ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ: 'ಪುರೋಹಿತರು, ಅರ್ಚಕರಿಗೆ ಧರ್ಮಗುರುಗಳ ಸ್ಥಾನ'

ಹೊನ್ನಾಳಿಯಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಪ್ರಥಮ ಅಧಿವೇಶನ
Last Updated 3 ಫೆಬ್ರುವರಿ 2021, 3:11 IST
ಅಕ್ಷರ ಗಾತ್ರ

ಹೊನ್ನಾಳಿ: ‘ನಮಗೆ ಮಾರ್ಗದರ್ಶನ ನೀಡುವ ಧರ್ಮಗುರುಗಳನ್ನು ಯಾವ ಭಾವನೆಯಿಂದ ನೋಡುತ್ತೇವೋ ಅದೇ ಭಾವನೆಯಿಂದ ಪುರೋಹಿತರು-ಅರ್ಚಕರನ್ನೂ ನೋಡುತ್ತೇವೆ. ಸಮಾಜದಲ್ಲಿನ ಎಲ್ಲ ಕಾರ್ಯಗಳಿಗೂ ಪುರೋಹಿತರು ಬೇಕು. ಇದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಮಂಗಳವಾರ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಪ್ರಥಮ ಅಧಿವೇಶನ ಹಾಗೂ ವೀರಶೈವ ಶೋಡಷ ಸಂಸ್ಕಾರಗಳ ಬಗೆಗಿನ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಇತ್ತೀಚೆಗೆ ಪುರೋಹಿತರು, ಅರ್ಚಕರಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ದಿನಾಂಕ ಗೊತ್ತುಪಡಿಸುವ ಮೊದಲು ನಾವು ಪುರೋಹಿತರು, ಅರ್ಚಕರ ದಿನಾಂಕಗಳನ್ನು ಪಡೆದುಕೊಳ್ಳುವ ಸ್ಥಿತಿ ಉದ್ಭವಿಸಿದೆ’ ಎಂದರು.

ಅಕ್ಷತೆ ದುರ್ಬಳಕೆ ತಡೆಗಟ್ಟಿ: ‘ವಿವಾಹ ಮತ್ತಿತರ ಸಮಾರಂಭಗಳಲ್ಲಿ ಅಕ್ಷತೆಗೆ ಬಳಸುವ ಅಕ್ಕಿ ಅನಗತ್ಯವಾಗಿ ದುರ್ಬಳಕೆಯಾಗುತ್ತಿದೆ. ವಿವಾಹದ ವೇಳೆ ವಧು-ವರರ ತಲೆಯ ಮೇಲೆ ಹಾಕಬೇಕಾದ ಅಕ್ಕಿಯನ್ನು ಎಲ್ಲೆಂದರಲ್ಲಿ ಬಿಸಾಡಿ ವ್ಯರ್ಥ ಮಾಡಲಾಗುತ್ತಿದೆ. ಇದನ್ನು ನಾವೆಲ್ಲರೂ ತಡೆಗಟ್ಟಬೇಕಿದೆ. ಮುಖ್ಯವಾಗಿ ಪುರೋಹಿತರು, ಅರ್ಚಕರು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಶಾಂತನಗೌಡ ತಿಳಿಸಿದರು.

‘ವೀರಶೈವ ಪುರೋಹಿತರು ತಮ್ಮ ವಿಶಿಷ್ಟ ಶೈಲಿಯ ಪೂಜೆ, ಆಚಾರ, ವಿಚಾರಗಳಿಂದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಜನಮಾನಸದಲ್ಲಿ ಧಾರ್ಮಿಕ ಭಾವನೆ ಬೆಳೆಯಲೂ ಕಾರಣರಾಗಿದ್ದಾರೆ’ ಎಂದು ಬಿಜೆಪಿ ಮುಖಂಡ ಎಂ.ಪಿ.ರಮೇಶ್ ಹೇಳಿದರು.

‘ಪುರೋಹಿತರು, ಅರ್ಚಕರು ತಾವು ಕಲಿತ ಸಂಸ್ಕಾರ, ಧರ್ಮದ ಸಂಸ್ಕೃತಿಯನ್ನು ಸಮಾಜಕ್ಕೆ ಸಲ್ಲಿಸುತ್ತಿದ್ದಾರೆ. ಗೃಹಪ್ರವೇಶ, ಮದುವೆ ಇತರೆ ಸಮಾರಂಭಗಳಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ. ಅವರು ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸಬೇಕು. ಶಾಸಕರು, ಸಚಿವರನ್ನು ಸಂಪರ್ಕಿಸಿ ಮುಖ್ಯಮಂತ್ರಿ ಬಳಿ ನಿಯೋಗ ಹೋಗಿ ಸರ್ಕಾರದ ನೆರವು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ‘ನಾವು ಉತ್ತಮವಾಗಿ ಕಾರ್ಯನಿರ್ವಹಿಸಲು ಧಾರ್ಮಿಕ ಗುರುಗಳ ಮಾರ್ಗದರ್ಶನ ಅಗತ್ಯ. ಪೂಜಾ ವಿಧಿ-ವಿಧಾನಗಳು ಯಶಸ್ವಿಯಾಗಿ ನಡೆಯಬೇಕಾದರೆ ಪುರೋಹಿತರು ಬೇಕು. ಮೋಕ್ಷ ಹೊಂದಲು ನಮಗೆ ಧರ್ಮ ರಹದಾರಿ ಒದಗಿಸುತ್ತದೆ. ಆದ್ದರಿಂದ, ನಾವೆಲ್ಲರೂ ಧರ್ಮ ಮಾರ್ಗದಲ್ಲಿ ನಡೆದು ಬದುಕನ್ನು ಅರ್ಥಪೂರ್ಣ ಆಗಿಸಿಕೊಳ್ಳೋಣ’ ಎಂದು ಹೇಳಿದರು.

ರಾಂಪುರ ಬೃಹನ್ಮಠದ ಶಿವಕುಮಾರ ಹಾಲ ಸ್ವಾಮೀಜಿ, ಹೊಟ್ಯಾಪುರ ಹಿರೇಮಠದ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯ ನಿರ್ದೇಶಕ ಎಚ್.ಜಿ. ನಾಗರಾಜ ಶಾಸ್ತ್ರಿ, ರಾಜ್ಯ ಖಜಾಂಚಿ ಕೆ.ಆರ್.ನಗರದ ಕೆ.ಜಿ. ಮಹದೇವಸ್ವಾಮಿ, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ನಿರ್ದೇಶಕಿ ಗೀತಾ ರವೀಂದ್ರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ಪತ್ರಕರ್ತರಾದ ಎಂಪಿಎಂ ವಿಜಯಾನಂದಸ್ವಾಮಿ, ಎಂ.ಎಸ್. ಶಾಸ್ತ್ರಿ ಹೊಳೆಮಠ ಮಾತನಾಡಿದರು.

ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಚನ್ನೇಶ ಶಾಸ್ತ್ರೀ ಮಠದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರುದ್ರಾರಾಧ್ಯ ಶಾಸ್ತ್ರಿ, ಶಿವಲಿಂಗ ಶಾಸ್ತ್ರಿ, ಅನ್ನದಾನಯ್ಯ ಶಾಸ್ತ್ರಿ, ಶಿವಶಂಕರ ಶಾಸ್ತ್ರಿ, ಡಿವೈಎಸ್ಪಿ ಪ್ರಶಾಂತ್ ಎಸ್.ಮುನ್ನೋಳಿ, ಸಿಪಿಐ ಟಿ.ವಿ. ದೇವರಾಜ್, ಪಿಎಸ್‌ಐ ಬಸನಗೌಡ ಬಿರಾದಾರ ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಭಾಗಗಳಿಂದ 350ಕ್ಕೂ ಅಧಿಕ ಸಂಖ್ಯೆಯ ಪುರೋಹಿತರು- ಅರ್ಚಕರು ಭಾಗವಹಿಸಿದ್ದರು.

ಈಚೆಗೆ ಲಿಂಗೈಕ್ಯರಾದ ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅವರ ಸ್ಮರಣಾರ್ಥ ಸಮಾರಂಭ ಉದ್ಘಾಟನೆಗೂ ಮೊದಲು ಒಂದು ನಿಮಿಷ ಮೌನ ಆಚರಿಸಲಾಯಿತು.

ಫೋಟೊ– ಫಜೀತಿ

ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಮದುವೆ ಸಮಾರಂಭಗಳಲ್ಲಿ ಗುಂಪು ಗೂಡಬೇಡಿ, ಸಾಮಾಜಿಕ ಅಂತರ ಪಾಲಿಸಿ ಎಂದು ಸರ್ಕಾರ ಹೇಳುತ್ತದೆ. ಆದರೆ, ಮದುವೆ, ಮತ್ತಿತರ ಸಮಾರಂಭಗಳಲ್ಲಿ ಫೋಟೊ- ವಿಡಿಯೊಗ್ರಫರ್‌ಗಳು ವಧು- ವರರ ಅಕ್ಕ-ಪಕ್ಕದಲ್ಲಿದ್ದವರನ್ನು ‘ಇನ್ನೂ ಸ್ವಲ್ಪ ಹತ್ತಿರ ಬನ್ನಿ’ ಎನ್ನುತ್ತ ಜನರನ್ನು ಗುಂಪು ಗೂಡಿಸುತ್ತಾರೆ. ಕೊನೆಗೆ ವಧು-ವರರೇ ಕಾಣದಂತೆ ಮಾಡುತ್ತಾರೆ. ಮದುವೆ ಆದವರಿಗೆ ತಮ್ಮ ಫೋಟೊಗಳನ್ನೇ ನೋಡಿಕೊಳ್ಳಲು ಸಮಯ ಇರುವುದಿಲ್ಲ. ಇನ್ನು ನಮ್ಮ ಫೋಟೊಗಳನ್ನು ಎಲ್ಲಿ ನೋಡುತ್ತಾರೆ’ ಎಂದು ಡಿ.ಜಿ. ಶಾಂತನಗೌಡ ಹೇಳುತ್ತಿದ್ದಂತೆ ಸಭೆ ನಗೆಗಡಲಲ್ಲಿ ಮುಳುಗಿತು.

ಐದು ಶಾಖೆಗಳನ್ನು ತೆರೆಯಬೇಕು

ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಪ್ರಸ್ತುತ ಸಂಘಟನೆಯ ನಿಟ್ಟಿನಲ್ಲಿ ಉತ್ತಮ ಹೆಜ್ಜೆಗಳನ್ನು ಇಡುತ್ತಿದೆ. ಸದ್ಯಕ್ಕೆ ತುಮಕೂರು ಜಿಲ್ಲಾ ಕೇಂದ್ರದಲ್ಲಿ ರಾಜ್ಯಮಟ್ಟದ ಕಚೇರಿ ಇದೆ. ಮುಂದಿನ ದಿನಗಳಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೊಳ್ಳಬೇಕು. ದೇಶದಾದ್ಯಂತ ವೀರಶೈವ ಧರ್ಮದ ಪಂಚಪೀಠಗಳು ಇರುವ ಹಾಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಐದು ಶಾಖೆಗಳನ್ನು ತೆರೆಯಬೇಕು. ಬಳಿಕ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳನ್ನು ರಚಿಸುವ ಮೂಲಕ ಸಂಘಟನೆಯನ್ನು ಶಕ್ತಿಶಾಲಿಯಾಗಿಸುವ ಮಹತ್ವದ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತ ಹೋರಾಟ ನಡೆಸಬೇಕು ಎಂದು ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT