ಸೋಮವಾರ, ಜನವರಿ 18, 2021
28 °C
ಬಸವ ಬೆಳಗು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಎಂ.ಜಿ. ಈಶ್ವರಪ್ಪ

‘ವಚನ ಸರಳ, ಪಾಲಿಸಲು ಕಷ್ಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶರಣ, ಶರಣೆಯರ ಸಾಹಿತ್ಯ ಬಹಳ ಸರಳವಾದುದು. ಯಾರೇ ಓದಿದರೂ ಅರ್ಥವಾಗುವಂಥದ್ದು. ಆದರೆ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು, ಪಾಲಿಸಲು ಹೋದಾಗ ವಚನಗಳು ನಾವು ತಿಳಿದಷ್ಟು ಸರಳವಲ್ಲ ಎಂಬುದು ಗೊತ್ತಾಗುತ್ತದೆ. ಅಂತರಂಗ, ಬಹಿರಂಗ ಶುದ್ಧಿ, ಬದ್ಧತೆ, ಪ್ರಾಮಾಣಿಕತೆ ಇಲ್ಲದೇ ಪಾಲನೆ ಸಾಧ್ಯವಿಲ್ಲ ಎಂದು ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.

ಜಾಗತಿಕ ಲಿಂಗಾಯುತ ಮಹಾಸಭಾ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಭಾನುವಾರ ಕುವೆಂಪು ಭವನದಲ್ಲಿ ನಡೆದ ‘ಬಸವ ಬೆಳಗು’ ಕರ್ನಾಟಕ ರಾಜ್ಯೋತ್ಸವ ಮತ್ತು ಚಿನ್ಮಯ ಜ್ಞಾನಿ ಚನ್ನಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾವ್ಯ ಕ್ಷೇತ್ರಕ್ಕೆ ಸೀಮಿತವಾಗಿದ್ದ ಸಾಹಿತ್ಯವನ್ನು ಸಾಮಾಜಿಕ ಕ್ಷೇತ್ರಕ್ಕೆ ತಂದವರು ಶರಣರು. ಬಸವಣ್ಣಾದಿ ಶರಣರು ಜಾತಿಭೇದವಿಲ್ಲದ, ಲಿಂಗಭೇದವಿಲ್ಲದ ಸಮ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು ಎಂದು ವಿವರಿಸಿದರು.

ಚಿನ್ಮಯ ಜ್ಞಾನಿ ಚನ್ನಬಸವಣ್ಣರ ಬಗ್ಗೆ ಎಂ.ಬಿ.ನಾಗರಾಜ್ ಕಾಕನೂರು ಉಪನ್ಯಾಸ ನೀಡಿ, ‘ವಚನಗಳಲ್ಲಿ ಪ್ರಸನ್ನ ಶೈಲಿ, ಬೆಳಗು ಶೈಲಿ ಮತ್ತು ಶಾಸ್ತ್ರಶೈಲಿ ಎಂಬ ಮೂರು ಶೈಲಿಗಳಿವೆ. ಬಸವಣ್ಣನ ವಚನಗಳು ಪ್ರಸನ್ನ ಶೈಲಿಯಾದರೆ ಅಲ್ಲಮಪ್ರಭು ಅವರದ್ದು ಬೆಳಕಿನ ಶೈಲಿ. ಚನ್ನ ಬಸವಣ್ಣರದ್ದು ಶಾಸ್ತ್ರ ಶೈಲಿ. ವಚನಗಳ ಬೆಳಕಿನಲ್ಲಿ ಬಸವಣ್ಣ ತೈಲ ಆದರೆ, ಚನ್ನಬಸವಣ್ಣ ಬತ್ತಿ. ಅಲ್ಲಮ ಪ್ರಭುಗಳು ಜ್ಯೋತಿ’ ಎಂದು ವಿವರಿಸಿದರು.

ಬಸವ ಬಳಗದ ವಿ.ಸಿದ್ದರಾಮಣ್ಣ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ನುಡಿನಮನ ಸಲ್ಲಿಸಿದರು. ಯಾದವ ಮಹಾಸಭಾ ಅಧ್ಯಕ್ಷ ಬಾಡದ ಆನಂದರಾಜ್‌, ಹುಚ್ಚಪ್ಪ ಅವರೂ
ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು