ಮಂಗಳವಾರ, ಆಗಸ್ಟ್ 16, 2022
21 °C
ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ

ಜ.14ರಿಂದ ವರ್ಚ್ಯುವಲ್ ಹರಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ತಾಲ್ಲೂಕಿನ ಹನಗವಾಡಿ ಗ್ರಾಮದ ಹೊರವಲಯದ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠದಲ್ಲಿ ಜ.14 ಮತ್ತು 15ರಂದು ಸಮಾಜದ ಸಂಘಟನೆ ಹಾಗೂ ಜಾಗೃತಿಗಾಗಿ ‘ಹರಜಾತ್ರೆ’ ಆಯೋಜಿಸಲಾಗಿದೆ ಎಂದು ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ನಡೆದ ಪ್ರಥಮ ಹರಜಾತ್ರೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಈ ಬಾರಿ ಕೋವಿಡ್ ನಿಯಮಗಳ ಅನ್ವಯ ಜಾತ್ರೆ ನಡೆಸಲು ಸಿದ್ಧತೆ ಆರಂಭಿಸಲಾಗಿದೆ’ ಎಂದರು.

ಈ ಬಾರಿ ಜಾತ್ರೆಯನ್ನು ತಂತ್ರಜ್ಞಾನದ ಸಹಕಾರದಿಂದ ವರ್ಚ್ಯುವಲ್ ವಿಧಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಮಾಜದ ಪ್ರತಿ ಭಕ್ತರು ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಜಾತ್ರೆಯಲ್ಲಿ ಮಠದ ಸುತ್ತಲಿನ ಪ್ರದೇಶದಿಂದ 15 ಸಾವಿರಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದೆ ಎಂದರು.

ಜಾತ್ರೆಯಲ್ಲಿ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್, ಕೇಂದ್ರ ಸಮಾಜ ಕಲ್ಯಾಣ ಸಚಿವ ತಾವರ ಚಂದ್‌ ಗೆಹ್ಲೋಟ್ ಭಾಗವಹಿಸಲಿದ್ದಾರೆ. ಜಾತ್ರೆಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಆರೋಗ್ಯ, ಕೃಷಿ ಹಾಗೂ ಯುವ ಸಬಲೀಕರಣದ ಪರಿಕಲ್ಪನೆಯಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. ಮಠದ ಆವರಣದಲ್ಲಿರುವ ಹರದ್ವಾರ ಉದ್ಘಾಟನೆ, ಯೋಗ ವಿಜ್ಞಾನ ಶಿಬಿರ, ಭೂ-ತಪಸ್ವಿ ಸಮಾವೇಶ, ಯುವರತ್ನ ಸಮಾವೇಶ ಮತ್ತು ಸಾಮೂಹಿಕ ಯೋಗ ತರಬೇತಿ ನಡೆಯಲಿದೆ ಎಂದು ತಿಳಿಸಿದರು.

‘ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗಾಗಿ ಅಂದು, ಇಂದು, ಮುಂದು’ ಎಂಬ ವಿಷಯದ ಚರ್ಚೆ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅನೇಕ ಹೆಸರುಗಳಿಂದ ಸಂಭೋಧಿಸಲ್ಪಡುವ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮೈಸೂರು ಭಾಗದಲ್ಲಿ ಸಮಾವೇಶ ನಡೆಸಲು ಚಿಂತನೆ ನಡೆಸಲಾಗುವುದು ಎಂದರು.

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪಂಚಮಸಾಲಿ ಸಮಾಜದವರು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಎಂದು, ಮಲೆನಾಡಿನಲ್ಲಿ ಮಲೆ ಗೌಡರೆಂದು, ಮೈಸೂರು ಭಾಗದಲ್ಲಿ ಗೌಡರೆಂದು ಕರೆಯಲ್ಪಡುತ್ತಾರೆ. ಎಲ್ಲಾ ಭಾಗದ ಸಮಾಜ ಬಾಂಧವರನ್ನು ಒಂದು ಗೂಡಿಸುವ ಅಗತ್ಯವಿದೆ. ಮೈಸೂರು ಭಾಗದಲ್ಲಿ ಸಮಾವೇಶ ಮಾಡಲು ಆಹ್ವಾನ ಬಂದಿದ್ದು, ಶೀಘ್ರ ಆಯೋಜಿಸಲಾಗುವುದು ಎಂದು ತಿಳಿಸಿದರು.

ಹರಜಾತ್ರೆ ಸಮಿತಿ ಅಧ್ಯಕ್ಷ ಬಿ.ಲೋಕೇಶ್, ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಪದಾಧಿಕಾರಿಗಳಾದ ಪಿ.ಡಿ. ಶಿರೂರ್, ಚಂದ್ರಶೇಖರ್ ಪೂಜಾರ್, ಎಚ್.ಪಿ. ಬಾಬಣ್ಣ, ಅಂದನೂರು ಮುರುಗೇಶ್, ರಾಜೂ ಚಿಕ್ಕನಗೌಡ್ರು, ವಾಣಿ ಶಿವಣ್ಣ, ಕರಿಬಸಪ್ಪ ಬಿ. ಗುತ್ತೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.