ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ: ವಚನಾನಂದಶ್ರೀ

Last Updated 16 ಜನವರಿ 2020, 1:59 IST
ಅಕ್ಷರ ಗಾತ್ರ

ಹರಿಹರ: ‘ನಾನು ನಿನ್ನೆ ಅಥವಾ ಇವತ್ತು ಆಡಿದ ಮಾತುಗಳಲ್ಲಿ ತಪ್ಪಿದ್ದರೆ, ನಿಮ್ಮ ಮಗ ಆಡಿದ ಮಾತು ಎಂದು ಹೊಟ್ಟೆಗೆ ಹಾಕಿಕೊಳ್ಳಿ’ ಎಂದು ಹೇಳುವ ಮೂಲಕ ವಚನಾನಂದ ಸ್ವಾಮೀಜಿ ಬುಧವಾರ ಪರೋಕ್ಷವಾಗಿ ಕ್ಷಮೆಯಾಚಿಸಿದರು.

ಹರಜಾತ್ರೆಯ ಎರಡನೇ ದಿನ ಬುಧವಾರ ನಡೆದ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಂಗಳವಾರ ’ಪಂಚಮಸಾಲಿಯ ಮೂವರನ್ನು ಸಚಿವರನ್ನಾಗಿ ಮಾಡದೇ ಇದ್ದರೆ ಸಮುದಾಯವೇ ಕೈಬಿಡಲಿದೆ' ಎಂದು ಬೆದರಿಕೆಯ ಧಾಟಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಎಚ್ಚರಿಸಿದ್ದರು. ಆಗ ಮುಖ್ಯಮಂತ್ರಿ ಅಸಮಾಧಾನಗೊಂಡು ಸಮಾರಂಭದ ನಡುವೆಯೇ ಹೊರಡಲು ಅನುವಾಗಿದ್ದರು. ಆಮೇಲೆ ಅವರು ಭಾವುಕರಾಗಿ ಮಾತನಾಡಿ, ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು. ಈ ಕುರಿತು ಅನೇಕ ರಾಜಕಾರಣಿಗಳು, ಸ್ವಾಮೀಜಿಗಳು ವಚನಾನಂದಶ್ರೀ ನಡೆಯನ್ನು ಖಂಡಿಸಿದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಕ್ಷಮೆ ಕೋರಿದರು.

‘ಈಜು ಕಲಿಯುವಾಗ ನೀರು ಕುಡಿದಂತೆ, ಸೈಕಲ್‌ ಕಲಿಯುವಾಗ ಹಲವು ಬಾರಿ ಬಿದ್ದಂತೆ, ನಡೆಯುವ ಜನ ಎಡವುವುದು ಸಹಜ. ನಾನೂ ತಪ್ಪು ಮಾಡಿರಬಹುದು’ ಎಂದರು.

ಬೆಂಬಲ: ಪಂಚಮಸಾಲಿಗಳ ಪರ ವಚನಾನಂದಶ್ರೀಗಳು ಮಂಗಳವಾರ ಮುಖ್ಯಮಂತ್ರಿ ಜತೆಗೆ ಮಾತನಾಡಿರುವುದು ಸರಿಯಾಗಿಯೇ ಇದೆ. ಅದಕ್ಕೆನನ್ನ ಬೆಂಬಲ ಇದೆ. 65 ಲಕ್ಷ ಜನಸಂಖ್ಯೆಇರುವ ವಾಲ್ಮೀಕಿ ಸಮಾಜದ ಬೆಂಬಲವಿದೆ’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಕಾವಿಧಾರಿಗಳ ಪರ ಕ್ಷಮೆ: ಹರಿಹರದ ‘ಹರಜಾತ್ರೆ’ ವೇದಿಕೆಯಲ್ಲಿ ನಡೆದ ಘಟನೆಗೆ ಸಮಸ್ತ ಕಾವಿಧಾರಿಗಳ ಪರವಾಗಿ ಮುಖ್ಯಮಂತ್ರಿ ಅವರಲ್ಲಿ ಕ್ಷಮೆ ಯಾಚಿಸುವುದಾಗಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಹಾವೇರಿ ತಾಲ್ಲೂಕಿನ ನರಸೀಪುರ ಸುಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

‘ಆಕಳನ್ನು ರಮಿಸಿ ಹಾಲು ಪಡೆಯಬೇಕು. ಯಾರೇ ತಂಬಿಗೆ ತಂದರೂ ಹಾಲು ಕೊಡುವ ಹಸು ಇದ್ದಂತೆ ಯಡಿಯೂರಪ್ಪ. ಯಾವುದೇ ಬಿರುಗಾಳಿ ಬೀಸಿದರೂ ‘ಗುಡ್ಡ’ ಅಲುಗಾಡುವುದಿಲ್ಲ. ಗುಡ್ಡದಂತೆಯೇ ಸಿ.ಎಂ. ಗಟ್ಟಿಯಾಗಬೇಕು. ಯಾರ ಒತ್ತಾಯಕ್ಕೂ ಮಣಿಯದೆ ರಾಜ್ಯವನ್ನು ಮುನ್ನಡೆಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT