ದಾವಣಗೆರೆ: ವೀರಶೈವ ಪಂಚಪೀಠಗಳ ಪೀಠಾಧೀಶ್ವರರು 16 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಭಕ್ತರಿಗೆ ದರ್ಶನ ನೀಡಿದರು. ಭಿನ್ನಾಭಿಪ್ರಾಯ ಮರೆತು ಒಂದೆಡೆ ಸೇರಿದ ಈ ಅಪರೂಪದ ಸಮಾಗಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ಎರಡು ದಿನ ಹಮ್ಮಿಕೊಂಡಿರುವ ವೀರಶೈವ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗಕ್ಕೆ ಸೋಮವಾರ ಚಾಲನೆ ಸಿಕ್ಕಿತು. ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಉಜ್ಜಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಹಾಗೂ ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮ್ಮೇಳನ ಆರಂಭವಾಯಿತು.

ಪ್ರಸ್ತಾವಿಕವಾಗಿ ಮಾತನಾಡಿದ ಗಣಿ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ‘ಮನುಕುಲಕ್ಕೆ ಧರ್ಮ ದೀಕ್ಷೆ ನೀಡಿದ್ದು ವೀರಶೈವ ಪರಂಪರೆ. ದೇಶದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಜನಸಂಖ್ಯೆ ಇದೆ. ಒಳಪಂಗಡ ಬಿಟ್ಟು, ಭಿನ್ನತೆ ಮರೆತು ಒಗ್ಗೂಡುವ ಅಗತ್ಯವಿದೆ. ಸಂಘಟಿತರಾಗಲು ಕಾಲವೂ ಕೂಡಿಬಂದಿದೆ. ರಾಷ್ಟ್ರದ ಎಲ್ಲೆಡೆ ಇರುವ ವೀರಶೈವ ಲಿಂಗಾಯತರು ಮಹಾಸಭಾ ವೇದಿಕೆಗೆ ಬರಬೇಕು’ ಎಂದು ಮನವಿ ಮಾಡಿದರು.

‘ಮಹಾರಾಷ್ಟ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವು ರಾಜ್ಯಗಳಿಂದ ಮಠಾಧೀಶರು ಶೃಂಗಕ್ಕೆ ಆಗಮಿಸಿದ್ದಾರೆ. ಪಂಚಪೀಠಾಧೀಶ್ವರರನ್ನು ಒಗ್ಗೂಡಿಸುವುದು ಶಾಮನೂರು ಶಿವಶಂಕರಪ್ಪ ಅವರ ಹಲವು ವರ್ಷಗಳ ಬಯಕೆಯಾಗಿತ್ತು. ಈಗ ಇದಕ್ಕೆ ಫಲ ಸಿಕ್ಕಿದೆ. ಪಂಚಪೀಠದ ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ’ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ‘ಇದೊಂದು ಐತಿಹಾಸಿಕ ದಿನ. ಕೋಟ್ಯಂತರ ಭಕ್ತರ ಬಯಕೆ ಈಡೇರಿದ ಕ್ಷಣ. ಧರ್ಮದ ಕಳಶಪ್ರಾಯರಾದ ಪಂಚಪೀಠಾಧೀಶ್ವರು 16 ವರ್ಷಗಳ ಬಳಕ ಒಂದೇ ವೇದಿಕೆಯಲ್ಲಿ ದರ್ಶನ ನೀಡುತ್ತಿದ್ದಾರೆ. ಇದು ಸಮುದಾಯದ ಇತಿಹಾಸದಲ್ಲಿ ಸುದಿನ. ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಪಾತ್ರ ದೊಡ್ಡದು’ ಎಂದರು.

‘ಸಮುದಾಯವನ್ನು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯತ್ತ ಕರೆದೊಯ್ಯುವ ಹಾಗೂ ಮುಂದಿನ ಪೀಳಗೆಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಇದೊಂದು ವೇದಿಕೆ ಆಗಬೇಕು. ಗುರು, ವಿರಕ್ತ ಹಾಗೂ ಶರಣ ಪರಂಪರೆ ಒಗ್ಗೂಡಿಸುವ ಸಂಕಲ್ಪವನ್ನು ಮಹಾಸಭಾ ಮಾಡಿದೆ’ ಎಂದು ಹೇಳಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ, ‘ಎಲ್ಲರನ್ನು ಒಳಗೊಂಡು ಸಮಾಜ ಮುನ್ನಡೆಸಿದ ಶ್ರೇಯಸ್ಸು ವೀರಶೈವ ಲಿಂಗಾಯತ ಧರ್ಮಕ್ಕೆ ಸೇರುತ್ತದೆ. ವೀರಶೈವ ಲಿಂಗಾಯತ ಮಠಗಳು ಧರ್ಮ ಪ್ರಚಾರದ ಜೊತೆಗೆ ಸಾಮಾಜಿಕ ಸೇವೆ, ಅನ್ನ ಮತ್ತು ಜ್ಞಾನ ದಾಸೋಹ ಮಾಡಿವೆ. ಧಾರ್ಮಿಕ ಸಂಸ್ಕಾರ ನೀಡಿವೆ. ಅಲ್ಪಸಂಖ್ಯಾತರನ್ನೂ ಒಳಗೊಂಡು ಎಲ್ಲರಿಗೂ ಶಿಕ್ಷಣ ನೀಡಿವೆ. ಕರುನಾಡಿನ ಈ ಅಭಿವೃದ್ಧಿಗೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ’ ಎಂದು ಹೇಳಿದರು.

‘ಸಮಾಜ ಸಂಘಟಿತ ಆದಾಗ ಮಾತ್ರ ಶಕ್ತಿ ಬರುತ್ತದೆ. ವಿಘಟನೆಯಿಂದ ಒಗ್ಗಟ್ಟಿನತ್ತ ಹೋಗುವ ಅಗತ್ಯವಿದೆ. ವೀರಶೈವ ಲಿಂಗಾಯತ ಸಮನಾರ್ಥಕ ಪದಗಳು. ಗ್ರಂಥದಲ್ಲಿ ವೀರಶೈವ ಹಾಗೂ ರೂಢಿಯಲ್ಲಿ ಲಿಂಗಾಯತ ಪದಗಳಿವೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಎಲ್ಲರನ್ನೂ ಒಂದೆಡೆ ತರುವ ಪ್ರಯತ್ನ ನಡೆಯುತ್ತಿದೆ. ಅಭಿಪ್ರಾಯ ಭೇದ ಮರೆತು ಲೋಪದೋಷ, ದೌರ್ಬಲ್ಯ ಬಿಟ್ಟು ಒಗ್ಗೂಡಿದರೆ ಇಡೀ ದೇಶ ನಮ್ಮತ್ತ ನೋಡುತ್ತದೆ’ ಎಂದರು.

‘ಜಾತಿ ಜನಗಣತಿಯಲ್ಲಿ ಆಗಿರುವ ಲೋಪದೋಷದಲ್ಲಿ ಸರ್ಕಾರದ ತಪ್ಪಿಲ್ಲ. ಗಣತಿಯಲ್ಲಿ ಯಾವ ಹೆಸರು ಬರೆಸಬೇಕು ಎಂಬ ಕುರಿತು ತೀರ್ಮಾನ ಕೈಗೊಳ್ಳಬೇಕು. ಗಣತಿಯಲ್ಲಿ ಜಾತಿ ಒಗ್ಗೂಡಿದರೆ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ಬರಲಿದ್ದೇವೆ. ಎಲ್ಲ ಪಕ್ಷದ ರಾಜಕೀಯ ನಾಯಕರ ಸಹಕಾರ ಬೇಕು. ಆಗ ಸಮುದಾಯದ ಗತವೈಭವ ಮರಳಲಿದೆ’ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಜಗದೀಶ ಶೆಟ್ಟರ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ವಿಜಯಾನಂದ ಕಾಶಪ್ಪನವರ್, ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.