಾರೆ. ಕೆಲವೇ ಹೊತ್ತಿನಲ್ಲಿ ಲಸಿಕೆ ಖಾಲಿ ಎಂಬ ಬೋರ್ಡ್‌ ಬೀಳುತ್ತಿದೆ. ಸರದಿ ಸಾಲಿನಲ್ಲಿ ನಿಂತವರು ನಿರಾಸೆಯಿಂದ ವಾಪಸ್‌ ಆಗುತ್ತಿದ್ದಾರೆ. ದಿನಕ್ಕೆ 13 ಸಾವಿರ ಲಸಿಕೆ ಬೇಕು. ಆದರೆ ಎರಡು ಮೂರು ದಿನಗಳಿಗೊಮ್ಮೆ 5 ಸಾವಿರದಿಂದ 10 ಸಾವಿರದ ವರೆಗೆ ಮಾತ್ರ ಪೂರೈಕೆ ಆಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ.

ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕಂಪನಿಗೆ ರಾಜ್ಯ ಸರ್ಕಾರ ಇಂಡೆಂಟ್‌ ಕಳುಹಿಸಿದೆ. ಅಷ್ಟು ಪೂರೈಸಲು ಕನಿಷ್ಠ 20 ದಿನಗಳು ಬೇಕು ಎಂದು ಕಂಪನಿ ತಿಳಿಸಿದೆ. ಮೊದಲು ಇಂಡೆಂಟ್‌ ಕಳುಹಿಸಿದ ರಾಜ್ಯಗಳಿಗೆ ಮೊದಲು ಲಸಿಕೆ ಪೂರೈಕೆ ಆಗುತ್ತದೆ. ಹಾಗಾಗಿ ಮೇ ಮೂರನೇ ವಾರದ ನಂತರ 18 ವರ್ಷದ ಮೇಲಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ದೇಶದ ಎಲ್ಲ ರಾಜ್ಯಗಳಲ್ಲಿ ತಡವಾಗುತ್ತದಾ? ಇಲ್ಲ ಕರ್ನಾಟಕದಲ್ಲಿ ಮಾತ್ರ ತಡವಾಗುತ್ತಿರುವುದಾ ಎಂಬ ಬಗ್ಗೆ ಮಾಹಿತಿ ಇಲ್ಲ. ತಡವಾದರೂ ಕೋವಿಶೀಲ್ಡ್‌ ಲಸಿಕೆ ಬರಲಿದೆ. ಕೊವಾಕ್ಸಿನ್‌ ಮಾತ್ರ ಸಿಗುವುದು ಸಾಧ್ಯತೆ ಕಡಿಮೆ ಇದೆ. ಈಗಾಗಲೇ ಕೊವಾಕ್ಸಿನ್‌ ಮೊದಲ ಡೋಸ್‌ ಹಾಕಿಸಿಕೊಂಡವರಿಗಷ್ಟೇ ಎರಡನೇ ಡೋಸ್‌ ಪೂರೈಕೆಯಾಗಬಹುದು ಎಂಬುದು ಅವರ ವಿವರಣೆಯಾಗಿದೆ.

ಒಟ್ಟಿನಲ್ಲಿ 18 ವರ್ಷದಿಂದ 44 ವರ್ಷದವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಮುಂದಕ್ಕೆ ಹೋಗುವುದು ಖಚಿತವಾಗಿದೆ. ಬೇಡಿಕೆಯಷ್ಟಯ ವ್ಯಾಕ್ಸಿನ್‌ ಪೂರೈಕೆಯಾಗತೊಡಗಿದರೆ ಆಗ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳುವ 18 ವರ್ಷ ದಾಟಿದ ಎಲ್ಲರಿಗೂ ವ್ಯಾಕ್ಸಿನ್‌ ದೊರೆಯಲಿದೆ.

8000 ವ್ಯಾಕ್ಸಿನ್‌ ಮಾತ್ರ ಲಭ್ಯ

ಜಿಲ್ಲೆಗೆ ಗುರುವಾರ ಸಂಜೆಯ ಹೊತ್ತಿಗೆ 8000 ಲಸಿಕೆಗಳು ಬಂದಿವೆ. ಶುಕ್ರವಾರ ಒಂದೇ ದಿನದಲ್ಲಿ ಈ ಲಸಿಕೆ ಖಾಲಿಯಾಗಲಿದೆ. ಮತ್ತೆ ಮೂರು ದಿನಗಳನ್ನು ಬಿಟ್ಟು ಲಸಿಕೆ ಕಳುಹಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಹಾಗಾಗಿ ಶುಕ್ರವಾರ ಹೊರತುಪಡಿಸಿ ಮುಂದಿನ ನಾಲ್ಕು ದಿನಗಳ ಕಾಲ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗುವುದು ಕಷ್ಟವಾಗಲಿದೆ.

***

ಜಿಲ್ಲೆಗೆ ವ್ಯಾಕ್ಸಿನ್‌ ಬಂದಬಂದಂತೆ 45 ವರ್ಷದ ಮೇಲಿನವರಿಗೆ ನೀಡಲಾಗುವುದು. ಒಂದು ಅಂದಾಜಿನ ಪ್ರಕಾರ ಮೇ 10ರ ಬಳಿಕ 18 ವರ್ಷದ ಮೇಲಿನವರಿಗೆ ಲಸಿಕೆ ಬರಬಹುದು.

- ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು