ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯ ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ

ದೇವಾಲಯಗಳಲ್ಲಿ ಭಕ್ತರ ದಂಡು* ಅಖಂಡ ದರ್ಶನಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು
Last Updated 6 ಜನವರಿ 2020, 15:21 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿ ವಿವಿಧೆಡೆ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ವೈಕುಂಠ ಏಕಾದಶಿಯಂದು ಉತ್ತರ ದ್ವಾರದ ಮೂಲಕ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ನಂಬಿಕೆ ಇದೆ. ಹಾಗಾಗಿಯೇ ಎಲ್ಲಾ ದೇವಸ್ಥಾನಗಳಲ್ಲಿ ಉತ್ತರ ದ್ವಾರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಎಂಸಿಸಿ ‘ಬಿ’ ಬ್ಲಾಕ್‌ನ ದೇವಾಲಯದಲ್ಲಿ ಬೆಳಿಗ್ಗೆ 6ರಿಂದ ರಿಂದ ರಾತ್ರಿ 10ರವರೆಗೆ ಸ್ವಾಮಿಯ ಅಖಂಡ ದರ್ಶನ ನಡೆಯಿತು. ಸ್ವಾಮಿಯ ದರ್ಶನ ಪಡೆಯಲು ಜನ ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ಬಂದು ನಿಂತಿದ್ದರು. ಮಧ್ಯಾಹ್ನದ ಹೊತ್ತಿಗೆ ಭಕ್ತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ದೇವರ ದರ್ಶನ ಪಡೆದಿದ್ದು ವಿಶೇಷ.

‘ಭಾನುವಾರದಿಂದಲೇ ದೇವರಿಗೆ ಅಲಂಕಾರ ಮಾಡಿದ್ದು, ಸೋಮವಾರ ಮುಂಜಾನೆ 4ರಿಂದ 6ಗಂಟೆಯವರೆಗೆ ಮಹಾಮಂಗಳಾರತಿ ನಡೆಯಿತು. ಇದಲ್ಲದೇ ಮಾಹಾಸಂಕಲ್ಪ, ವಿಷ್ಣು ಸಹಸ್ರನಾಮ, ಗೋವಿಂದ ನಾಮಾವಳಿ, ಮಹಾನೈವೇದ್ಯ ನಡೆದವು. ಆಂಡಾಳ್ ತಿರುಪ್ಪಾವೈ ಪಠಣ ಮಾಡಲಾಯಿತು. 30 ದಿನಗಳಿಂದ ಇದನ್ನು ಪಠಿಸಲಾಯಿತು’ ಎಂದು ದೇವಾಲಯದ ಟ್ರಸ್ಟಿ ಎಂ.ಎನ್.ರಾಮಮೋಹನ್ ಹಾಗೂ ಮಾಲಿನಿ ರಾಮಮೋಹನ್ ತಿಳಿಸಿದರು.

ಸ್ವಾಮಿಯ ದರ್ಶನ ಪಡೆದ ಬಳಿಕ ಉತ್ತರ ದಿಕ್ಕಿನಲ್ಲಿ ತೆರೆದಿದ್ದ ವೈಕುಂಠ ಪ್ರವೇಶ ದ್ವಾರದಲ್ಲಿ ಭಕ್ತರು ಹೊರ ಹೋಗುತ್ತಿದ್ದರು. ವೈಕುಂಠ ಪ್ರವೇಶ ದ್ವಾರದಲ್ಲಿ ಭೂದೇವಿ, ಶ್ರೀದೇವಿಯ ಜೊತೆಗೆ ತಿರುಪತಿಯ ಶ್ರೀನಿವಾಸನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ತೊಟ್ಟಿಲನ್ನು ಭಕ್ತರು ತೂಗಿ ಭಕ್ತಿ ಸಮರ್ಪಿಸಿದರು. ಈ ಹಿನ್ನೆಲೆಯಲ್ಲಿ ಉತ್ತರ ದಿಕ್ಕಿನಲ್ಲಿ ತೆರೆದಿದ್ದ ‘ವೈಕುಂಠ ದ್ವಾರ’ವನ್ನು ಪ್ರವೇಶಿಸುವ ಮೂಲಕ ಭಕ್ತರು ಪುನೀತ ಭಾವದಲ್ಲಿ ತೇಲಿದರು. ತೀರ್ಥ–ಪ್ರಸಾದವನ್ನು ಸ್ವೀಕರಿಸಿದರು. ಕೇಸರಿಬಾತ್, ಸಜ್ಜಿಗೆ ಹಾಗೂ ಲಡ್ಡುಗಳನ್ನು ವಿತರಿಸಲಾಯಿತು.

ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲೇ ವೆಂಕಟೇಶ್ವರಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ ನಡೆಸಲಾಯಿತು. ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆದರು. ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೂ ಸ್ವಾಮಿಯ ಅಖಂಡ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೇಸರಿಬಾತ್, ಹಾಲು ಮತ್ತು ಲಡ್ಡುವನ್ನು ಪ್ರಸಾದವಾಗಿ ನೀಡಲಾಯಿತು’ ಎಂದು ಶ್ರೀ ವೆಂಕಟೇಶ್ವರ ಸ್ವಾಮಿ ಸೇವಾ ಸಮಿತಿಯ ಕುಮಾರ್ ತಿಳಿಸಿದರು.

ಆವರಗೆರೆಯ ಆರ್.ಜಿ.ಎಸ್. ನಗರದದ ಶ್ರೀನಿವಾಸ ಮಂದಿರದಲ್ಲಿ ಅಖಂಡ ದರ್ಶನ, ವೈಕುಂಠ ಏಕಾದಶಿಯ ವಿಶೇಷ ಪೂಜೆ ನೆರವೇರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT